2006ರ ಮೊದಲ ಹಂತದ ಕಾಮಗಾರಿ: 1 ಮರಕ್ಕೆ ಬದಲಾಗಿ 10 ಸಸಿಗಳನ್ನು ನೆಡ್ತೀವಿ ಎಂದಿದ್ದ BMRCL, 21,604 ಮರಗಳು ಎಲ್ಲಿ ಹೋದವು?

Kannadaprabha News   | Kannada Prabha
Published : Oct 09, 2026, 07:25 AM IST
BMRCL

ಸಾರಾಂಶ

ಬೆಂಗಳೂರಿನಲ್ಲಿ ಮೆಟ್ರೋ ಮೊದಲ ಹಂತದ ಕಾಮಗಾರಿಗಾಗಿ ಕಡಿದ 2,106 ಮರಗಳಿಗೆ ಪರಿಹಾರವಾಗಿ ನೆಡಬೇಕಿದ್ದ 21,604 ಗಿಡಗಳ ಬಗ್ಗೆ BMRCL ಬಳಿ ಯಾವುದೇ ಮಾಹಿತಿ ಇಲ್ಲ. ಸಿಎಜಿ ವರದಿಯಲ್ಲಿ ಈ ನಿರ್ಲಕ್ಷ್ಯ ಬಹಿರಂಗ., ಗಿಡಗಳ ನಿರ್ವಹಣೆ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಮೆಟ್ರೋ ಸಂಸ್ಥೆ ಒಪ್ಪಿಕೊಂಡಿದೆ.

ಬೆಂಗಳೂರು : ಬಿಎಂಆರ್‌ಸಿಎಲ್ ಸಂಸ್ಥೆಯಿಂದ ಒಂದನೇ ಹಂತದಲ್ಲಿ ತೆರವುಗೊಳಿಸಿದ 2,106 ಮರಗಳಿಗೆ ಪರಿಹಾರವಾಗಿ ಬೆಳೆಸಬೇಕಾದ 21,604 ಗಿಡಗಳ ಬಗ್ಗೆ ಸಂಸ್ಥೆಯಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಮೆಟ್ರೋ ತಿಳಿಸಿದ್ದು, ಇದರಿಂದಾಗಿ 20 ವರ್ಷದ ಹಿಂದೆ ತೆರವುಗೊಳಿಸಿದ 2106 ಮರಗಳ ಬದಲಿಗೆ ಪರ್ಯಾಯ ಪರಿಹಾರ ಕಲ್ಪಿಸದೆ ಮೆಟ್ರೋ ನಿರ್ಲಕ್ಷಿಸಿದೆ.

ನಗರದಲ್ಲಿ 2006ರಲ್ಲಿ ಆರಂಭಗೊಂಡ ಮೆಟ್ರೋ ಕಾಮಗಾರಿ

ನಗರದಲ್ಲಿ 2006ರಲ್ಲಿ ಆರಂಭಗೊಂಡ ಮೆಟ್ರೋ ಕಾಮಗಾರಿಗಳಿಗೆ ಅಡ್ಡಿಯಾಗಿದ್ದ 2,106 ಮರಗಳನ್ನು ತೆರವುಗೊಳಿಸಲು ಬಿಎಂಆರ್ ಸಿಎಲ್ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿತ್ತು. ಅರಣ್ಯ ಕಾಯ್ದೆಯಂತೆ ಪರಿಹಾರವಾಗಿ ತೆರವುಗೊಳಿಸಿದ ಅಥವಾ ಸ್ಥಳಾಂತರಿಸಿದ ಪ್ರತಿ 1 ಮರಕ್ಕೆ ಬದಲಾಗಿ 10 ಎತ್ತರದ ಮತ್ತು ಆರೋಗ್ಯಕರ ಸಸಿಗಳನ್ನು ನೆಡುವುದು ಹಾಗೂ ಅವುಗಳನ್ನು 3 ವರ್ಷಗಳ ಅವಧಿಗೆ ಸೂಕ್ತ ಹಾಗೂ ಪರಿಣಾಮಕಾರಿ ಆರೈಕೆ ಹಾಗೂ ನಿರ್ವಹಣೆ ಬಿಎಂಆರ್ ಸಿಎಲ್ ಜವಾಬ್ದಾರಿಯಾಗಿತ್ತು.

1 ಮರಕ್ಕೆ 10 ಮರ ಎಲ್ಲಿ ಹೋದವು?

ಈ ಕುರಿತು ಮೆಟ್ರೋ ಯೋಜನೆ ಆರಂಭಿಸುವ ಆರಂಭದಲ್ಲಿ ಅರಣ್ಯ ಇಲಾಖೆ ಜೊತೆ ಸಂಸ್ಥೆ ಒಪ್ಪಂದ ಮಾಡಿಕೊಂಡಿತ್ತು. ಮೊದಲ ಹಂತದಲ್ಲಿ ಬಿಎಂಆರ್ ಸಿಎಲ್ ಅಂದಿನ ಬಿಬಿಎಂಪಿ, ಬಿಡಿಎ ಎನ್‌ಜಿಒಗಳು ಹಾಗೂ ಇತರ ಇಲಾಖೆಗಳ ಮೂಲಕ 21,604 ಮರಗಳನ್ನು ನೆಡುವ ಪರಿಹಾರ ಕ್ರಮ ಕೈಗೊಂಡಿತ್ತು.

ಆದರೆ, ಅವುಗಳ ನಿರ್ವಹಣೆ ಜವಾಬ್ದಾರಿಯನ್ನು ಮಾತ್ರ ಸಂಸ್ಥೆ ಹೊರಲಿಲ್ಲ. ಈ ಕಾರಣದಿಂದಾಗಿ 21 ಸಾವಿರ ಗಿಡಗಳನ್ನು ಎಲ್ಲಿ ನೆಡಲಾಯಿತು. ಅವುಗಳು ಹೇಗೆ ಬೆಳೆದಿವೆ. ಪ್ರತಿನಿತ್ಯ ನೀರು ಹಾಕಿದವರು ಯಾರು ಎಂಬುದರ ಬಗ್ಗೆ ಬೇರೆ ಸಂಸ್ಥೆಗಳಲ್ಲೂ ಲೆಕ್ಕವಿಲ್ಲ. ಬಿಎಆರ್ ಸಿಎಲ್ ಸಂಸ್ಥೆಯಲ್ಲೂ ದಾಖಲೆ ಇಲ್ಲ.

ಸಂಸ್ಥೆಯಲ್ಲಿದ್ದ ಅಂದಿನ ಅಧಿಕಾರಿಗಳು ನಿರ್ವಹಣೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಯಾವುದೇ ದಾಖಲೆ ಇಲ್ಲ ಎಂಬುದನ್ನು ಬಿಎಂಆರ್ ಸಿಎಲ್ ಒಪ್ಪಿಕೊಂಡಿದೆ ಎಂದು ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧನಾ(ಸಿಎಜಿ) ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

ಬಿಎಂಆರ್ ಸಿಎಲ್ 4,063 ಮರಗಳನ್ನು ತೆರವುಗೊಳಿಸಿತು

ಇದಲ್ಲದೆ, ಮೆಟ್ರೋ ಎರಡನೇ ಹಂತದಲ್ಲಿ ಬಿಎಂಆರ್ ಸಿಎಲ್ 4,063 ಮರಗಳನ್ನು (3,246 ಮರಗಳ ಕಡಿತ ಮತ್ತು 817 ಮರಗಳ ಸ್ಥಳಾಂತರ) ತೆರವುಗೊಳಿಸಿತು. ಪರಿಹಾರ ಕ್ರಮವಾಗಿ 40,630 ಸಸಿಗಳನ್ನು ನೆಡುವ ಜವಾಬ್ದಾರಿ ಹೊರಬೇಕಾಗಿತ್ತು. ಆದರೆ ಕೇವಲ 1,400 ಗಿಡ ನೆಡುವ ಮತ್ತು ನಿರ್ವಹಿಸುವ ಕಾರ್ಯವನ್ನು 40 ಲಕ್ಷ ರು.ವೆಚ್ಚದಲ್ಲಿ ‘ನಾಮನಿರ್ದೇಶನ’ ಆಧಾರದ ಮೇಲೆ ಸಂಸ್ಥೆ ವಹಿಸಿಕೊಟ್ಟಿದೆ ಎಂದು ಲೆಕ್ಕ ಪರಿಶೋಧನಾ ವರದಿ ತಿಳಿಸಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಎಂಆರ್‌ಸಿಎಲ್‌, ಫೆ.2024ರಿಂದ ಮುಕ್ತ ಟೆಂಡರ್‌ ಕರೆಯುವ ಮೂಲಕ ಕಂಪನಿಯು ಸಸಿ ನೆಡುವ ಕಾರ್ಯವನ್ನು ಕೈಗೊಳ್ಳುತ್ತಿದ್ದು, ಅತ್ಯಂತ ಕಡಿಮೆ ದರ ನಮೂದಿಸಿದ ಅರ್ಹ ಗುತ್ತಿಗೆದಾರರಿಗೆ ಈ ಕೆಲಸವನ್ನು ವಹಿಸಲಾಗುತ್ತಿದೆ ಎಂದಿದೆ.

ಆ ಸಮಯದಲ್ಲಿ ಸಂಸ್ಥೆಯಲ್ಲಿ ಅರಣ್ಯ ವಿಭಾಗ ಇರಲಿಲ್ಲ. ಇಂದು ಅರಣ್ಯ ವಿಭಾಗ ಇದೆ. ಮರಗಳನ್ನು ಬೆಂಗಳೂರಿನಿಂದ ಹೊರ ಜಿಲ್ಲೆಯಲ್ಲಿ ನೆಟ್ಟಿರಬಹುದು. ಆವುಗಳನ್ನು ನಿರ್ವಹಣೆ ಮಾಡಬೇಕಾಗಿತ್ತು. ಇದೊಂದು ಸಂಸ್ಥೆಯ ಲೋಪವಾಗಿದೆ ಎಂದು ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಹು-ಧಾ ನಡುವೆ ದೇಶದ ಮೊದಲ ಐರೋಪ್ಯ ಮಾದರಿ ಟ್ರ್ಯಾಮ್? ಇನ್ಮುಂದೆ ಪ್ರಯಾಣ ಮತ್ತಷ್ಟು ಸೂಪರ್!
ಸಂಕೇಶ್ವರ ಹೆದ್ದಾರಿ 48ರ ಮೇಲೆ ಗಂಗಾವತಿ-ಕೊಲ್ಲಾಪುರ ಸಾರಿಗೆ ಬಸ್ ಭೀಕರ ಅಪಘಾತ; ಚಾಲಕ ಸ್ಥಳದಲ್ಲೇ ದುರ್ಮರಣ!