ರಂಜಾನ್ ಹಬ್ಬದ ದಾನವೇ ವೃದ್ಧೆಗೆ ಮರಣಶಾಸನವಾಯ್ತು: ಜನ ಹಣ ಕೊಟ್ಟಿದ್ದಕ್ಕೆ ಪಕ್ಕದಲ್ಲಿದ್ದ ಭಿಕ್ಷುಕರೇ ಹೊಡೆದು ಕೊಂದರು!

Published : Mar 23, 2026, 05:18 PM IST
Bengaluru Old woman death

ಸಾರಾಂಶ

ಪವಿತ್ರ ರಂಜಾನ್ ಹಬ್ಬದಂದು ಬೆಂಗಳೂರಿನ ನೀಲಸಂದ್ರದಲ್ಲಿ, ಭಿಕ್ಷೆಯ ಹಣ ಹಂಚಿಕೆ ವಿಚಾರವಾಗಿ ಸಹಚರರೇ ಶಕಿರಾ ಎಂಬ ವೃದ್ಧೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮಸೀದಿಯ ಮುಂದೆ ನಡೆದ ಈ ಘಟನೆಯಲ್ಲಿ, ಹಣದಲ್ಲಿ ಪಾಲು ನೀಡಲು ನಿರಾಕರಿಸಿದ್ದಕ್ಕೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ.

ಬೆಂಗಳೂರು (ಮಾ.23): ಪವಿತ್ರ ರಂಜಾನ್ ಹಬ್ಬದ ದಿನದಂದು ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಹಬ್ಬದ ಸಂಭ್ರಮದಲ್ಲಿ ಜನರೆಲ್ಲರೂ ಪ್ರಾರ್ಥನೆಯಲ್ಲಿ ತೊಡಗಿದ್ದ ವೇಳೆ, ಮಸೀದಿಯ ಮುಂಭಾಗವೇ ಭಿಕ್ಷಾಟನೆ ಮಾಡುತ್ತಿದ್ದ ವೃದ್ಧೆಯೊಬ್ಬರನ್ನು ಅವರ ಸಹಚರರೇ ಹಣದ ಹಂಚಿಕೆ ವಿಚಾರಕ್ಕಾಗಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆ ನಗರದ ನೀಲಸಂದ್ರದ ಉಮರ್ ಫರೂಕ್ ಮಸೀದಿ ಬಳಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿದೆ.

ಏನಿದು ಘಟನೆ?

ಕೊಲೆಯಾದ ದುರ್ದೈವಿ ವೃದ್ಧೆಯನ್ನು ಶಕಿರಾ (68) ಎಂದು ಗುರುತಿಸಲಾಗಿದ್ದು, ಇವರು ಹಲವು ವರ್ಷಗಳಿಂದ ನೀಲಸಂದ್ರ ಭಾಗದಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ರಂಜಾನ್ ಹಬ್ಬದ ದಿನವಾದ್ದರಿಂದ ಮಸೀದಿಗೆ ಬರುವ ಭಕ್ತರು ಉದಾರವಾಗಿ ದಾನ-ಧರ್ಮ ಮಾಡುತ್ತಿದ್ದರು. ವಯಸ್ಸಾದ ವೃದ್ಧೆ ಎಂಬ ಕಾರಣಕ್ಕೆ ಶಕೀರಾಗೆ ಇತರರಿಗಿಂತ ಹೆಚ್ಚಿನ ಹಣ ಸಂಗ್ರಹವಾಗಿತ್ತು. ಇದೇ ವಿಷಯ ಇವರ ಜೊತೆಯಲ್ಲೇ ಭಿಕ್ಷಾಟನೆ ಮಾಡುತ್ತಿದ್ದ ಹುಸೇನ್, ರೇಶ್ಮಾ ಮತ್ತು ಫಯಾಜ್ ಎಂಬುವವರ ಕಣ್ಣು ಕೆಂಪು ಮಾಡಿದೆ.

ಹಣದ ಶೇರ್ ನೀಡದಿದ್ದಕ್ಕೆ ಪ್ರಾಣ ತೆಗೆದರು:

ಆರೋಪಿಗಳಾದ ಹುಸೇನ್, ರೇಶ್ಮಾ ಮತ್ತು ಫಯಾಜ್ ಅವರು ಶಕಿರಾ ಬಳಿ ಹೋಗಿ, 'ನಿನಗೆ ವಯಸ್ಸಾಗಿದೆ ಎಂದು ಜನ ಜಾಸ್ತಿ ಹಣ ನೀಡುತ್ತಿದ್ದಾರೆ. ನಮಗೆ ಇವತ್ತು ಹಣದ ಶೇಖರಣೆ ಕಡಿಮೆಯಾಗಿದೆ. ನಿನಗೆ ಬಂದಿರುವ ಹಣದಲ್ಲಿ ನಮಗೂ ಸಮನಾದ ಶೇರ್ ನೀಡು' ಎಂದು ಗಲಾಟೆ ತೆಗೆದಿದ್ದಾರೆ. ಆದರೆ ಶಕಿರಾ ಇದಕ್ಕೆ ಒಪ್ಪದಿದ್ದಾಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಸಂಭ್ರಮದ ಹಬ್ಬದ ದಿನವೇ ಮಾನವೀಯತೆ ಮರೆತ ಹಂತಕರು, ಅಲ್ಲೇ ಬಿದ್ದಿದ್ದ ಮರದ ದೊಣ್ಣೆಯಿಂದ ಶಕಿರಾ ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ವೃದ್ಧೆ ಮಸೀದಿಯ ಮುಂಭಾಗದ ರಸ್ತೆಯಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

ಪೊಲೀಸರ ಭೇಟಿ ಮತ್ತು ತನಿಖೆ:

ಘಟನೆ ನಡೆದ ತಕ್ಷಣ ಅಶೋಕ್ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಪವಿತ್ರ ಹಬ್ಬದ ದಿನದಂದು ಕೇವಲ ಭಿಕ್ಷೆಯ ಹಣಕ್ಕಾಗಿ ಇಂತಹ ಕ್ರೂರ ಕೃತ್ಯ ಎಸಗಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಒಂದು ಕಡೆ ಇಡೀ ನಗರ ಹಬ್ಬದ ಸಂಭ್ರಮದಲ್ಲಿದ್ದರೆ, ಮತ್ತೊಂದೆಡೆ ಹಸಿದ ಹೊಟ್ಟೆಗೆ ಭಿಕ್ಷೆ ಬೇಡುತ್ತಿದ್ದವರ ನಡುವೆಯೇ ಈ ಘೋರ ಹತ್ಯೆ ನಡೆದಿದೆ. ಹಣದ ಹಂಚಿಕೆ ವಿಚಾರದಲ್ಲಿ ಉಂಟಾದ ಅಸೂಯೆ ಒಬ್ಬ ಜೀವವನ್ನೇ ಬಲಿಪಡೆದಿದೆ. ಈ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

PREV
Read more Articles on
click me!

Recommended Stories

ಸ್ಕೂಟರ್ ಬಂದು ಗುದ್ದಿದ್ರೂ ಕೂಲ್ ಆಗಿದ್ದ ಕಾರ್ ಡ್ರೈವರ್; ಇದು 'ಬೆಂಗಳೂರು ಟ್ರಾಫಿಕ್ ಕಲಿಸಿದ ಪಾಠ' ಎಂದ ನೆಟ್ಟಿಗರು!
ಬೆಂಗಳೂರು: ಮಧ್ಯರಾತ್ರಿ ಮಾಜಿ ಡಾನ್ ಮಗನಿಂದ ಐಷಾರಾಮಿ ಕಾರು ಡ್ರಿಫ್ಟಿಂಗ್, ನಾನವನಲ್ಲ ನಾನವನಲ್ಲ ಅಂತಿರೋ ರಿಕ್ಕಿ ರೈ!