ಬೆಂಗಳೂರು ರಸ್ತೆ ಗುಂಡಿ ಮುಚ್ಚೋದು ರಾಕೆಟ್ ಸೈನ್ಸಾ? ಜಿಬಿಎ ಅಧಿಕಾರಿಗಳ ಮೇಲೆ ಗುಡುಗಿದ ಸಚಿವ ಕೃಷ್ಣ ಬೈರೇಗೌಡ

Kannadaprabha News   | Kannada Prabha
Published : Jun 17, 2026, 08:47 AM IST
Krishna Byre Gowda

ಸಾರಾಂಶ

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ನಗರದ ರಸ್ತೆ ಗುಂಡಿಗಳ ಸಮಸ್ಯೆಯ ಕುರಿತು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರಸ್ತೆ ಗುಂಡಿ ಮುಚ್ಚುವುದು ರಾಕೆಟ್ ಸೈನ್ಸಾ ಎಂದು ಪ್ರಶ್ನಿಸಿದ ಅವರು, ತಾತ್ಕಾಲಿಕ ಪರಿಹಾರದ ಬದಲು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು.

ಬೆಂಗಳೂರು: ರಸ್ತೆ ಗುಂಡಿ ಮುಚ್ಚುವುದು ರಾಕೆಟ್ ಸೈನ್ಸಾ?, ಬೆಂಗಳೂರಿನಲ್ಲಿ ವರ್ಷಪೂರ್ತಿ ಗುಂಡಿಗಳನ್ನು ಮುಚ್ಚುವುದೇ ಪಾಲಿಕೆ ಕೆಲಸವೇ? ಗುಂಡಿ ಮುಕ್ತ ರಸ್ತೆಗಳನ್ನು ನಿರ್ಮಿಸುವುದು ಅಷ್ಟು ಕಷ್ಟವೇ?. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೃಷ್ಣ ಬೈರೇಗೌಡ ಅವರು ಜಿಬಿಎ ಕಚೇರಿಯಲ್ಲಿ ಮಂಗಳವಾರ ನಡೆಸಿದ ಮೊದಲ ಸಭೆಯಲ್ಲಿ ಅಧಿಕಾರಿಗಳು ಹಾಗೂ ಎಂಜಿನಿಯರುಗಳಿಗೆ ಮೇಲಿನಂತೆ ಪ್ರಶ್ನೆಗಳನ್ನು ಕೇಳಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ಒಳ್ಳೆಯ ರಸ್ತೆಗಳನ್ನು ನಿರ್ಮಿಸಿ ನಿರ್ವಹಿಸುವುದು, ಸಮರ್ಪಕವಾಗಿ ಕಸ ಸಂಗ್ರಹಿಸಿ ಸ್ವಚ್ಛತೆ ಕಾಪಾಡುವುದು, ಕಾಲುವೆ, ಮೋರಿಗಳಲ್ಲಿ ಸರಾಗವಾಗಿ ನೀರು ಹರಿಯುವಂತೆ ನೋಡಿಕೊಳ್ಳುವುದು, ಖಾತಾ ಮಾಡಿ ಆಸ್ತಿ ತೆರಿಗೆ ಸಂಗ್ರಹಿಸುವುದು’ ಈ ನಾಲ್ಕು ಬೇಸಿಕ್ ಕೆಲಸಗಳನ್ನು ಮಾಡಿಕೊಂಡು ಹೋಗುವುದು ಅಷ್ಟು ಕಷ್ಟವಾಗುತ್ತಿದೆಯೇ? ಎಂದು ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು.

ಅಕ್ಕ-ಪಕ್ಕದ ರಾಜ್ಯಗಳಲ್ಲೂ ಇದೇ ರೀತಿ ರಸ್ತೆ ಗುಂಡಿ ಆಗುತ್ತವೆಯೇ? ಹೋಗಲಿ ಅವರು ಮಾಡುವ ಎಸ್ಟಿಮೇಷನ್‌ಗೂ ನಮ್ಮ ಎಸ್ಟಿಮೇಷನ್‌ಗೂ ವ್ಯತ್ಯಾಸವಿದೆಯೇ? ಹೇಳಿ. ಎಸ್ಟಿಮೇಷನ್ ಒಂದೇ ಆಗಿದ್ದರೆ ಗುಂಡಿಗಳು ಏಕೆ ಉದ್ಭವವಾಗುತ್ತವೆ? ಮಳೆ ಬರುವುದು ಗೊತ್ತಿಲ್ಲವೇ? ರಸ್ತೆಗಳು ಎಷ್ಟು ದಿನ ಬಾಳ್ವಿಕೆ ಬರಬೇಕು ಎನ್ನುವ ಲೆಕ್ಕಾಚಾರ ಹಾಕುವುದಿಲ್ಲವೇ? ಗುಂಡಿ ಬೀಳುವಂತೆ ರಸ್ತೆ ನಿರ್ಮಿಸುವುದು, ನಂತರ ಅದನ್ನು ಮುಚ್ಚುವುದೇ ಒಂದು ದೊಡ್ಡ ಉದ್ಯೋಗವಾಗಿ ಹೋಗಿದೆ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.

ವರ್ಷ ಪೂರ್ತಿ ಗುಂಡಿ ಮುಚ್ಚುತ್ತಿರುವುದೇ ಕಾಯಕವಾಗಿದೆ. ರಸ್ತೆ ನಿರ್ಮಿಸುವುದು, ಗುಂಡಿ ಮುಚ್ಚುವುದು ರಾಕೆಟ್ ಸೈನ್ಸಾ? ರಸ್ತೆ ಮಾಡುವುದು ಕಷ್ಟವಾಗುತ್ತಿದೆಯೇ? ಇದೊಂದು ನನ್ನ ಸರಳ ಪ್ರಶ್ನೆ. ಉತ್ತರ ಕೊಡಿ ಎಂದು ಸಚಿವರು ಅಧಿಕಾರಿಗಳನ್ನು ಕೇಳಿದರು.

ಸಮಸ್ಯೆಗಳು ಉದ್ಭವವಾಗದಂತೆ ಕೆಲಸ ಮಾಡಬೇಕಲ್ಲವೇ? ಸರಿಯಾಗಿ ಕೆಲಸ ಮಾಡಿದರೆ ಸಮಸ್ಯೆಗಳು ಉದ್ಭವಾಗುವುದಿಲ್ಲ. ಬೆಂಗಳೂರಿನ ತುಂಬೆಲ್ಲಾ ರಸ್ತೆ ಗುಂಡಿಗಳಿವೆ. ಬಿಬಿಎಂಪಿ ರಚನೆಯಾದ ಬಳಿಕ ನಗರಕ್ಕೆ ಸೇರ್ಪಡೆಯಾಗಿರುವ ಪ್ರದೇಶಗಳಲ್ಲಿ ಮೂಲಸೌಕರ್ಯಗಳು ಸರಿಯಿಲ್ಲ. ಅರೆ ಬರೆ ಮಾಡಿ ಬಿಡಲಾಗಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಸಮಸ್ಯೆಯಾದರೆ ಎಲ್ಲೆಡೆ ಸಮಸ್ಯೆ: 

ಬೆಂಗಳೂರು ಬಹಳಷ್ಟು ಸವಾಲುಗಳನ್ನು ಹೊಂದಿರುವ ನಗರವಾಗಿದೆ. ಸುಮಾರು 1.5 ಕೋಟಿ ಜನರಿಗೆ ಆಶ್ರಯ ತಾಣವಾಗಿರುವ ಈ ನಗರವು ಉದ್ಯೋಗ, ಶಿಕ್ಷಣ ಹಾಗೂ ಉತ್ತಮ ಜೀವನಕ್ಕೆ ಅವಕಾಶ ಕಲ್ಪಿಸುತ್ತಿದೆ. ಕರ್ನಾಟಕ ಹಾಗೂ ದೇಶದ ಅಮೂಲ್ಯ ಆಸ್ತಿಯಾಗಿದ್ದು, ವಿಶ್ವದ ವಿವಿಧ ಭಾಗಗಳ ಜನರು ಹಾಗೂ ಅನೇಕ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಸಮಸ್ಯೆಯಾದರೆ ಅದರ ಪರಿಣಾಮ ಎಲ್ಲಾ ಕಡೆ ಬೀರುತ್ತದೆ ಎಂದು ಸಚಿವರು ಎಚ್ಚರಿಸಿದರು.

ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ, ಎಲಿವೇಟೆಡ್ ಕಾರಿಡಾರ್ ಹಾಗೂ ಸಂಚಾರಯುಕ್ತ ರಸ್ತೆ ನಿರ್ಮಾಣದಂತಹ ಯೋಜನೆಗಳನ್ನು ರೂಪಿಸಿ ಅನುಷ್ಠಾನದ ಹಂತಕ್ಕೆ ತರಲಾಗಿದೆ. ಆಸ್ತಿ ದಾಖಲೆಗಳ ಅಸಮರ್ಪಕ ನಿರ್ವಹಣೆಗೆ ಪರಿಹಾರವಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಸಚಿವರು ಹೇಳಿದರು.

ಗುಂಡಿ ಲೆಕ್ಕ ನೀಡದ ಸಚಿವರು: ನಗರದಲ್ಲಿರುವ ರಸ್ತೆ ಗುಂಡಿಗಳ ಸಂಖ್ಯೆ ಎಷ್ಟು? ಎಂಬ ಪತ್ರಕರ್ತರ ಪ್ರಶ್ನೆಗೆ ಸಚಿವರು ಉತ್ತರಿಸದೆ. ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದಷ್ಟೇ ಹೇಳಿದರು.

ಚುನಾವಣೆ ನಡೆಸಬೇಕು: ಸುಪ್ರೀಂ ಕೋರ್ಟ್ ಸೂಚನೆಯಂತೆ ಚುನಾವಣೆ ನಡೆಸಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿದರು.

ಹಳೇ ಕಲ್ಲು ಹೊಸ ಬಿಲ್ಲು ಬೇಡ

ಇನ್ನು ಮುಂದೆ ‘ಹಳೆ ಕಲ್ಲು ಹೊಸ ಬಿಲ್ಲು’ ಎಂಬಂತೆ ರಸ್ತೆ ಗುಂಡಿ ಮುಚ್ಚುವ ತಾತ್ಕಾಲಿಕ ಪರಿಹಾರದ ಬದಲಾಗಿ ಅಧಿಕಾರಿಗಳು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. ಕೆಟ್ಟ ರಸ್ತೆಗಳ ಕಾರಣಕ್ಕೆ ಉಂಟಾಗುತ್ತಿರುವ ಜನರ ಬವಣೆ ನೀಗಬೇಕು. ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳ ಜೊತೆಗೆ ನಿಲ್ಲುತ್ತೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.

ನಗರದ 1.5 ಕೋಟಿ ಜನರ ಜೀವನ ಗುಣಮಟ್ಟ ಸುಧಾರಣೆ ನಮ್ಮ ಮೊದಲ ಆದ್ಯತೆಯಾಗಿದೆ. ಜನರ ದೈನಂದಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮುಖ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. - ಕೃಷ್ಣ ಬೈರೇಗೌಡ, ಬೆಂಗಳೂರು ನಗರಾಭಿವೃದ್ಧಿ ಸಚಿವ

PREV
Read more Articles on
click me!

Recommended Stories

Davanagere: ಜಿಮ್ ಮುಗಿಸಿ ಮನೆಗೆ ಬಂದ 26 ವರ್ಷದ ಬಾಡಿ ಬಿಲ್ಡರ್ ಸುಶೀಲ್ ಕುಸಿದು ಸಾವು
Karnataka MSP payment dela: ಬೆಂಬಲ ಬೆಲೆಯ ಬಲೆಗೆ ಸಿಲುಕಿ ರಾಜ್ಯದ 1.40 ಲಕ್ಷ ರೈತರು ಪರದಾಟ!