ಸೂರ‍್ಯ ಗ್ರಹಣ : ನಗರದ ದೇಗುಲಗಳು ಬಂದ್‌

By Kannadaprabha NewsFirst Published Dec 26, 2019, 8:32 AM IST
Highlights

ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬೆಂಗಳೂರಿನ ಬಹುತೇಕ ದೇಗುಲಗಳು ಬಂದ್ ಆಗಿವೆ. ಸಂಜೆ ನಾಲ್ಕು ಗಂಟೆ ನಂತರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. 

ಬೆಂಗಳೂರು [ಡಿ.26]: ‘ಕಂಕಣ ಸೂರ್ಯಗ್ರಹಣ’ದ ಹಿನ್ನೆಲೆಯಲ್ಲಿ  ಬೆಂಗಳೂರಿನ ಬಹುತೇಕ ದೇವಸ್ಥಾನಗಳು ಬಾಗಿಲು ಮುಚ್ಚಿವೆ. ಬೆಳಗ್ಗೆ 7.30ರಿಂದಲೇ ದರ್ಶನಕ್ಕೆ ಅವಕಾಶವಿರುವುದಿಲ್ಲ. ಕೆಲ ದೇವಾಲಯಗಳಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೇರುವುದಿಲ್ಲ. ಸಂಜೆ 4ರ ನಂತರ ಭಕ್ತರಿಗೆ ದೇವಸ್ಥಾನಗಳಿಗೆ ಪ್ರವೇಶ ಕಲ್ಪಿಸಲಾಗಿದೆ.

ಬಸವನಗುಡಿಯ ದೊಡ್ಡ ಗಣೇಶ, ಕೆಂಪೇಗೌಡನಗರದ ಗವಿಗಂಗಾಧರೇಶ್ವರ ಸ್ವಾಮಿ, ಮಲ್ಲೇಶ್ವರದ ಕಾಡು ಮಲ್ಲೇಶ್ವರ, ಬನಶಂಕರಿಯ ಶ್ರೀ ಬನಶಂಕರಿ ಅಮ್ಮನವರ ದೇವಾಲಯ, ಚಾಮರಾಜಪೇಟೆಯ ಶ್ರೀ ಕೋಟೆ ವೆಂಕಟೇಶ್ವರ ಸ್ವಾಮಿ ದೇವಾಲಯ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಇಸ್ಕಾನ್‌ ದೇವಾಲಯ, ಕೋಟೆ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ಗ್ರಹಣ ಕಾಲದಲ್ಲಿ ಭಕ್ತರಿಗೆ ದೇವರ ದರ್ಶನ ಇರುವುದಿಲ್ಲ.

 ದೇವಸ್ಥಾನದ ಬಾಗಿಲು ತೆರೆದಿದ್ದರೂ ಶಾಂತಿ ಹೋಮ, ಗ್ರಹದೋಷ ನಿವಾರಣಾ ಹೋಮಗಳನ್ನು ನೆರವೇರಿಸಲಾಗುವುದು. ಗ್ರಹಣದ ವೇಳೆ ದೇವರ ಮೂರ್ತಿ ಹಾಗೂ ಎಲ್ಲ ಆಹಾರ ಸಾಮಾಗ್ರಿಗಳಿಗೂ ಗರಿಕೆ, ಪತ್ರೆ ಹಾಕಿಡಲಾಗುತ್ತದೆ. ಮಧ್ಯಾಹ್ನ 12ಕ್ಕೆ ದೇವಾಲಯ, ಮೂರ್ತಿ ಹಾಗೂ ಗೋಪುರ ಎಲ್ಲವನ್ನೂ ಶುದ್ಧೀಕರಿಸಲಾಗುವುದು. ಸಂಜೆ 4ಕ್ಕೆ ಮತ್ತೆ ದೇವಾಲಯಗಳನ್ನು ತೆರೆಯಲಾಗುತ್ತದೆ ಎಂದು ಅರ್ಚಕರು ತಿಳಿಸಿದ್ದಾರೆ.

ದೇವಸ್ಥಾನಗಳಲ್ಲಿ ಗ್ರಹಣ ಕಾಲದಲ್ಲಿ ದೇವರ ಮೂರ್ತಿಗಳನ್ನು ಜಲದಿಂದ ತೊಳೆಯುವ, ಶುದ್ಧಿಗೊಳಿಸುವ, ಸಂಪ್ರೋಕ್ಷಣೆ ಮತ್ತಿತರ ಕಾರ್ಯಗಳನ್ನು ಮಾಡುತ್ತಾರೆ. ಹಾಗಾಗಿ ಶಾಸ್ತೊ್ರೕಕ್ತ ರೀತಿಯಲ್ಲಿ ನಡೆಯುವ ಕಾರ್ಯಗಳಿಗೆ ವಿಘ್ನ ಬರಬಾರದು ಎನ್ನುವ ಕಾರಣಕ್ಕೆ ಈ ಸಂದರ್ಭದಲ್ಲಿ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ.

ಕಾಟನ್ ಕ್ಯಾಂಡಿ ಪ್ಲ್ಯಾನೆಟ್ಸ್: ತಾಕತ್ತಿಲ್ಲದ ಗುರು ಗಾತ್ರದ ಗ್ರಹಗಳು..

ಯಶವಂತಪುರದ ಮಹಾಯಾಗ ಕ್ಷೇತ್ರ ಗಾಯತ್ರೀ ದೇವಸ್ಥಾನದಲ್ಲಿ ಬೆಳಗ್ಗೆ 8.7ರಿಂದ 11.3ರವರೆಗೆ ಸಂಭವಿಸಲಿರುವ ಕೇತುಗ್ರಸ್ತ ಸೂರ್ಯ ಗ್ರಹಣ ಪ್ರಯುಕ್ತ ವಿಶೇಷ ಶಾಂತಿ ಹೋಮ ಏರ್ಪಡಿಸಲಾಗಿದೆ. ಮೂಲ, ಪೂರ್ವಾಷಾಢ, ಉತ್ತರಾಷಾಢ, ವಿಶಾಖ, ಅನೂರಾಧ, ಜ್ಯೇಷ್ಠ, ಶ್ರವಣ, ಧನಿಷ್ಠ, ಕೃತ್ತಿಕಾ, ರೋಹಿಣಿ, ಮೃಗಶಿರ, ಪುನರ್ವಸು, ಪುಷ್ಯ, ಆಶ್ಲೇಷ, ಧನಸ್ಸು, ಮಕರ, ವೃಶ್ಚಿಕ, ವೃಷಭ ಹಾಗೂ ಕಟಕ ರಾಶಿಯಲ್ಲಿ ಜನಿಸಿದವರು ಸೂರ್ಯಗ್ರಹಣ ಶಾಂತಿ ಹೋಮ ಮಾಡಿಸಬಹುದು.

ಬನಶಂಕರಿ ದೇವಾಲಯದಲ್ಲಿ ಗ್ರಹಣದ ಹಿಂದಿನ ದಿನವಾದ ಬುಧವಾರ ರಾತ್ರಿ 8ಕ್ಕೆ ಬಾಗಿಲು ಮುಚ್ಚಲಾಗುವುದು. ಮರುದಿನ ಅಂದರೆ ಗುರುವಾರ ಬೆಳಗ್ಗೆ 11.30ಕ್ಕೆ ತೆರೆಯಲಾಗುವುದು. ಮಧ್ಯಾಹ್ನ 12ರಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ದೇವಸ್ಥಾನಗಳು ಬೆಳಗ್ಗೆ ಬಾಗಿಲು ಮುಚ್ಚುವ ಸಮಯ ಸಂಜೆ ಆರಂಭ

ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ 7: 30 4:00

ಕಾಡುಮಲ್ಲೇಶ್ವರ ದೇವಾಲಯ 7:30 5:00

ನರಸಿಂಹ ಸ್ವಾಮಿ ದೇವಸ್ಥಾನ 7:15 4:30

ಗಂಗಮ್ಮ ದೇವಿ ದೇವಸ್ಥಾನ 7:00 4:00

ದೊಡ್ಡ ಗಣಪತಿ 7:30 5:00

click me!