ಕೆಂಗೇರಿ ಕೆರೆ ನೀರನ್ನು ಕುಡಿಯಲು ಹಾಗೂ ಗೃಹಬಳಕೆಗೆ ಬಳಸಬೇಡಿ; ಬೆಂಗಳೂರು ಜಲಮಂಡಳಿ ಮನವಿ

By Sathish Kumar KHFirst Published Mar 25, 2024, 6:46 PM IST
Highlights

ಕೆಂಗೇರಿ ಕೆರೆಗೆ ಭರ್ತಿ ಮಾಡಲಾಗುತ್ತಿರುವ ಸಂಸ್ಕರಿತ ತ್ಯಾಜ್ಯ ನೀರನ್ನು ಜನರು ಕುಡಿಯುವುದಕ್ಕೆ ಹಾಗೂ ಗೃಹ ಬಳಕೆಗೆ ಉಪಯೋಗಿಸಬೇಡಿ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.

ಬೆಂಗಳೂರು (ಮಾ.25): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕುಸಿಯುತ್ತಿರುವ ಅಂತರ್ಜಲವನ್ನು ವೃದ್ಧಿಸಲು ಹಾಗೂ ಕೆರೆಗಳನ್ನು ಸುಸ್ಥಿತಿಯಲ್ಲಿ ಕಾಪಾಡುವ ದೃಷ್ಟಿಯಿಂದ, ನಗರದ ಕೆಂಗೇರಿ ಕೆರೆಗೆ ಸಂಸ್ಕರಿತ ತ್ಯಾಜ್ಯ ನೀರನ್ನು ತುಂಬಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಂಗೇರಿ ಕೆರೆಯಲ್ಲಿನ ನೀರನ್ನು ಸುತ್ತಲಿನ ನಿವಾಸಿಗಳು ಕುಡಿಯುವುದಕ್ಕಾಗಲೀ ಅಥವಾ ಗೇಹ ಬಳಕೆಗಾಗಲೀ ಬಳಕೆ ಮಾಡಬಾರದು ಎಂದು ಬೆಂಗಳೂರು ಜಲ ಮಂಡಳಿ ಮತ್ತು ನೀರು ಸರಬರಾಜು ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.

ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು, ನಗರದಲ್ಲಿ ಉಂಟಾಗಿರುವ ಅಂತರ್ಜಲ ಮಟ್ಟ ಕುಸಿತವನ್ನು ಮರುಪೂರಣ ಮಾಡಲು ಕೆಂಗೇರಿ ಕೆರೆ ಸೇರಿದಂತೆ 14 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಲಾಗುತ್ತಿದೆ. ಹೀಗಾಗಿ, ಈ ನೀರನ್ನು ಕುಡಿಯಲು ಹಾಗೂ ಗೃಹ ಬಳಕೆಗೆ ಉಪಯೋಗಿಸಬಾರದು. ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ 2ನೇ  ಹಂತದಲ್ಲಿ ಸಂಸ್ಕರಿಸಿ ನಗರದ ಅಂತರ್ಜಲ ವೃದ್ಧಿಯ ದೃಷ್ಟಿಯಿಂದ ಕೆರೆಗಳಿಗೆ ತುಂಬಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಅಂತರ್ಜಲ ಹೆಚ್ಚಳಕ್ಕೆ ಯೋಜನೆ; ಕೆಂಗೇರಿ ಕೆರೆಗೆ ಸಂಸ್ಕರಿತ ನೀರು ತುಂಬಿಸಿದ ಜಲಮಂಡಳಿ

ಕೆಂಗೇರಿ ಕೆರೆಯ ನೀರನ್ನು, ರಾಷ್ಟ್ರೀಯ ಹಸಿರು ಪ್ರಾಧಿಕರಣ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಕಟ್ಟುನಿಟ್ಟಿನ ಮನದಂಡಗಳ ಆಧಾರದ ಮೇಲೆ ಸಂಸ್ಕರಿಸಲಾಗುತ್ತಿದೆ. ಈ ನೀರನ್ನ ನೇರವಾಗಿ ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೀಗಾಗಿ, ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿಯ ದೃಷ್ಟಿಯಿಂದ ಬೆಂಗಳೂರು ಜಲಮಂಡಳಿಯಿಂದ ಈ ಸೂಚನೆಯನ್ನು ನೀಡಲಾಗಿದೆ. ಕೆಂಗೇರಿ ಕೆರೆ ಸೇರಿದಂತೆ ಸಂಸ್ಕರಿಸಿದ ನೀರನ್ನು ತುಂಬಿಸಲಾಗುತ್ತಿರುವ ಯಾವುದೇ ಕೆರೆಗಳಿಂದಲೂ ಕೂಡಾ ನೀರನ್ನ ಕುಡಿಯಲು ಹಾಗೂ ಗೃಹ ಬಳಕೆಗೆ ಉಪಯೋಗಿಸಬಾರದು ಎಂದು ಮನವಿ ಮಾಡಿದ್ದಾರೆ.

ಕೆಂಗೇರಿ ಕೆರೆಗೆ ಸಂಸ್ಕರಿಸಿದ ನೀರನ್ನು ಹರಿಸುವ ಮೂಲಕ ಕುಸಿದಿರುವ ಅಂತರ್ಜಲವನ್ನು ಮರುಪೂರಣಗೊಳಿಸಲು ಜಲಮಂಡಳಿ ಮುಂದಾಗಿದೆ. ಎರಡನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಅವ್ಯಾಹತವಾಗಿ ಅಂತರ್ಜಲ ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಅವಶ್ಯಕತೆ ಪೂರೈಸಲು ಅಂತರ್ಜಲ ಮರುಪೂರಣ ಮಾಡಬೇಕಿದೆ. ಇದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಜಲಮಂಡಳಿ ಕೈಗೊಳ್ಳುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ ಪ್ರಸಾತ್ ಮನೋಹರ್ ತಿಳಿಸಿದರು.

ಬೆಂಗಳೂರು ಸ್ವಿಮ್ಮಿಂಗ್ ಪೂಲ್‌ಗಳಿಗೆ ಕಾವೇರಿ ನೀರು ಬಳಕೆ ನಿಷೇಧ; ನಿಯಮ ಉಲ್ಲಂಘಿಸಿದರೆ ದಂಡ

ವೃಷಭಾವತಿ ವ್ಯಾಲಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ನಾಯಂಡಹಳ್ಳಿ  ಕೆರೆ, ಕೆಂಗೇರಿ ಎಸ್.ಟಿ.ಪಿ ಮಂಡಳಿ ವತಿಯಿಂದ ಸಂಸ್ಕರಿಸಿದ ನೀರನ್ನು ಕೆಂಗೇರಿ ಕೆರೆಗೆ ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಲಮಂಡಳಿ ವತಿಯಿಂದ ಸಂಸ್ಕರಿಸಿ ನೀರನ್ನು ದುಬಾಸಿಪಾಳ್ಯ, ಹೊಸಕೆರಳ್ಳಿ ಹಾಗೂ ಹಲಗೇವಡೆರಹಳ್ಳಿ ಕೆರೆಗಳಿಗೆ  ತುಂಬಿಸಲಾಗುವುದು ಎಂದು ಹೇಳಿದರು.

click me!