
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.08): ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಮೂರು ವರ್ಷಗಳ ಬಳಿಕ ಬಿಜೆಪಿಯ ಅಭ್ಯರ್ಥಿ ಡಿ.ಎನ್.ಜೀವರಾಜ್ ಗೆಲುವು ಸಾಧಿಸಿದ ಬಳಿಕ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಆಣೆ-ಪ್ರಮಾಣ-ಪ್ರಾರ್ಥನೆಯ ರಾಜಕೀಯ ಜನ್ಮ ಪಡೆದಿದೆ. 2023ರ ಸಾರ್ವತ್ರಿಕ ಚುನಾವಣೆ ಫಲಿತಾಂಶದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ 201 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
2026ರ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ 52 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ, ಈಗ 2023ರಲ್ಲಿ ಬಿಜೆಪಿ ಪಕ್ಷದಿಂದ ಚುನಾವಣಾ ಮತ ಎಣಿಕೆ ಕೇಂದ್ರದ ಏಜೆಂಟ್ ಆಗಿದ್ದ ರಾಮಸ್ವಾಮಿ ಶೆಟ್ಟಿಗದ್ದೆ ಹಾಗೂ ಸತೀಶ್ ಅದ್ದಡ ಕೊಪ್ಪ ತಾಲೂಕಿನ ವೀರಭದ್ರಸ್ವಾಮಿ ಹಾಗೂ ಗಬ್ಬಾನೆ ಬೂತರಾಯನ ದೇಗುಲದಲ್ಲಿ ಪ್ರಮಾಣ ಮಾಡಿದ್ದು 2023ರ ಮತ ಎಣಿಕೆ ಸರಳ ಹಾಗೂ ಪಾರದರ್ಶಕವಾಗಿ ನಡೆದಿದೆ ಎಂದು ನಮಗೆ ಅನ್ನಿಸಿದೆ ಎಂದು ದೇವರ ಮುಂದೆ ಸ್ಪಷ್ಟಪಡಿಸಿದ್ದಾರೆ.
ಅಂದು ರಾಮಸ್ವಾಮಿ ಶೆಟ್ಟಿಗದ್ದೆ ಇವಿಎಂ ಕೌಂಟ್ ನೋಡಿಕೊಳ್ಳುತ್ತಿದ್ದರೆ, ಸತೀಶ್ ಅದ್ದಡ ಅಂಚೆ ಮತಗಳ ಎಣಿಕೆ ನೋಡಿಕೊಳ್ಳುತ್ತಿದ್ದರು. ಇಂದು ಇಬ್ಬರು ದೇವಸ್ಥಾನದಲ್ಲಿ ಮತ ಎಣಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜೀವರಾಜ್ ಗೆಲ್ಲುತ್ತಿದ್ದಂತೆ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷ ವಿರೋಧಿ ಕೆಲಸ ಮಾಡಿದವರಿಗೆ ಯಾವಾಗ ಗೇಟ್ ಪಾಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದರು. ರಾಮಸ್ವಾಮಿ ಹಾಗೂ ಸತೀಶ್ ಕಾಂಗ್ರೆಸ್ ಜೊತೆ ಕೈ ಸೇರಿಸಿ ಬಿಜೆಪಿ ಸೋಲಿಗೆ ಕಾರಣರಾಗಿದ್ದರು ಎಂದು ಆರೋಪಿಸಿದ್ದರು.
ಆ ಕಾರಣಕ್ಕಾಗಿ ಇಂದು ರಾಮಸ್ವಾಮಿ ಹಾಗೂ ಸತೀಶ್ ದೇವರ ಮುಂದೆ ಪ್ರಮಾಣ ಮಾಡಿ ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಮತ ಎಣಿಕೆ ಪಾರದರ್ಶಕವಾಗಿತ್ತು. ನಮ್ಮ ವಿರುದ್ಧ ಅಪಪ್ರಚಾರ ಮಾಡುವವರಿಗೆ ದೇವರೇ ನೋಡಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರು ನಾಳೆ ಕೊಪ್ಪದ ವೀರಭದ್ರಸ್ವಾಮಿ ದೇಗುಲದಲ್ಲಿ ಅಂಚೆ ಮತದ ಕಳ್ಳತನದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದರು.