ಕೆಟ್ಟ ಕೆಲಸ ಮಾಡಿದರೆ ಕೊನೆವರೆಗೂ ಬಿಡದೇ ಕಾಡುತ್ತೇನೆ : ಅಲೋಕ್

By Web DeskFirst Published Jun 19, 2019, 8:19 AM IST
Highlights

ಬೆಂಗಳೂರು ನೂತನ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ ಸಂದೇಶ ನೀಡಿದ್ದಾರೆ. 

ಬೆಂಗಳೂರು [ಜೂ.19] : ‘ನೀವು ಒಳ್ಳೆಯ ಕೆಲಸ ಮಾಡಿದರೆ ಕೊನೆವರೆಗೂ ನಿಮ್ಮೊಂದಿಗಿರುತ್ತೇನೆ. ನೀವು ಕೆಟ್ಟ ಕೆಲಸ ಮಾಡಿದರೂ ಕೊನೆವರೆಗೆ ನಿಮ್ಮನ್ನು ಬಿಡದೆ ಕಾಡುತ್ತೇನೆ’.....! ಹೀಗೆ ನಗರದ ಪೊಲೀಸರಿಗೆ ನೂತನ ಆಯುಕ್ತ ಅಲೋಕ್ ಕುಮಾರ್ ನೀಡಿದ ಕಟ್ಟು ನಿಟ್ಟಿನ ಎಚ್ಚರಿಕೆ. 

ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಅಲೋಕ್ ಕುಮಾರ್ ಅವರು, ಮಂಗಳವಾರ ಇನ್ಸ್‌ಪೆಕ್ಟರ್ ಮೇಲ್ಮಟ್ಟದ ಅಧಿಕಾರಿಗಳ ಮೊದಲ ಸಭೆಯಲ್ಲಿ ಮಾತನಾಡಿ, ನನಗೆ ನಗರದ ಪರಿಚಯವಿದೆ. ಇಲ್ಲಿನ ಪೊಲೀಸರ ಕಾರ್ಯನಿರ್ವಹಣೆ ಹೇಗಿದೆ ಎಂಬುದರ ಅರಿವಿದೆ. ನೀವು ಒಳ್ಳೆಯ ಕೆಲಸ ಮಾಡಿದರೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತೇನೆ. ಹಾಗೆ ಕೆಟ್ಟ ಕೆಲಸ ಮಾಡಿದರೆ ಅದನ್ನು ತಾರ್ಕಿಕ ಅಂತ್ಯ ಕಾಣಿಸದೆ ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಠಾಣಾ ಮಟ್ಟದಲ್ಲೇ ಜನರ ಸಮಸ್ಯೆಗಳು  ಬಗೆಹರಿಯಬೇಕು. ಯಾರೊಬ್ಬರು ನನ್ನ ಕಚೇರಿಗೆ ದೂರು ಹೊತ್ತು ಬರಬಾರದು. ನಾಗರಿಕರು ಪದೇ ಪದೇ ನೇರವಾಗಿ ನನ್ನಲ್ಲಿಗೆ ಅಹವಾಲು ಸಲ್ಲಿಸಲು ಬಂದರೆ ಮುಂದಿನ ಕ್ರಮ ನೀವೇ (ಇನ್ಸ್‌ಪೆಕ್ಟರ್) ಎದುರಿಸಬೇಕಾಗುತ್ತದೆ ಎಂದುಅಲೋಕ್ ಕುಮಾರ್ ತೀಕ್ಷ್ಣವಾಗಿ ಹೇಳಿದ್ದಾರೆ. 

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಬಿ.ಕೆ.ಸಿಂಗ್, ಪಿ. ಹರಿಶೇಖರನ್ ಹಾಗೂ ಜಂಟಿ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 

ಠಾಣೆಗೆ ಅನಿರೀಕ್ಷಿತ ಭೇಟಿ ನೀಡುವೆ: ಪ್ರತಿ ಎರಡ್ಮೂರು ದಿನಗಳಿಗೊಮ್ಮೆ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಕೆಲವು ಬಾರಿ ಹೇಳಿ ಬರುತ್ತೇನೆ. ಹೇಳದೆಯೋ ಬರುತ್ತೇನೆ ಎಂದು ಆಯುಕ್ತ ಅಲೋಕ್ ಕುಮಾರ್ ತಿಳಿಸಿದರು. ಠಾಣೆಗಳ ವಾಸ್ತವ ಪರಿಸ್ಥಿತಿ ಅರಿಯಲು ನಾನು ಬರುತ್ತೇನೆ. ಮುಂಚಿತವಾಗಿಯೇ ಹೇಳಿ ಹೋದಾಗ ಅವುಗಳು ಹೇಗಿರುತ್ತದೆ. ಹಠಾತ್ತಾಗಿ ಹೋದಾಗಿನ ಅವುಗಳ ಚಿತ್ರಣ ಹೇಗಿರುತ್ತದೆ ಎಂಬುದು ಸಹ ಗೊತ್ತಾಗಬೇಕಿದೆ. ಹೀಗಾಗಿ ಇನ್ಸ್‌ಪೆಕ್ಟರ್‌ಗಳು ಆಲಸ್ಯ ಬಿಟ್ಟು ಕೆಲಸ ಮಾಡಬೇಕು ಎಂದು ಆಯುಕ್ತರು ಸೂಚಿಸಿರುವುದಾಗಿ ಮೂಲಗಳು ಹೇಳಿವೆ.

ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಠಾಣೆಗಳಿಗೆ ಅನಿರೀಕ್ಷಿತ ಭೇಟಿ ಆರಂಭಿಸಿದ ನೂತನ ಆಯುಕ್ತ ಅಲೋಕ್ ಕುಮಾರ್ ಅವರು, ಸೋಮವಾರ ರಾತ್ರಿ ಮಡಿವಾಳ ಠಾಣೆಗೆ ತೆರಳಿ ಪರಿಶೀಲಿಸಿದ್ದಾರೆ. ಇದಾದ ನಂತರ ಮಂಗಳವಾರ ಬೆಳಗ್ಗೆ ಹಲಸೂರು ಗೇಟ್, ಜೆ.
ಜೆ.ನಗರ ಹಾಗೂ ಉಪ್ಪಾರಪೇಟೆ ಠಾಣೆಗಳಿಗೆ ಹಠಾತ್ ಭೇಟಿ ನೀಡಿದ ಆಯುಕ್ತರು, ಠಾಣಾಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

click me!