ಜನವರಿಯಿಂದಲೇ ಈ ಬಾರಿ ನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ. ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಸೇರಿ ಹೊಸ ದಾಖಲೆ ನಿರ್ಮಾಣವಾಗುತ್ತಿದೆ.
ಬೆಂಗಳೂರು(ಅ.16): ನಗರದಲ್ಲಿ ಈ ವರ್ಷ ತನ್ನ ಸಾರ್ವಕಾಲಿಕ ವಾರ್ಷಿಕ ಮಳೆಯ ಹೊಸ ದಾಖಲೆಯನ್ನು ಬರೆಯುವ ಸಾಧ್ಯತೆಯಿದೆ. ಇಂದು(ಭಾನುವಾರ) ಮತ್ತು ಸೋಮವಾರ ನಗರಕ್ಕೆ ಯೆಲ್ಲೋ ಅಲರ್ಟ್ ಇರುವುದರಿಂದ ಒಂದೆರಡು ದಿನದಲ್ಲೇ ಹೊಸ ದಾಖಲೆ ನಿರ್ಮಾಣವಾದರೆ ಅಚ್ಚರಿಯಿಲ್ಲ. ಬೆಂಗಳೂರಿನಲ್ಲಿ 2017ಕ್ಕೆ ಒಟ್ಟು 170 ಸೆಂ.ಮೀ. ಮಳೆ ಸುರಿದು ದಾಖಲೆ ಸೃಷ್ಟಿಯಾಗಿತ್ತು. ಈ ವರ್ಷ ಶನಿವಾರ ಮುಂಜಾನೆ 8.30ರ ಹೊತ್ತಿಗೆ ಉದ್ಯಾನ ನಗರಿಯಲ್ಲಿ 166 ಸೆಂ.ಮೀ. ಮಳೆ ದಾಖಲಾಗಿತ್ತು. ಶನಿವಾರ ಸಂಜೆಯ ಹೊತ್ತು ನಗರದಲ್ಲಿ ಧಾರಾಕಾರ ಮಳೆಯಾಗಿದೆ. ಇದರಿಂದ ವಾರ್ಷಿಕ ಮಳೆ ಸಾರ್ವಕಾಲಿಕ ದಾಖಲೆ ಸಮೀಪ ತಲುಪಿದೆ.
ಜನವರಿಯಿಂದಲೇ ಈ ಬಾರಿ ನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ. ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಸೇರಿ ಹೊಸ ದಾಖಲೆ ನಿರ್ಮಾಣವಾಗುತ್ತಿದೆ. ನಗರದಲ್ಲಿ ಭರ್ಜರಿ ಮಳೆ ಸುರಿಸುವ ಹಿಂಗಾರು ಮಾರುತ ಇನ್ನಷ್ಟೆ ಪ್ರವೇಶಿಸಬೇಕಿದೆ.
ಬೆಂಗಳೂರಲ್ಲಿ ನೆರೆ ತಡೆಗೆ ರಾಜಕಾಲುವೆಗಳ ಅಭಿವೃದ್ಧಿಯಾಗಬೇಕಿದೆ: ಸಿಎಂ ಬೊಮ್ಮಾಯಿ
ಈ ಬಾರಿ ನಗರದಲ್ಲಿ ಮುಂಗಾರು ಮಳೆ (ಜೂನ್ 1ರಿಂದ ಸೆಪ್ಟೆಂಬರ್ 30) ವಾಡಿಕೆಗಿಂತ ಶೇ.68ರಷ್ಟುಹೆಚ್ಚು ಮಳೆಯಾಗಿದೆ. ಸದ್ಯ ಮುಂಗಾರು ಮಳೆಯೇ ಮುಂದುವರಿದಿದ್ದರೂ ಅಕ್ಟೋಬರ್ 1ರಿಂದ ಅಕ್ಟೋಬರ್ 15ರವರೆಗೆ 12.3 ಸೆಂ.ಮೀ ಅಂದರೆ ವಾಡಿಕೆಗಿಂತ ಶೇ.40ಕ್ಕಿಂತ ಹೆಚ್ಚು ಮಳೆ ಸುರಿದಿದೆ.
ಶನಿವಾರವು ನಗರದಲ್ಲಿ ಧಾರಾಕಾರ ಮಳೆಯಾಗಿದ್ದು ಸಂಪಂಗಿರಾಮನಗರ 3.9 ಸೆಂ.ಮೀ, ಎಚ್.ಗೊಲ್ಲಹಳ್ಳಿ 3.7, ವಿದ್ಯಾಪೀಠ 3.3, ಸಂಪಂಗಿರಾಮ ನಗರ ಮತ್ತು ಕೆಂಗೇರಿ ತಲಾ 3.1, ಹೆಮ್ಮಿಗೆಪುರ 2.8 ಸೆಂ.ಮೀ. ಮಳೆಯಾಗಿದೆ. ಮಾಧವ ಪಾರ್ಕ್ನಲ್ಲಿ ಮರವೊಂದು ಬಿದ್ದಿದೆ.
ಉಳಿದಂತೆ ರಾಜಾಜಿ ನಗರ, ಜಯ ನಗರ, ಜೆಪಿ ನಗರ, ಹಂಪಿ ನಗರ, ಮೆಜೆಸ್ಟಿಕ್, ಕಲಾಸಿಪಾಳ್ಯ, ಬಸವನಗುಡಿ, ಗೊರಗುಂಟೆಪಾಳ್ಯ, ಹೆಬ್ಬಾಳ, ಕೋರಮಂಗಲ, ಆಡುಗೋಡಿ, ಶಾಂತಿ ನಗರ, ನಾಯಂಡಹಳ್ಳಿ, ಚಾಮರಾಜಪೇಟೆ, ಶ್ರೀರಾಮಪುರ, ಈಜಿಪುರ, ಕೆ.ಆರ್.ಮಾರುಕಟ್ಟೆ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ಸಾರಕ್ಕಿ, ವಿವಿ ಪುರ ಮುಂತಾದೆಡೆ ಭರ್ಜರಿ ಮಳೆಯಾಗಿದೆ.