ಬೆಂಗಳೂರು: ಯಾರೂ ಊಹಿಸದ ವಿಚಿತ್ರ ಘಟನೆ, ಶಿಕ್ಷಕಿ ಜತೆ Online ಸ್ನೇಹ, ಕ್ಯಾನ್ಸರ್ ನಾಟಕ, ಕೊನೆಯ ಆಸೆ ದೈಹಿಕ ಸಂಪರ್ಕ!

Published : Apr 14, 2026, 11:06 AM IST
Harassment

ಸಾರಾಂಶ

ಬೆಂಗಳೂರಿನ ಶಿಕ್ಷಕಿಯೊಬ್ಬರಿಗೆ ಕ್ಯಾನ್ಸರ್ ರೋಗಿ ಎಂದು ನಂಬಿಸಿ, ನಗ್ನ ವಿಡಿಯೋ ಪಡೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನನ್ನು ಶಿಕ್ಷಕಿ ಮತ್ತು ಆಕೆಯ ಸ್ನೇಹಿತರು ಬಲೆಗೆ ಬೀಳಿಸಿದ್ದಾರೆ. ಪೊಲೀಸರಿಗೆ ಒಪ್ಪಿಸುವ ವೇಳೆ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಮತ್ತೊಂದು ಆತಂಕಕಾರಿ ಮಾತ್ರವಲ್ಲ ಯಾರೂ ಊಹಿಸದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಎಲೆಕ್ಟ್ರಾನಿಕ್ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ಶಿಕ್ಷಕಿಯೊಬ್ಬರನ್ನು ಗುರಿಯಾಗಿಸಿಕೊಂಡು ವಂಚನೆ, ಬ್ಲ್ಯಾಕ್‌ಮೇಲ್ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಒಂದು ವರ್ಷದ ಹಿಂದೆ ಪುಟ್ಟಪರ್ತಿ ಮೂಲದ ಅರ್ಷಾದ್ ಎಂಬಾತನು ಬೆಂಗಳೂರಿನ ಶಿಕ್ಷಕಿಯೊಬ್ಬರಿಗೆ ವಾಟ್ಸಾಪ್ ಮೂಲಕ ಅನಾಮಧೇಯ ಸಂದೇಶ ಕಳುಹಿಸಿದ್ದಾನೆ. “ನಾನು ನಿನ್ನ ಹಳೆಯ ಕ್ಲಾಸ್‌ಮೇಟ್” ಎಂದು ಪರಿಚಯಿಸಿಕೊಂಡ ಆತ, ಆರಂಭದಲ್ಲಿ ಸ್ನೇಹಪೂರ್ಣವಾಗಿ ಮಾತುಕತೆ ನಡೆಸಿ, ಶಿಕ್ಷಕಿಯ ವಿಶ್ವಾಸವನ್ನು ಗಳಿಸಿದ್ದಾನೆ. ಈ ಮಾತುಗಳನ್ನು ನಂಬಿದ ಶಿಕ್ಷಕಿ ಸಹ ಅವನೊಂದಿಗೆ ಚಾಟ್ ಮುಂದುವರೆಸಿದ್ದರು.

ಕೆಲ ದಿನಗಳ ಬಳಿಕ, ತಾನು ಕ್ಯಾನ್ಸರ್‌ ರೋಗಿ ಎಂದು ಹೇಳಿಕೊಂಡ ಆರೋಪಿ, ಶಿಕ್ಷಕಿಯ ಸಹಾನುಭೂತಿಯನ್ನು ಪಡೆದುಕೊಂಡಿದ್ದಾನೆ. ಈ ನೆಪದಲ್ಲಿ ಅವಳಿಂದ ಆಗಾಗ ಹಣ ಸಹಾಯ ಪಡೆಯಲು ಆರಂಭಿಸಿದ್ದಾನೆ. ಹಂತ ಹಂತವಾಗಿ ಆಕೆಯ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಳ್ಳಲು ಮಾಸ್ಟರ್‌ ಪ್ಲಾನ್ ರೂಪಿಸಿದ್ದಾನೆ.

ನನ್ನ ಕೊನೆಯ ಆಸೆ ಈಡೇರಿಸು, ದೈಹಿಕ ಸಂಪರ್ಕ ಬೆಳೆಸು

ನಂತರ “ನಾನು ಕ್ಯಾನ್ಸರ್ ರೋಗಿ, ನನ್ನ ಕೊನೆಯ ಆಸೆ ಈಡೇರಿಸು” ಎಂದು ಹೇಳಿ, ಶಿಕ್ಷಕಿಯೊಂದಿಗೆ ದೈಹಿಕ ಸಂಪರ್ಕ ಹೊಂದಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಶಿಕ್ಷಕಿ ಇದನ್ನು ನಿರಾಕರಿಸಿದಾಗ, ಕನಿಷ್ಠ ನಗ್ನ ವಿಡಿಯೋ ಕಳುಹಿಸು ಎಂದು ಒತ್ತಾಯಿಸಿದ್ದಾನೆ. ಕೊನೆಯ ಆಸೆ ಪಾಪ ಎಂದು ಅವನ ಮಾತುಗಳನ್ನು ನಂಬಿದ ಶಿಕ್ಷಕಿ ತನ್ನ ನಗ್ನ ವಿಡಿಯೋವನ್ನು ಕಳುಹಿಸಿದ್ದಾರೆ.

ವಿಡಿಯೋ ಕೈಗೆ ಸಿಕ್ಕ ತಕ್ಷಣ, ಆರೋಪಿ ತನ್ನ ವರಸೆ ಬದಲಿಸಿದ್ದು, ಆ ವಿಡಿಯೋವನ್ನು ಬಳಸಿಕೊಂಡು ಶಿಕ್ಷಕಿಯನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಾ, ಹಣ ಮತ್ತು ಲೈಂಗಿಕ ಸಂಪರ್ಕಕ್ಕಾಗಿ ಒತ್ತಡ ಹೇರಿದ್ದಾನೆ.

ಈ ಹಿಂಸೆ ಸಹಿಸಲು ಸಾಧ್ಯವಾಗದೆ, ಶಿಕ್ಷಕಿ ತನ್ನ ಸ್ನೇಹಿತರ ಬಳಿ ವಿಷಯವನ್ನು ಹಂಚಿಕೊಂಡಿದ್ದಾರೆ. ನಂತರ ಸ್ನೇಹಿತರ ಸಹಾಯದಿಂದ ಆರೋಪಿಯನ್ನು ಬಲೆಗೆ ಬೀಳಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರಿಗೆ ಬಂದರೆ ನೀನು ಹೇಳಿದಂತೆ ಕೇಳುವುದಾಗಿ ಹೇಳಿ ನಂಬಿಕೆ ಮೂಡಿಸಿ, ಆರೋಪಿಯನ್ನು ಬೆಂಗಳೂರಿಗೆ ಬರುವಂತೆ ಪ್ಲಾನ್ ಮಾಡಲಾಗುತ್ತದೆ.

ಶಿಕ್ಷಕಿ ಭೇಟಿಗಾಗಿ ಬೆಂಗಳೂರಿಗೆ ಬಂದ ಆರೋಪಿ ಟ್ರಾಪ್

ಯೋಜನೆ ಪ್ರಕಾರ ಆಂಧ್ರಪ್ರದೇಶದ ಪುಟ್ಟಬರ್ತಿಯಿಂದ ಬೆಂಗಳೂರಿಗೆ ಬಂದ ಆರೋಪಿ, ಶಿಕ್ಷಕಿ ಭೇಟಿಯಾಗಿದ್ದಾನೆ. ಆದರೆ ಸ್ಥಳಕ್ಕೆ ಬಂದ ನಂತರ, ಶಿಕ್ಷಕಿ ಹಾಗೂ ಆಕೆಯ ಸ್ನೇಹಿತರು ಆತನನ್ನು ಹಿಡಿದು ಪೊಲೀಸರ ಬಳಿ ಕರೆದೊಯ್ದಿದ್ದಾರೆ. ಈ ವೇಳೆ ಆರೋಪಿ ದೂರು ನೀಡದಂತೆ ಮನವಿ ಮಾಡಿದರೂ, ಶಿಕ್ಷಕಿ ಅದನ್ನು ನಿರಾಕರಿಸಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಇದರಿಂದ ಗಾಬರಿಗೊಂಡ ಆರೋಪಿ, ತನ್ನ ಬಳಿ ಇದ್ದ ಬ್ಯಾಗ್‌ನಿಂದ ರೇಜರ್ ಬ್ಲೇಡ್ ತೆಗೆದು, ತಾನೇ ತನ್ನ ಕೈ ಹಾಗೂ ಮರ್ಮಾಂಗವನ್ನು ಕತ್ತರಿಸಿಕೊಂಡು ಆತ್ಮ*ಹತ್ಯೆಗೆ ಯತ್ನಿಸಿದ್ದಾನೆ.

ತಕ್ಷಣವೇ ಪೊಲೀಸರು ಕ್ರಮ ಕೈಗೊಂಡು, ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಣಾಪಾಯದಿಂದ ಪಾರಾದ ಬಳಿಕ, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮುಂದುವರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿರುವ ವಂಚನೆ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಒಟ್ಟಾರೆ, ಆನ್‌ಲೈನ್‌ ಸ್ನೇಹ ಮತ್ತು ಸಹಾನುಭೂತಿಯ ದುರ್ಬಳಕೆಯಿಂದ ಹೇಗೆ ಅಪಾಯ ಸಂಭವಿಸಬಹುದು ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ.

PREV
Read more Articles on
click me!

Recommended Stories

ಇಳಕಲ್ ನಿವಾಸಿ ಭಕ್ತ ಮಹಮ್ಮದ್‌ ಮನೆಗೆ ಭೇಟಿ ನೀಡಿದ ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು
ಎಲೆಕ್ಟ್ರಾನಿಕ್ಸ್ ಸಿಟಿ ಸೆಂಟ್ ಫ್ರಾನ್ಸಿಸ್ ಡಿ ಸೇಲ್ಸ್ ಸ್ವಾಯತ್ತ ಕಾಲೇಜು : ಶೈಕ್ಷಣಿಕ ಶ್ರೇಷ್ಠತೆ ಮತ್ತು ನಾವೀನ್ಯತೆಯ ಉದಯೋನ್ಮುಖ ಕೇಂದ್ರ