
ಬೆಂಗಳೂರು: ಲೇಡಿಸ್ ಪಿ.ಜಿಗೆ ನುಗ್ಗಿ ಯುವತಿ ಲೈಂಗಿಕ ಕಿರುಕಳ ನೀಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಕೆ. ನರೇಶ್ ಪಟ್ಯಂ ಬಂಧಿತ ಆರೋಪಿಯಾಗಿದ್ದು, ಈತ ಆಂಧ್ರದ ಮದನ ಪಲ್ಲಿ ಮೂಲದವನೆಂದು ತಿಳಿದುಬಂದಿದೆ. ಆರೋಪಿ ವಿರುದ್ಧ ಮದನಪಲ್ಲಿಯಲ್ಲಿ ಕೂಡ ಎರಡು ಮೊಬೈಲ್ ಕಳ್ಳತನ ಪ್ರಕರಣಗಳಿವೆ. ಘಟನೆ ನಂತರ ಸಿಸಿಟಿವಿ ಆದರಿಸಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆರೋಪಿ ಬಂಧನವಾಗಿದೆ. ಈತ ಬೈಕ್ ಟ್ಯಾಕ್ಸಿ ಹಾಗೂ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡು ಅವಲಹಳ್ಳಿಯಲ್ಲಿ ಹೆಂಡತಿಯೊಂದಿಗೆ ವಾಸವಾಗಿದ್ದ, ಆದರೆ ಕಳ್ಳತನ ಮಾಡುವುದು ಕೂಡ ಆತನ ಕಸುಬಾಗಿತ್ತು. ಹೀಗಾಗಿ ಪಿಜಿಗೆ ನುಗ್ಗಿ ಕಳ್ಳತನ ಮಾಡಿ ಯುವತಿ ಮೇಲೆ ಹಲ್ಲೆ ಮಾಡಿದ್ದ ಇದೀಗ ಸುದ್ದಗುಂಟೆ ಪಾಳ್ಯ ಪೊಲೀಸರಿಂದ ಆರೋಪಿ ಬಂಧನವಾಗಿದೆ.
ಬೆಂಗಳೂರು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಪಿಜಿಯಲ್ಲಿ ವಾಸಿಸುತ್ತಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಳಿಕ ಆರೋಪಿ ಹಣ ಕದ್ದು ಪರಾರಿಯಾಗಿದ್ದ, ಘಟನೆ ದುರ್ಗಾ ಲೇಡೀಸ್ ಪಿಜಿಯಲ್ಲಿ ಆಗಸ್ಟ್ ತಿಂಗಳ 29ನೇ ತಾರೀಖು ಮುಂಜಾನೆ ಸುಮಾರು 3 ಗಂಟೆ ವೇಳೆಗೆ ನಡೆದಿತ್ತು. ಪಿಜಿಯಲ್ಲಿ ಮಲಗಿದ್ದ ಯುವತಿಯ ರೂಮಿಗೆ ಆರೋಪಿ ನುಗ್ಗಿದ್ದ, ಮೊದಲು ಯುವತಿ ತನ್ನ ರೂಮ್‌ಮೇಟ್ ಎಂದು ಭಾವಿಸಿದ್ದಳು. ಆದರೆ ಆ ವ್ಯಕ್ತಿ ಅಪರಿಚಿತನಾಗಿದ್ದು, ಪಿಜಿಯಲ್ಲಿನ ಎಲ್ಲಾ ರೂಮ್‌ಗಳ ಬಾಗಿಲುಗಳನ್ನು ಲಾಕ್ ಮಾಡಿದ ನಂತರ ನೇರವಾಗಿ ಯುವತಿಯ ಬಳಿ ಹೋಗಿ ಅವಳ ಮೈಮೇಲೆ ಕೈ ಹಾಕಿದ್ದಾನೆ. ಇದನ್ನು ತಡೆಯಲು ಯುವತಿ ವಿರೋಧ ವ್ಯಕ್ತಪಡಿಸಿದಾಗ, ಆರೋಪಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ಕೂಗಾಡಲು ಯತ್ನಿಸಿದ ಯುವತಿಯನ್ನು ತಡೆಯಲು ಆರೋಪಿ ಅವಳ ತಲೆಗೆ ಹೊಡೆದು, ಕಪಾಳಕ್ಕೆ ಹೊಡೆದು ಎಳೆದಾಡಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ.
ಪ್ರತಿರೋಧ ಹೆಚ್ಚಾದಾಗ ಆರೋಪಿ ಯುವತಿಯನ್ನು ಬಿಟ್ಟು, ರೂಮಿನಲ್ಲಿ ಇಟ್ಟುಕೊಂಡಿದ್ದ ₹2,500 ನಗದು ಕದ್ದುಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದ. ಯುವತಿ ಕೂಗಾಟಕ್ಕೆ ನೆರೆಯವರು ಎಚ್ಚರಗೊಂಡು ಸಹಾಯಕ್ಕೆ ಧಾವಿಸಿದ್ದಾರೆ. ಘಟನೆಯ ನಂತರ ಯುವತಿ ನೀಡಿದ ದೂರು ಆಧಾರದ ಮೇಲೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆದರೆ, ಘಟನೆ ನಡೆದಿದ್ದು ಎರಡು ದಿನಗಳಾದರೂ ಆರೋಪಿ ಪತ್ತೆಯಾಗಿರಲಿಲ್ಲ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಸ್ಥಳೀಯ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚುವ ಯಶಸ್ವಿಯಾಗಿದ್ದಾರೆ. ಮಹಿಳೆಯರು ಸುರಕ್ಷಿತವಾಗಿರಬೇಕಾದ ಸ್ಥಳದಲ್ಲೇ ಇಂತಹ ಘಟನೆ ಸಂಭವಿಸಿರುವುದು ಪೋಷಕರಲ್ಲಿ ಹಾಗೂ ಪಿಜಿಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿಯರಲ್ಲಿ ಭಯ ಹುಟ್ಟಿಸಿದೆ.