ಏನ್ ಶರೀಫ್ ಭಾಯ್, ಶಿವರಾತ್ರಿ ದಿನ ನನ್ನ ಅಪವಿತ್ರ ಮಾಡ್ಬಿಟ್ಟೆಲ್ಲಾ..! ವೆಜ್ ಬಿರಿಯಾನಿಗೆ ಚಿಕನ್ ಕೊಟ್ಟಿದ್ದು ಸರಿನಾ?

Published : Feb 16, 2026, 04:57 PM IST
Sharief Bhai Veg biriyani inside chicken

ಸಾರಾಂಶ

ಮಹಾಶಿವರಾತ್ರಿ ದಿನ 'ಶರೀಫ್ ಭಾಯ್ ಬಿರಿಯಾನಿ'ಯಿಂದ ಆರ್ಡರ್ ಮಾಡಿದ ಪನೀರ್ ಬಿರಿಯಾನಿಯಲ್ಲಿ ಚಿಕನ್ ತುಂಡು ಪತ್ತೆಯಾಗಿದೆ. 'ವೆಜ್' ಎಂದು ಲೇಬಲ್ ಮಾಡಿದ್ದರೂ ಮಾಂಸದ ತುಂಡು ಸಿಕ್ಕಿರುವುದು ಗ್ರಾಹಕರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು (ಫೆ.16): ಮಹಾಶಿವರಾತ್ರಿ ಹಬ್ಬದ ಪವಿತ್ರ ದಿನದಂದು ಉಪವಾಸ, ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದ ಗ್ರಾಹಕರೊಬ್ಬರಿಗೆ ಹೋಟೆಲ್‌ವೊಂದರ ಬೇಜವಾಬ್ದಾರಿತನ ತೀವ್ರ ಆಘಾತ ನೀಡಿದೆ. ಶಾಖಾಹಾರಿ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದ ಗ್ರಾಹಕನಿಗೆ ಮಾಂಸದ ತುಂಡು (ಚಿಕನ್ ಪೀಸ್) ಇರುವ ಬಿರಿಯಾನಿ ಸರಬರಾಜು ಮಾಡುವ ಮೂಲಕ ಹೋಟೆಲ್ ಸಿಬ್ಬಂದಿ ಭಕ್ತನ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಘಟನೆಯ ವಿವರ:

ನಗರದ ನಿವಾಸಿ ಸಂಜಯ್ ಕೊಪ್ಪ ಎಂಬುವವರು ಈ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಮೂಲಕ ಹಂಚಿಕೊಂಡಿದ್ದಾರೆ. ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶುದ್ಧ ಶಾಖಾಹಾರಿ ಆಹಾರ ಸೇವಿಸಬೇಕೆಂಬ ಉದ್ದೇಶದಿಂದ ಅವರು ಬಸವೇಶ್ವರ ನಗರದಲ್ಲಿರುವ ಪ್ರಸಿದ್ಧ 'ಶರೀಫ್ ಭಾಯ್ ಬಿರಿಯಾನಿ' (Sharief Bhai Biryani) ಹೋಟೆಲ್‌ನಿಂದ 'ಮ್ಯಾಜಿಕ್‌ಪಿನ್' (Magicpin) ಆಪ್ ಮೂಲಕ ಪನೀರ್ ಬಿರಿಯಾನಿಯನ್ನು ಆರ್ಡರ್ ಮಾಡಿದ್ದರು. ಆಹಾರದ ಪಾರ್ಸೆಲ್ ಮನೆಗೆ ಬಂದಾಗ ಅದರ ಮೇಲೆ 'ವೆಜ್' (Veg) ಎಂಬ ಲೇಬಲ್ ಅನ್ನು ಸ್ಪಷ್ಟವಾಗಿ ಅಂಟಿಸಲಾಗಿತ್ತು. ಆದರೆ, ಸಂಜಯ್ ಅವರು ಊಟ ಮಾಡಲು ಕುಳಿತಾಗ ಬಿರಿಯಾನಿಯ ಒಳಗೆ ಚಿಕನ್ ತುಂಡೊಂದು ಪತ್ತೆಯಾಗಿದೆ. ಇದನ್ನು ಕಂಡು ದಂಗಾದ ಅವರು ತಕ್ಷಣವೇ ಹೋಟೆಲ್‌ನ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಧಾರ್ಮಿಕ ಭಾವನೆಗೆ ಧಕ್ಕೆ:

'ಇಂದು ಮಹಾಶಿವರಾತ್ರಿ ಹಬ್ಬದ ದಿನವಾದ್ದರಿಂದ ವಿಶೇಷವಾಗಿ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದೆ. ಬಾಕ್ಸ್ ಮೇಲೆ ವೆಜ್ ಎಂದು ಬರೆಯಲಾಗಿತ್ತು, ಆದರೆ ಒಳಗಡೆ ಮಾಂಸದ ತುಂಡು ಇತ್ತು. ಇದು ಅತ್ಯಂತ ನಿರಾಶಾದಾಯಕ ಮತ್ತು ಅಸಹ್ಯಕರ ಸಂಗತಿ' ಎಂದು ಸಂಜಯ್ ತಮ್ಮ ಟ್ವೀಟ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಹಬ್ಬದ ದಿನದಂದು ಇಂತಹ ಘಟನೆ ನಡೆದಿರುವುದು ಅವರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.


ಟ್ವೀಟ್ ವೈರಲ್, ಎಫ್‌ಎಸ್‌ಎಸ್‌ಎಐಗೆ ದೂರು:

ಸಂಜಯ್ ಅವರು ಬಿರಿಯಾನಿಯಲ್ಲಿ ಸಿಕ್ಕ ಮಾಂಸದ ತುಂಡಿನ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಗೂ ಮಾಧ್ಯಮಗಳನ್ನು ಟ್ಯಾಗ್ ಮಾಡಿದ್ದಾರೆ. ಆಹಾರದ ಗುಣಮಟ್ಟ ಮತ್ತು ವರ್ಗೀಕರಣದಲ್ಲಿ ಹೋಟೆಲ್ ತೋರಿರುವ ಈ ಗಂಭೀರ ಲೋಪದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹೋಟೆಲ್‌ನ ಬೇಜವಾಬ್ದಾರಿತನವನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. 'ಜನರು ನಂಬಿಕೆಯಿಂದ ಹೋಟೆಲ್‌ಗಳಲ್ಲಿ ಆಹಾರ ಆರ್ಡರ್ ಮಾಡುತ್ತಾರೆ. ಅದರಲ್ಲೂ ಹಬ್ಬದ ದಿನಗಳಲ್ಲಿ ಇಂತಹ ತಪ್ಪುಗಳನ್ನು ಕ್ಷಮಿಸಲು ಸಾಧ್ಯವಿಲ್ಲ. ಹೋಟೆಲ್‌ನ ಪರವಾನಗಿ ರದ್ದು ಮಾಡಬೇಕು' ಎಂಬ ಅಭಿಪ್ರಾಯ ಕೇಳಿಬಂದಿದೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ವೆಜ್ ಆಹಾರದಲ್ಲಿ ನಾನ್-ವೆಜ್ ತುಂಡುಗಳು ಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಘಟನೆಯು ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್‌ಗಳ ಮೇಲೆ ಹೆಚ್ಚಿನ ನಿಗಾ ಇಡಬೇಕಾದ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ. ಸದ್ಯ ಈ ವಿಚಾರವಾಗಿ ಹೋಟೆಲ್ ಆಡಳಿತ ಮಂಡಳಿಯಾಗಲಿ ಅಥವಾ ಡೆಲಿವರಿ ಸಂಸ್ಥೆಯಾಗಲಿ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

PREV
Read more Articles on
click me!

Recommended Stories

ಕೊಪ್ಪಳ: ವಿದೇಶಿ ಮಹಿಳೆಯ ಅ*ತ್ಯಾ*ಚಾರ,ಕೊಲೆ ಪ್ರಕರಣ 3 ಆರೋಪಿಗಳಿಗೆ ಮರಣದಂಡನೆ ವಿಧಿಸಿ ಗಂಗಾವತಿ ಕೋರ್ಟ್ ಐತಿಹಾಸಿಕ ತೀರ್ಪು
ಕಾಂಗ್ರೆಸ್ ವಿಕೆಟ್ ಪತನ: ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್!