
ಬೆಂಗಳೂರು: ರಾಜಧಾನಿಯ ಹೊರವಲಯದ ತಾವರೆಕೆರೆ ಸಮೀಪದ ಮಾಗಡಿ ರಸ್ತೆಯ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭೀಕರ ಬಂಡೆ ಕುಸಿತದ ದುರಂತಕ್ಕೆ ಸಂಬಂಧಿಸಿದಂತೆ ಈಗ ಮತ್ತಷ್ಟು ಆಘಾತಕಾರಿ ಹಾಗೂ ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ. ಘಟನಾ ಸ್ಥಳದಲ್ಲಿ ಒಟ್ಟು 20 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಕನಿಷ್ಠ 7 ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಪೈಕಿ ಆರು ಜನ ಮಧ್ಯಪ್ರದೇಶ ಮೂಲದವರಾಗಿದ್ದರೆ, ಮತ್ತೋರ್ವ ಕಾರ್ಮಿಕ ಕರ್ನಾಟಕದ ಯಾದಗಿರಿ ಜಿಲ್ಲೆಯವರಾಗಿದ್ದಾರೆ.
ಇಂದು ಬೆಳಗ್ಗೆ 6.50ಕ್ಕೆ ಈ ದುರಂತ ನಡೆದಿದೆ. ಬುಧವಾರ ಸಂಜೆ 4 ಗಂಟೆಗೆ ಕಾರ್ಮಿಕರು ಕೆಲಸಕ್ಕೆ ಬಂದಿದ್ದರು. ಈ ವೇಳೆ ದುರಂತ ಸಂಭವಿಸಬಹುದೆಂಬ ಮುನ್ಸೂಚನೆಯನ್ನು ಕಾರ್ಮಿಕರು ಗಮನಕ್ಕೆ ತಂದಿದ್ದರು. ರಾತ್ರಿ ಇಡೀ ಇಲ್ಲಿ ಕೆಲಸ ನಡೆದಿದೆ. ಬೆಳಗ್ಗಿನ ಜಾವ ಇನ್ನೇನು ಕೆಲಸ ನಿಲ್ಲಿಸಿ ಹೋಗಬೇಕು ಈ ವೇಳೆ ಈ ದುರಂತ ನಡೆದಿದೆ.
ಮೃತರ ಪೈಕಿ ಕರ್ನಾಟಕ ಮೂಲದ ಕಾರ್ಮಿಕನನ್ನು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಡಿಹಾಳ್ ತಾಂಡದ ವೃದ್ಧ ರಾಮು ನಾಯಕ್ ಎಂದು ಗುರುತಿಸಲಾಗಿದೆ. ಯಾದಗಿರಿಯಲ್ಲಿ ತಲೆದೋರಿರುವ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಲು ರಾಮು ಅವರು ತಮ್ಮ ಇಡೀ ಕುಟುಂಬದ ಸಮೇತ ರಾಜಧಾನಿ ಬೆಂಗಳೂರಿಗೆ ವಲಸೆ ಬಂದಿದ್ದರು. ಕೂಲಿ ಕೆಲಸಕ್ಕಾಗಿ ಕಲ್ಲು ಕ್ವಾರಿಗೆ ಇಳಿದಿದ್ದ ರಾಮು ನಾಯಕ್ ಇಂದು ಶವವಾಗಿದ್ದಾರೆ. ಇತ್ತ ಸ್ವಗ್ರಾಮ ನಡಿಹಾಳದಲ್ಲಿ ರಾಮು ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತರ ಕುಟುಂಬಕ್ಕೆ ಸೂಕ್ತ ನ್ಯಾಯ ಹಾಗೂ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಐವರು ಕಾರ್ಮಿಕರನ್ನು ಸದ್ಯ ಕೆಂಗೇರಿಯ ರಾಜರಾಜೇಶ್ವರಿ (RR) ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ (ICU) ದಾಖಲಿಸಲಾಗಿದೆ. ಗುಲಾಬ್ ಸಿಂಗ್ (27), ರಾಜ್ ಪಾಲ್ (30), ಚೋಟು (24), ನೋಹರ್ ಸಿಂಗ್ (21), ಆನಂದ್ (30) ಎಂದು ಗುರುತಿಸಲಾಗಿದೆ. ಸದ್ಯ ಇವರಲ್ಲಿ ಓರ್ವ ಕಾರ್ಮಿಕನ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಬಂಡೆ ಕುಸಿತದ ತೀವ್ರತೆ ಎಷ್ಟಿದೆ ಎಂದರೆ ಇವರ ಕೈಕಾಲು ಮತ್ತು ತಲೆ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಭವಿಷ್ಯದಲ್ಲಿ ದುಡಿದು ತಿನ್ನುವುದು ಕಷ್ಟ ಎನ್ನುವ ಮಟ್ಟಿಗೆ ತೀವ್ರ ಗಾಯವಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಇದೊಂದು ವ್ಯವಸ್ಥಿತ ನಿಯಮ ಉಲ್ಲಂಘನೆಯಿಂದ ನಡೆದ ದುರಂತ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಪಕ್ಕಪಕ್ಕದಲ್ಲೇ ಎರಡು ಕ್ವಾರಿಗಳು ಕಾರ್ಯನಿರ್ವಹಿಸುತ್ತಿದ್ದವು. ಒಂದು ಉದಯ್ ಶಂಕರ್ ಮಾಲೀಕತ್ವದ 'ಕಾವೇರಿ ಸಂಸ್ಥೆ'ಯ ಕ್ವಾರಿ, ಮತ್ತೊಂದು ಆನಂದ್ ಸ್ವಾಮಿ ಮಾಲೀಕತ್ವದ 'ಬಸವೇಶ್ವರ ಕ್ರಷರ್/ಕೋರೆ'. ನಿಯಮಗಳ ಪ್ರಕಾರ ಎರಡು ಕೋರೆಗಳ ನಡುವೆ ಕನಿಷ್ಠ 7.5 ಅಡಿ ಜಾಗವನ್ನು 'ಬಫರ್ ಜೋನ್' ಎಂದು ಬಿಡಬೇಕಾಗುತ್ತದೆ. ಆದರೆ ಮಾಲೀಕರು ಈ 7.5 ಅಡಿಯ ಬಫರ್ ಜೋನ್ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆನಂದ್ ಸ್ವಾಮಿ ಅವರ ಕ್ವಾರಿಯಲ್ಲಿ ಕಳೆದ ಒಂದು ತಿಂಗಳಿನಿಂದ ಕೆಲಸ ಸ್ಥಗಿತಗೊಂಡಿತ್ತು. ಆದರೆ ಕಾವೇರಿ ಕ್ವಾರಿಯಲ್ಲಿ ನಿರಂತರ ಕೆಲಸ ನಡೆಯುತ್ತಿತ್ತು. ಮೇಲ್ಭಾಗದಲ್ಲಿ ಕ್ರಷರ್‌ನ ಬಂಡೆಯನ್ನು ಜರುಗಿಸುವಾಗ, ಕೆಳಗಡೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕುಸಿದು ಬಿದ್ದಿದೆ. ಹೀಗಾಗಿ ಒಂದು ಕ್ವಾರಿಯಲ್ಲಿನ ಬಂಡೆ ಮತ್ತೊಂದು ಕ್ವಾರಿಯಲ್ಲಿನ ಕಾರ್ಮಿಕರ ಮೇಲೆ ಬಿದ್ದಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು (ಡಿಕೆ ಶಿವಕುಮಾರ್), "ಮಾಗಡಿ ರಸ್ತೆಯ ಕಲ್ಲುಕ್ವಾರಿಯಲ್ಲಿ ದುರಂತ ನಡೆದು 6 ರಿಂದ 7 ಜನ ಮೃತಪಟ್ಟಿರುವ ಮಾಹಿತಿ ಬಂದಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಬ್ಲಾಸ್ಟ್ (ಸ್ಫೋಟ) ಅಲ್ಲ, ಬಂಡೆ ಕುಸಿದು ಆಗಿರುವ ದುರಂತ ಎಂದು ತಿಳಿದುಬಂದಿದೆ. ಈ ಕ್ವಾರಿ ಲೀಗಲ್ ಆಗಿದೆಯೇ ಅಥವಾ ಇಲ್ ಲೀಗಲ್ ಆಗಿದೆಯೇ ಎಂಬುದರ ಸಂಪೂರ್ಣ ವರದಿಯನ್ನು ಇಂದು ಮಧ್ಯಾಹ್ನ ತರಿಸಿಕೊಳ್ಳಲಿದ್ದೇನೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರಿಹಾರ ಕೊಟ್ಟ ತಕ್ಷಣ ಮೃತಪಟ್ಟ ಜೀವಗಳು ವಾಪಸ್ ಬರಲ್ಲ, ಹಾಗಾಗಿ ಮಧ್ಯಾಹ್ನದ ಬಳಿಕ ವರದಿ ಪರಿಶೀಲಿಸಿ ಸೂಕ್ತ ಪರಿಹಾರ ಘೋಷಿಸುತ್ತೇನೆ," ಎಂದು ತಿಳಿಸಿದ್ದಾರೆ.
ಸದ್ಯ ತಾವರೆಕೆರೆ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಕಂಟ್ರ್ಯಾಕ್ಟ್ ತಗೆದುಕೊಂಡಿದ್ದ ಮೇಸ್ತ್ರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾವೇರಿ ಸಂಸ್ಥೆಯ ಮಾಲೀಕ ಉದಯ್ ಶಂಕರ್ ಮತ್ತು ಆನಂದ್ ಸ್ವಾಮಿ ಅವರ ವಿಚಾರಣೆ ಕೂಡ ನಡೆಯಲಿದೆ.