ನೇರಳೆ ಮಾರ್ಗ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಗುಡ್‌ ನ್ಯೂಸ್ ಕೊಟ್ಟ ಬಿಎಂಆರ್‌ಸಿಎಲ್‌!

By Gowthami K  |  First Published Jul 6, 2024, 12:02 PM IST

ಬೆಂಗಳೂರು ಮೆಟ್ರೋ ರೈಲು ನಿಗಮವು ಪ್ರಯಾಣಿಕರ ಒತ್ತಾಯದ ಮೇರೆಗೆ ಜುಲೈ 06ರಿಂದ ನೇರಳೆ ಮಾರ್ಗದಲ್ಲಿ ಹೆಚ್ಚುವರಿ ಮೆಟ್ರೋ ರೈಲು ಸೇವೆ ಆರಂಭಿಸಿದೆ.


ಬೆಂಗಳೂರು (ಜು.6):  ಬೆಂಗಳೂರು ಮೆಟ್ರೋ ರೈಲು ನಿಗಮವು ಪ್ರಯಾಣಿಕರ ಒತ್ತಾಯದ ಮೇರೆಗೆ ಜುಲೈ 06ರಿಂದ ನೇರಳೆ ಮಾರ್ಗದಲ್ಲಿ ಹೆಚ್ಚುವರಿ ಮೆಟ್ರೋ ರೈಲು ಸೇವೆ ಆರಂಭಿಸಿದೆ. ಪ್ರಯಾಣಿಕರ ಉತ್ತಮ ಪ್ರತಿಕ್ರಿಯೆ ಹಾಗೂ ನಿರಂತರ ಪ್ರೋತ್ಸಾಹಕ್ಕಾಗಿ ಬಿಎಂಆರ್​ಸಿಎಲ್ ​ಧನ್ಯವಾದ ತಿಳಿಸಿ ಈ ಗುಡ್‌ ನ್ಯೂಸ್ ನೀಡಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿಂದ ಹೆಚ್ಚುವರಿ ಮೆಟ್ರೋ ರೈಲು ಸೇವೆ ಕಲ್ಪಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ಮೆಜೆಸ್ಟಿಕ್‌ನಿಂದ ಈವರೆಗೆ  9 ರೈಲುಗಳು ಮಾತ್ರ ಪ್ರಯಾಣ  ಮಾಡುತ್ತಿತ್ತು, ಇದೀಗ ಹೆಚ್ಚುವರಿ 15 ಮೆಟ್ರೋ ರೈಲುಗಳನ್ನು ಪ್ರಯಾಣಿಕರ ಸೇವೆಗೆ ಒದಗಿಸಲಾಗುತ್ತದೆ. ಈ 15 ರೈಲುಗಳಲ್ಲಿ 10 ರೈಲುಗಳು ಪಟ್ಟಂದೂರು, ಅಗ್ರಹಾರದ (ಐಟಿಪಿಎಲ್‌) ವರೆಗೆ, 4 ರೈಲುಗಳು ವೈಟ್‌ಫೀಲ್ಡ್‌ ಮತ್ತು 1 ರೈಲು ಬೈಯಪ್ಪನಹಳ್ಳಿ ಕಡೆಗೆ ಸಂಚರಿಸಲಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Tap to resize

Latest Videos

undefined

3ನೇ ಹಂತದ ಮೆಟ್ರೋಗೆ ಪಿಐಬಿ ಸಮ್ಮತಿ, ಸುರಂಗ ಮಾರ್ಗ ರಸ್ತೆ ಮತ್ತೆ ಕುಸಿತ

ರೈಲುಗಳು ಕೆಂಪೇಗೌಡ ನಿಲ್ದಾಣದಿಂದ ಬೆಳಗ್ಗೆ 8:48 ಗಂಟೆಯಿಂದ 8:58, 9:18, 9:29, 9:39, 9:50, 10:00, 10:21, 10:39, 10:50, 11:00, 11:22 ಗಂಟೆಗೆ ಪೂರ್ವಕ್ಕೆ ಸಂಚರಿಸಲಿವೆ. ಅಲ್ಲದೇ ಮೆಜೆಸ್ಟಿಕ್‌ನಲ್ಲಿ 3.3 ನಿಮಿಷಗಳ  ಅಂತರದಲ್ಲಿ ಬೆಳಗ್ಗೆ 10:25 ಗಂಟೆ ವರೆಗೆ ನಿಯಮಿತವಾಗಿ ಸಾಗುವ ರೈಲು ಸೇವೆಯೂ ಲಭ್ಯವಿರಲಿದೆ.

ಪ್ರಯಾಣಿಕರ ಬೇಡಿಕೆಗೆ ಸ್ಪಂದನೆ ನೀಡಿರುವ ಬಿಎಂಆರ್‌ಸಿಎಲ್‌ ಗರುಡಾಚಾರ್‌ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಕೊನೆಗೊಳ್ಳುವ 14 ರೈಲುಗಳಲ್ಲಿ 6 ರೈಲುಗಳನ್ನು ಪಟ್ಟಂದೂರು ಅಗ್ರಹಾರ (ITPL) ಅಥವಾ ವೈಟ್‌ಫೀಲ್ಡ್‌ವರೆಗೆ ಮೆಟ್ರೋ ವಿಸ್ತರಣೆ ಮಾಡಲಾಗಿದೆ. ಗರುಡಾಚಾರ್‌ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಪಟ್ಟಂದೂರು ಅಗ್ರಹಾರ ಕಡೆಗೆ ಪ್ರಯಾಣಿಸಲು ಮುಂದಿನ ರೈಲು 3.5 ನಿಮಿಷಗಳ  ಅಂತರದಲ್ಲಿ ಇರಲಿದೆ. ಜೊತೆಗೆ 5 ನಿಮಿಷಗಳ ಅಂತರದಲ್ಲಿ ಬೈಯಪ್ಪನಹಳ್ಳಿಯಿಂದ ಸಂಜೆ 4:40ರ ಬದಲಿಗೆ 4:20ಕ್ಕೆ ಮೈಸೂರು ರಸ್ತೆ ನಿಲ್ದಾಣದ ಕಡೆಗೆ ಮೆಟ್ರೋ ಪ್ರಾರಂಭವಾಗಲಿದೆ.  ಇನ್ನು ಹಸಿರು ಮಾರ್ಗದ ರೈಲುಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.

ಬೆಂಗಳೂರು: ಮಲ್ಲಿಗೆ ಕಾರಿಡಾರ್‌ 14 ನಿಲ್ದಾಣಗಳ ನಿರ್ಮಾಣಕ್ಕೆ ಕೆ-ರೈಡ್‌ ಅಸ್ತು

ಬೈಯಪ್ಪನಹಳ್ಳಿ ಮೆಟ್ರೋ ಹಿಂಬದಿ ದ್ವಾರದಿಂದ ಬಿಎಂಟಿಸಿ ಬಸ್‌ ಸೇವೆ:
ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಹಿಂಬದಿ ದ್ವಾರದಿಂದ ರಾಮಮೂರ್ತಿನಗರ ಮೇಲ್ಸೇತುವೆವರೆಗೆ ಜುಲೈ 3ರಿಂದ ಬಸ್‌ ಸೇವೆ ಆರಂಭಿಸಿದೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಹಿಂಬದಿ ದ್ವಾರದಿಂದ ಹೊರಡುವ ಬಸ್‌, ಬಿ.ಚನ್ನಸಂದ್ರ, ಎಸ್‌ಬಿಐ ಬ್ಯಾಂಕ್‌, ಕಸ್ತೂರಿನಗರ 2ನೇ ಹಂತ, ಬೆನ್ನಿಗಾನಹಳ್ಳಿ ಮೇಲ್ಸೇತುವೆ, ಸದಾನಂದನಗರ ಮಾರ್ಗವಾಗಿ ಸಂಚರಿಸಿ ರಾಮಮೂರ್ತಿನಗರ ಮೇಲ್ಸೇತುವೆಗೆ ತಲುಪಲಿದೆ. ಈ ಮಾರ್ಗದಲ್ಲಿ ಒಟ್ಟು 11 ಟ್ರಿಪ್‌ಗಳಲ್ಲಿ ಬಸ್‌ ಸೇವೆ ನೀಡಲಾಗುತ್ತಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಚಾಲಕ ರಹಿತ ಮೆಟ್ರೋ ರೈಲಿನ ಪ್ರಾಯೋಗಿಕ ಸಿಗ್ನಲಿಂಗ್‌ ಪರೀಕ್ಷೆ:
ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ‘ಹಳದಿ’ ಮಾರ್ಗದಲ್ಲಿ ನಡೆಯುತ್ತಿದ್ದ ಚಾಲಕ ರಹಿತ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರದ ಒಂದು ಹಂತ ಮುಕ್ತಾಯವಾಗಿದ್ದು, ಸಿಗ್ನಲಿಂಗ್ ಪರೀಕ್ಷೆ ಆರಂಭವಾಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಕಳೆದ ಹದಿನೈದು ದಿನಗಳಿಂದ ನಡೆದಿದ್ದ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಆರಂಭವಾದ ಸಿಗ್ನಲಿಂಗ್‌ ತಪಾಸಣೆ ಮುಗಿಯುತ್ತಿದ್ದಂತೆ ದೂರಸಂಪರ್ಕ ಹಾಗೂ ವಿದ್ಯುತ್ ಪರೀಕ್ಷೆಗಳು ನಡೆಯಲಿದೆ.

ಹಳದಿ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ಸ್ಟೇಷನ್‌ಗಳು ಇದ್ದು, ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರವನ್ನು ಸಂಪರ್ಕಿಸಲಿದೆ. 18.82 ಕಿ.ಮೀ. ಉದ್ದದ ಈ ಮೆಟ್ರೋ ಮಾರ್ಗದಲ್ಲಿ ಹೊಸ ಮಾದರಿಯ ಚಾಲಕ ರಹಿತ ರೈಲು ಸಂಚಾರ ನಡೆಯಲಿರುವ ಕಾರಣ 37 ಬಗೆಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದಾದ ಬಳಿಕ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಹಾಗೂ ರೈಲ್ವೆ ಸುರಕ್ಷತಾ ಆಯುಕ್ತರಿಂದ ತಪಾಸಣೆ ನಡೆಯಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ಸಿಎಂಆರ್‌ಎಸ್‌ ಹಸಿರು ನಿಶಾನೆ ಬಳಿಕ ವರ್ಷಾಂತ್ಯಕ್ಕೆ ಹಳದಿ ಮಾರ್ಗದಲ್ಲಿ ರೈಲುಗಳ ವಾಣಿಜ್ಯ ಸೇವೆ ಆರಂಭವಾಗುವ ನಿರೀಕ್ಷೆಯಿದೆ.

click me!