ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ನಿಲ್ದಾಣಗಳ 73 ಕಿಮೀ ನೂತನ ಮೆಟ್ರೋ ಲೈನ್, ಹೊಸ ಕ್ರಿಕೆಟ್ ಕ್ರೀಡಾಂಗಣವೇ ಟಾರ್ಗೆಟ್‌!

Published : May 08, 2026, 05:39 PM IST
metro to cricket stadium Bengaluru

ಸಾರಾಂಶ

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು, ದಕ್ಷಿಣದ ಕಾಳೇನ ಅಗ್ರಹಾರದಿಂದ ಪೂರ್ವದ ಕಾಡುಗೋಡಿ ಟ್ರೀ ಪಾರ್ಕ್‌ವರೆಗೆ 73 ಕಿ.ಮೀ ಉದ್ದದ ಹೊಸ ಮೆಟ್ರೋ ಕಾರಿಡಾರ್ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ಅಧ್ಯಯನ ಪೂರ್ಣಗೊಂಡಿದೆ. ಈ ಮಾರ್ಗವು ಸರ್ಜಾಪುರ, ಅತ್ತಿಬೆಲೆಯಂತಹ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವುದಲ್ಲದೆ, ಆನೇಕಲ್‌ನಲ್ಲಿ ನಿರ್ಮಾಣವಾಗಲಿರುವ ಕ್ರಿಕೆಟ್ ಕ್ರೀಡಾಂಗಣಕ್ಕೂ ನೇರ ಸಂಪರ್ಕ ಕಲ್ಪಿಸಲಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಜೊತೆಗೆ ವೇಗವಾಗಿ ಬೆಳೆಯುತ್ತಿರುವ ಹೊರವಲಯ ಪ್ರದೇಶಗಳನ್ನು ಸಂಪರ್ಕಿಸುವ ಉದ್ದೇಶದಿಂದ ಬಿಎಂಆರ್‌ಸಿಎಲ್‌ ವತಿಯಿಂದ ನಮ್ಮ ಮೆಟ್ರೋ ಮಹತ್ವಾಕಾಂಕ್ಷಿ ಬೃಹತ್ ಯೋಜನೆಗೆ ಚಿಂತನೆ ನಡೆಸಿದೆ . ದಕ್ಷಿಣ ಬೆಂಗಳೂರಿನ ಕಾಳೇನ ಅಗ್ರಹಾರದಿಂದ ಪೂರ್ವ ಭಾಗದ ಕಾಡುಗೋಡಿ ಟ್ರೀ ಪಾರ್ಕ್‌ವರೆಗೆ ಸಂಪರ್ಕ ಕಲ್ಪಿಸುವ ಸುಮಾರು 73 ಕಿಲೋಮೀಟರ್ ಉದ್ದದ ಎತ್ತರದ ಮೆಟ್ರೋ ಕಾರಿಡಾರ್‌ಗೆ ಸಂಬಂಧಿಸಿದ ಕಾರ್ಯಸಾಧ್ಯತಾ ಅಧ್ಯಯನ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಈ ಕಾರ್ಯಸಾಧ್ಯತಾ ವರದಿಯನ್ನು ಇಂಟ್ರೋಸಾಫ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸಿದ್ಧಪಡಿಸಿದ್ದು, ವರದಿ ಸಲ್ಲಿಕೆಯ ನಂತರ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಮುಂದಿನ ಹಂತವಾಗಿ ‘ವಿವರವಾದ ಯೋಜನಾ ವರದಿ’ (ಡಿಪಿಆರ್) ಸಿದ್ಧಪಡಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ.

ದಕ್ಷಿಣ–ಪೂರ್ವ ಟೆಕ್ ಕಾರಿಡಾರ್‌ಗೆ ಸಂಪರ್ಕ

ಪ್ರಸ್ತಾವಿತ ಈ ಮೆಟ್ರೋ ಮಾರ್ಗವು ಬೆಂಗಳೂರಿನ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಉಪನಗರ ಪ್ರದೇಶಗಳಾದ ಬನ್ನೇರುಘಟ್ಟ, ಜಿಗಣಿ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ ವೃತ್ತ ಮತ್ತು ವರ್ತೂರು ಕೋಡಿ ಮೂಲಕ ಹಾದುಹೋಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ನಗರದ ದಕ್ಷಿಣ ಮತ್ತು ಪೂರ್ವ ತಂತ್ರಜ್ಞಾನ ಕಾರಿಡಾರ್‌ಗಳನ್ನು ಒಂದೇ ಮಾರ್ಗದಲ್ಲಿ ಸಂಪರ್ಕಿಸುವ ಮಹತ್ವದ ಯೋಜನೆಯಾಗಿದೆ.

ಈ ಮಾರ್ಗವು ಸಂಪೂರ್ಣ ಎಲಿವೇಟೆಡ್ (ಮೇಲ್ಸೇತುವೆ) ಆಗಿದ್ದು, ಸುಮಾರು 50ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳನ್ನು ಹೊಂದಿರಲಿದೆ. ಇವುಗಳಲ್ಲಿ ಹಲವಾರು ಪ್ರದೇಶಗಳು ಇನ್ನೂ ಅಭಿವೃದ್ಧಿ ಹಂತದಲ್ಲಿರುವುದರಿಂದ, ನಿಲ್ದಾಣಗಳ ನಡುವಿನ ಅಂತರ ಇತರ ಮೆಟ್ರೋ ಮಾರ್ಗಗಳಿಗಿಂತ ಹೆಚ್ಚಿರಬಹುದು ಎಂದು ಅಂದಾಜು ಮಾಡಲಾಗಿದೆ.

ಕ್ರಿಕೆಟ್ ಕ್ರೀಡಾಂಗಣಕ್ಕೆ ನೇರ ಮೆಟ್ರೋ ಸಂಪರ್ಕ

ಈ ಯೋಜನೆಯ ವಿಶೇಷ ಆಕರ್ಷಣೆ ಎಂದರೆ ಆನೇಕಲ್ ತಾಲೂಕಿನಲ್ಲಿ ನಿರ್ಮಾಣಗೊಳ್ಳಲಿರುವ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣಕ್ಕೆ ನೇರ ಸಂಪರ್ಕ ಕಲ್ಪಿಸುವ 5 ಕಿ.ಮೀ ಉದ್ದದ ಸ್ಪರ್ ಲೈನ್. ಜಿಗಣಿ ನಿಲ್ದಾಣದ ನಂತರ ಈ ಮಾರ್ಗವು ವಿಭಜನೆಯಾಗಿ ಕ್ರೀಡಾಂಗಣದತ್ತ ಸಾಗಲಿದೆ. ಈ ಸ್ಪರ್ ಲೈನ್‌ನಲ್ಲಿ ಎರಡು ಹೆಚ್ಚುವರಿ ನಿಲ್ದಾಣಗಳನ್ನು ನಿರ್ಮಿಸಲು ಪ್ಲ್ಯಾನಿಂಗ್ ಮಾಡಲಾಗಿದೆ. ಒಂದು ನಿಲ್ದಾಣವನ್ನು ಕ್ರೀಡಾಂಗಣದ ಪಕ್ಕದಲ್ಲೇ ನಿರ್ಮಿಸಿ ನೇರ ಸಂಪರ್ಕ ಕಲ್ಪಿಸಲಾಗುತ್ತದೆ. ಮತ್ತೊಂದು ನಿಲ್ದಾಣವನ್ನು ಇಂಡ್ಲವಾಡಿ ಗ್ರಾಮದಲ್ಲಿ ನಿರ್ಮಿಸಿ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕಿಸುವಂತೆ ಮಾಡಲಾಗುತ್ತದೆ.

ಈ ಪ್ರಸ್ತಾವಿತ ಕ್ರೀಡಾ ಸಂಕೀರ್ಣವು ಸುಮಾರು 80,000 ಆಸನ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, 24 ವಿವಿಧ ಕ್ರೀಡೆಗಳಿಗೆ ಸೌಲಭ್ಯಗಳು ಮತ್ತು 30,000 ಆಸನಗಳ ಸಭಾಂಗಣವನ್ನು ಒಳಗೊಂಡಿರಲಿದ್ದು, ಒಲಿಂಪಿಕ್ ಗ್ರಾಮಕ್ಕೆ ಸಮಾನ ಪ್ರಮಾಣದ ಯೋಜನೆಯಾಗಿ ಪರಿಗಣಿಸಲಾಗಿದೆ.

ಮುಂದಿನ ಹಂತಗಳು ಮತ್ತು ಸಮಯಾವಕಾಶ

ಕಾರ್ಯಸಾಧ್ಯತಾ ವರದಿಯನ್ನು ರಾಜ್ಯ ಸರ್ಕಾರ ಪರಿಶೀಲಿಸಿದ ನಂತರ ಡಿಪಿಆರ್ ಸಿದ್ಧಪಡಿಸುವ ಬಗ್ಗೆ ತೀರ್ಮಾಣ ಮಾಡಲಾಗುತ್ತದೆ. ಡಿಪಿಆರ್ ಸಿದ್ಧಪಡಿಸಲು ಸುಮಾರು ಒಂದು ವರ್ಷ ಕಾಲ ಬೇಕಾಗಬಹುದು. ಬಳಿಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಅಗತ್ಯ ಅನುಮತಿಗಳು ದೊರೆತರೆ, 2029ರ ಸುಮಾರಿಗೆ ಕಾಮಗಾರಿ ಪ್ರಾರಂಭವಾಗುವ ಲಕ್ಷಣ ಕಾಣಬಹುದು. ಈ ಯೋಜನೆ ಪೂರ್ಣಗೊಳ್ಳಲು 5ರಿಂದ 10 ವರ್ಷಗಳವರೆಗೆ ಸಮಯ ಹಿಡಿಯಬಹುದು ಎಂಬ ಅಂದಾಜು ಇದೆ.

ಬಿಎಂಆರ್‌ಸಿಎಲ್ ವಿಸ್ತರಣಾ ಯೋಜನೆಯ ಭಾಗ

ಈ 73 ಕಿ.ಮೀ ಉದ್ದದ ಕಾರಿಡಾರ್, ಬಿಎಂಆರ್‌ಸಿಎಲ್‌ನ ಒಟ್ಟು 210.9 ಕಿ.ಮೀ ವಿಸ್ತರಣಾ ಯೋಜನೆಯ ಪ್ರಮುಖ ಭಾಗವಾಗಿದೆ. ಈ ಯೋಜನೆ ಪೂರ್ಣಗೊಂಡ ನಂತರ ಬೆಂಗಳೂರಿನ  ಒಟ್ಟು ಮೆಟ್ರೋ ಜಾಲವು ಸುಮಾರು 468 ಕಿ.ಮೀ ವರೆಗೆ ವಿಸ್ತರಣೆಯಾಗಲಿದೆ.

ತುಮಕೂರು, ಬಿಡದಿ, ಹೊಸಕೋಟೆ ಮುಂತಾದ ನೆರೆಹೊರೆಯ ನಗರಗಳಿಗೆ ವಿಸ್ತರಣೆಗಿಂತ, ವೇಗವಾಗಿ ಬೆಳೆಯುತ್ತಿರುವ ಉಪನಗರ ಪ್ರದೇಶಗಳನ್ನು ಸಂಪರ್ಕಿಸುವುದೇ ಈ ಯೋಜನೆಯ ಮುಖ್ಯ ಗುರಿ. ಇದೇ ವೇಳೆ, ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರುವರೆಗೆ ಅಂತಾರಾಜ್ಯ ಮೆಟ್ರೋ ನಿರ್ಮಾಣದ ಪ್ರಸ್ತಾಪಕ್ಕೆ ಹೆಚ್ಚು ಆಸಕ್ತಿ ತೋರದ ಬಿಎಂಆರ್‌ಸಿಎಲ್, ಹಳದಿ ಮಾರ್ಗವನ್ನು ಬೊಮ್ಮಸಂದ್ರದಿಂದ ಅತ್ತಿಬೆಲೆಯವರೆಗೆ 11 ಕಿ.ಮೀ ವಿಸ್ತರಿಸುವ ಯೋಜನೆಗೂ ಒತ್ತು ನೀಡುತ್ತಿದೆ.

ಸಂಚಾರ ದಟ್ಟಣೆ ನಿವಾರಣೆಗೆ ಪ್ರಮುಖ ಹೆಜ್ಜೆ

ಒಟ್ಟಾರೆ, ಈ ಬೃಹತ್ ಮೆಟ್ರೋ ಯೋಜನೆ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಒದಗಿಸುವತ್ತ ಪ್ರಮುಖ ಹೆಜ್ಜೆಯಾಗಲಿದೆ. ನಗರ ವಿಸ್ತರಣೆ ಮತ್ತು ಐಟಿ ಕಾರಿಡಾರ್ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಈ ಯೋಜನೆ, ಭವಿಷ್ಯದ ನಗರ ಸಾರಿಗೆ ವ್ಯವಸ್ಥೆಗೆ ಹೊಸ ಭಾಷ್ಯ ಬರೆಯುವುದರಲ್ಲಿ ಅನುಮಾನವಿಲ್ಲ.

PREV
Read more Articles on
click me!

Recommended Stories

ಶೃಂಗೇರಿ ಕ್ಷೇತ್ರದಲ್ಲಿ ಅಂಚೆ‌ ಮತ ಮರು ಎಣಿಕೆ ವಿವಾದ: ಆಣೆ-ಪ್ರಮಾಣ-ಪ್ರಾರ್ಥನೆ ರಾಜಕೀಯ ಶುರು
ಬೆಂಗಳೂರು: ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ ಮರುದಿನವೇ ರೋಗಿಯ ಚಿನ್ನಾಭರಣ ಕದ್ದ ಖತರ್ನಾಕ್ ಮಹಿಳೆ ಅರೆಸ್ಟ್!