ತಿಂಗಳಾಂತ್ಯಕ್ಕೆ ಹೀಲಲಿಗೆ-ರಾಜಾನುಕುಂಟೆ ಮಾರ್ಗದ ಸಬ್‌ಅರ್ಬನ್‌ ರೈಲ್ವೆ ಕೆಲಸ ಶುರು

By Kannadaprabha News  |  First Published Jan 2, 2024, 11:25 AM IST

ಉಪನಗರ ರೈಲ್ವೆ ಯೋಜನೆಯ ನಾಲ್ಕನೇ ಕಾರಿಡಾರ್‌ ‘ಕನಕ ಮಾರ್ಗ’ದ ಟೆಂಡರನ್ನು ಲಾರ್ಸೆನ್‌ ಆ್ಯಂಡ್‌ ಟರ್ಬೊ  ಕಂಪನಿ ಪಡೆದಿದೆ. ಜನವರಿ ಅಂತ್ಯದಿಂದ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದ್ದು, 2026ರ ಜೂನ್‌ ವೇಳೆಗೆ ಕೆಲಸ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.


ಬೆಂಗಳೂರು (ಜ.2): ಉಪನಗರ ರೈಲ್ವೆ ಯೋಜನೆಯ ನಾಲ್ಕನೇ ಕಾರಿಡಾರ್‌ ‘ಕನಕ ಮಾರ್ಗ’ದ ಟೆಂಡರನ್ನು ಲಾರ್ಸೆನ್‌ ಆ್ಯಂಡ್‌ ಟರ್ಬೊ (ಎಲ್ ಆ್ಯಂಡ್ ಟಿ) ಕಂಪನಿ ಪಡೆದಿದೆ. ಜನವರಿ ಅಂತ್ಯದಿಂದ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದ್ದು, 2026ರ ಜೂನ್‌ ವೇಳೆಗೆ ಕೆಲಸ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಹೀಲಲಿಗೆ-ರಾಜಾನುಕುಂಟೆ ನಡುವೆ (46.88 ಕಿ.ಮೀ.) ಸಂಪರ್ಕ ಕಲ್ಪಿಸುವ ಉಪನಗರ ರೈಲ್ವೆ ಮಾರ್ಗ ಇದಾಗಿದ್ದು, ಮುಂದಿನ ಎರಡೂವರೆ ವರ್ಷದಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದು ಕರ್ನಾಟಕ ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ತಿಳಿಸಿದೆ.

Latest Videos

undefined

ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯಲ್ಲಿ 400 ಹುದ್ದೆಗಳಿಗೆ ನೇಮಕಾತಿ

ಈ ಮಾರ್ಗದ ಸಿವಿಲ್ ಕಾಮಗಾರಿಗೆ ಎಲ್ ಆ್ಯಂಡ್ ಟಿ ಕಂಪನಿ ₹1021 ಕೋಟಿ ಬಿಡ್‌ ಸಲ್ಲಿಸಿತ್ತು. ಇದೀಗ ₹1040.51 ಕೋಟಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. 46.88 ಕಿ.ಮೀ. ಉದ್ದದ ‘ಕನಕ’ ಕಾರಿಡಾರ್‌ನಲ್ಲಿ 8.96 ಕಿ.ಮೀ. ವಯಡಕ್ಟ್ (ಎತ್ತರಿಸಿದ ಮಾರ್ಗ) ಹಾಗೂ 37.92 ಕಿ.ಮೀ. ನೆಲಹಂತದ ಮಾರ್ಗ ಒಳಗೊಂಡಿದೆ.

ಭೂಮಿ ಹಸ್ತಾಂತರ: ಈ ಮಾರ್ಗದ ಕಾಮಗಾರಿಗೆ ಕೆ-ರೈಡ್‌, ರೈಲ್ವೆ ಇಲಾಖೆಗೆ 194.07 ಎಕರೆ ಭೂಮಿಗೆ ಬೇಡಿಕೆ ಇಟ್ಟಿತ್ತು. ಇಷ್ಟು ಭೂಮಿ ನೀಡಲು ಇಲಾಖೆ ನಿರಾಕರಿಸಿದ ಹಿನ್ನಲೆಯಲ್ಲಿ ಕೆ-ರೈಡ್ ಮತ್ತೊಮ್ಮೆ 115.472 ಎಕರೆ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ರೈಲ್ವೆ ಇಲಾಖೆ ಒಪ್ಪಿದೆ. ಭೂಮಿಯ ಸರ್ವೇ ಕಾರ್ಯ ಆರಂಭವಾಗಿದೆ. ಕೆ-ರೈಡ್‌ನಿಂದ ಎಕರೆಗೆ ₹1 ಶುಲ್ಕ ಪಡೆದು ಭೂಮಿ ನೀಡಲಾಗುವುದು. ಇನ್ನೂ ಹಳಿ ಜೋಡಣೆ ವಿನ್ಯಾಸ ಮಂಜೂರಾತಿ ಆಗಿಲ್ಲ. ಇದಾದ ಬಳಿಕ ಭೂಮಿ ಹಸ್ತಾಂತರ ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಕರಾವಳಿಯ ಮೊದಲ ಮಂಗಳೂರು-ಮಡ್ಗಾಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ರೈಲು ವೇಳಾಪಟ್ಟಿ, ಟಿಕೆಟ್‌ ದರ ಇಲ್ಲಿದೆ

ಎಲ್ ಆ್ಯಂಡ್ ಟಿಗೆ ಟೆಂಡರ್: ಈಗಾಗಲೇ ಎಲ್‌ ಆ್ಯಂಡ್‌ ಟಿ ಚಿಕ್ಕಬಾಣಾವರ-ಬೈಯಪ್ಪನಹಳ್ಳಿ ‘ಮಲ್ಲಿಗೆ ಮಾರ್ಗ’ (25.2 ಕಿ.ಮೀ.) ಕಾಮಗಾರಿ ಟೆಂಡರ್‌ ಪಡೆದು ಕಳೆದ ವರ್ಷ ಡಿಸೆಂಬರ್‌ನಿಂದ ಕಾಮಗಾರಿ ಆರಂಭಿಸಿದೆ. ಈ ಮೂಲಕ ಉಪನಗರ ರೈಲ್ವೆ ಯೋಜನೆಯ ಶೇ.50ರಷ್ಟು (72.8 ಕಿ.ಮೀ.) ಕಾಮಗಾರಿಯನ್ನು ಎಲ್‌ ಆ್ಯಂಡ್‌ ಟಿ ನಡೆಸಲಿದೆ. ಈ ಯೋಜನೆಗಾಗಿ ಜರ್ಮನಿಯ ಕೆಎಫ್‌ಡಬ್ಲ್ಯು ಜೊತೆ ₹4500 ಕೋಟಿ ಸಾಲಕ್ಕೆ ಕೆ-ರೈಡ್‌ ಒಪ್ಪಂದ ಮಾಡಿಕೊಂಡಿದ್ದು, ಮುಂದುವರಿದು 2024ರ ಮಾರ್ಚ್‌ನಲ್ಲಿ ಯುರೋಪಿಯನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ (ಇಐಬಿ) ₹2700 ಕೋಟಿ ಸಾಲಕ್ಕೆ ಒಪ್ಪಂದ ಏರ್ಪಡುವ ನಿರೀಕ್ಷೆಯಿದೆ ಎಂದು ಕೆ-ರೈಡ್‌ ತಿಳಿಸಿದೆ.

ಎಲ್ಲೆಲ್ಲಿ ನಿಲ್ದಾಣ?

ಕನಕ ಮಾರ್ಗದಲ್ಲಿ ಎತ್ತರಿಸಿದ (ಎಲಿವೇಟೆಡ್) 2 ನಿಲ್ದಾಣಗಳು ಸೇರಿದಂತೆ ಒಟ್ಟು 19 ರೈಲು ನಿಲ್ದಾಣ ನಿರ್ಮಾಣ ಆಗಲಿದೆ. ರಾಜಾನುಕುಂಟೆ, ಮುದ್ದನಹಳ್ಳಿ, ಯಲಹಂಕ (ಎಲಿವೇಟೆಡ್ ಇಂಟರ್‌ಚೇಂಜ್), ಜಕ್ಕೂರು, ಹೆಗಡೆ ನಗರ, ಥಣಿಸಂದ್ರ, ಹೆಣ್ಣೂರು, ಹೊರಮಾವು, ಚನ್ನಸಂದ್ರ, ಬೆನ್ನಿಗಾನಹಳ್ಳಿ (ಇಂಟರ್‌ ಚೇಂಜ್), ಕಗ್ಗದಾಸಪುರ, ಮಾರತ್‌ಹಳ್ಳಿ (ಎಲಿವೇಟೆಡ್), ಬೆಳ್ಳಂದೂರು ರಸ್ತೆ, ಕಾರ್ಮೆಲರಾಂ, ಅಂಬೇಡ್ಕರ್‌ನಗರ, ಹುಸ್ಕೂರು, ಸಿಂಗೇನಅಗ್ರಹಾರ, ಬೊಮ್ಮಸಂದ್ರ ಮತ್ತು ಹೀಲಲಿಗೆಯಲ್ಲಿ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಥಣಿಸಂದ್ರದಲ್ಲಿ ಡಿಪೋ ನಿರ್ಮಾಣವಾಗಲಿದೆ.

2 ಡಬಲ್‌ ಡೆಕ್ಕರ್‌ ಮೇಲ್ಸೇತುವೆ

ಗುತ್ತಿಗೆಯಲ್ಲಿ ಯಲಹಂಕದ ಬಳಿ 1.4 ಕಿ.ಮೀ. ಮೊದಲ ಕಾರಿಡಾರ್‌ ‘ಸಂಪಿಗೆ’ (ಕೆಎಸ್‌ಆರ್‌ ಬೆಂಗಳೂರು-ದೇವನಹಳ್ಳಿ) ಹಾಗೂ ‘ಕನಕ’ ಕಾರಿಡಾರ್‌ಗಾಗಿ ಡಬ್ಬಲ್‌ ಡೆಕ್ಕರ್‌ ಮೇಲ್ಸೇತುವೆ ನಿರ್ಮಾಣವಾಗಲಿದೆ. ಅದೇ ರೀತಿ ಬೆನ್ನಿಗಾನಹಳ್ಳಿಯ ಬಳಿ 500 ಮೀ. ಉದ್ದದ ಇನ್ನೊಂದು ಡಬ್ಬಲ್‌ ಡೆಕ್ಕರ್ ಮೇಲ್ಸೇತುವೆ ನಿರ್ಮಾಣವಾಗಲಿದ್ದು, ಇಲ್ಲಿ ಮೇಲ್ಭಾಗದಲ್ಲಿ ‘ನಮ್ಮ ಮೆಟ್ರೋ ರೈಲು, ಕೆಳಭಾಗದಲ್ಲಿ ಉಪನಗರ ರೈಲು ಸಂಚರಿಸಲಿದ್ದು, ಇದು ಭಾರತದಲ್ಲೇ ಮೊದಲ ಬಾರಿಗೆ ಉಪನಗರ ಹಾಗೂ ಮೆಟ್ರೋ ರೈಲುಗಳು ಹಂಚಿಕೊಂಡಿರುವ ಡಬ್ಬಲ್‌ ಡೆಕ್ಕರ್‌ ಎನ್ನಿಸಿಕೊಳ್ಳಲಿದೆ.

ಚಿತ್ರ ಶೀರ್ಷಿಕೆಗಳು:

1.ಯಲಹಂಕದಲ್ಲಿ ‘ಸಂಪಿಗೆ’ ಹಾಗೂ ‘ಕನಕ’ ಕಾರಿಡಾರ್‌ಗಾಗಿ ನಿರ್ಮಾಣ ಆಗಲಿರುವ ಡಬ್ಬಲ್‌ ಡೆಕ್ಕರ್‌.

2.ಬೆನ್ನಿಗಾನಹಳ್ಳಿಯ ಬಳಿ ‘ನಮ್ಮ ಮೆಟ್ರೋ’ ಹಾಗೂ ‘ಉಪನಗರ ರೈಲ್ವೆ’ಗಾಗಿ ನಿರ್ಮಾಣ ಆಗಲಿರುವ ಡಬ್ಬಲ್‌ ಡೆಕ್ಕರ್.

click me!