
ಬೆಂಗಳೂರು (ಜ.18): ಮ್ಯಾಟ್ರಿಮೋನಿ ಸೈಟ್‌ಗಳ ಮೂಲಕ ಪರಿಚಯವಾಗಿ, ಕೋಟಿ ಕೋಟಿ ಆಸ್ತಿಯ ಆಮಿಷವೊಡ್ಡಿ, ಮದುವೆಯಾಗುವುದಾಗಿ ನಂಬಿಸಿ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಗೆ ಬರೋಬ್ಬರಿ 1.75 ಕೋಟಿ ರೂಪಾಯಿ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಕೇವಲ ಒಬ್ಬ ವ್ಯಕ್ತಿಯಲ್ಲದೆ, ಆತನ ಇಡೀ ಕುಟುಂಬವೇ ಸೇರಿ ವಂಚನೆಗೆ ಸ್ಕೆಚ್ ಹಾಕಿರುವ ಆಘಾತಕಾರಿ ಸತ್ಯ ಬಯಲಾಗಿದೆ.
ವೈಟ್‌ಫೀಲ್ಡ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಗೆ 2024ರ ಮಾರ್ಚ್‌ನಲ್ಲಿ ಮ್ಯಾಟ್ರಿಮೋನಿ ಸೈಟ್ ಮೂಲಕ ವಿಜಯ್ ರಾಜ್ ಗೌಡ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ತಾನು ದೊಡ್ಡ ಉದ್ಯಮಿ, ಸುಮಾರು 715 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ನಂಬಿಸಿದ್ದ ವಿಜಯ್, ಯುವತಿಯ ಮನ ಗೆದ್ದಿದ್ದ. ಅಲ್ಲದೆ ತನ್ನ ತಂದೆ ಬೋರೆಗೌಡ ಅವರನ್ನು 'ನಿವೃತ್ತ ತಹಶೀಲ್ದಾರ್' ಎಂದು ಸುಳ್ಳು ಹೇಳಿ ಪರಿಚಯ ಮಾಡಿಕೊಟ್ಟಿದ್ದ.
ವಂಚನೆಯ ಸಂಚು ಎಷ್ಟು ಭೀಕರವಾಗಿತ್ತೆಂದರೆ, ವಿಜಯ್ ರಾಜ್ ಗೌಡ ಎಂಬಾತನಿಗೆ ಈಗಾಗಲೇ ಮದುವೆಯಾಗಿ ಒಂದು ಮಗುವೂ ಇತ್ತು. ಆದರೆ ಯುವತಿಯನ್ನು ನಂಬಿಸಲು ತನ್ನ ಸ್ವಂತ ಪತ್ನಿ ಸೌಮ್ಯಳನ್ನೇ 'ಅಕ್ಕ' ಎಂದು ಪರಿಚಯಿಸಿದ್ದ! ಕೆಂಗೇರಿ ಬಳಿ ಯುವತಿಯನ್ನು ಕರೆಸಿಕೊಂಡಿದ್ದ ಈ ಕುಟುಂಬ, ತಾವೆಲ್ಲರೂ ಸೇರಿ ಮದುವೆಯ ಮಾತುಕತೆ ನಡೆಸುವ ನಾಟಕವಾಡಿದ್ದರು. ಈ ವೇಳೆ ವಿಜಯ್ ತಂದೆ ಬೋರೆಗೌಡ, "ನಿಮ್ಮ ಹಣಕ್ಕೆ ನಾನೇ ಗ್ಯಾರೆಂಟಿ" ಎಂದು ಅಭಯ ನೀಡಿದ್ದರು.
ಬಹಳ ದಿನ ಕಳೆದರೂ ಹಣ ವಾಪಸ್ ನೀಡದಿದ್ದಾಗ ಯುವತಿ ಒತ್ತಾಯ ಮಾಡಲಾರಂಭಿಸಿದ್ದಳು. ಆಗ ವಿಜಯ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಇದೆ ಎಂದು ಕಾಲಹರಣ ಮಾಡಿದ್ದ. ಒತ್ತಡ ಹೆಚ್ಚಾದಾಗ ಕೇವಲ 22 ಲಕ್ಷ ರೂ. ವಾಪಸ್ ನೀಡಿ, ಉಳಿದ ಹಣ ಕೇಳಿದರೆ ಜೀವ ಬೆದರಿಕೆ ಹಾಕಲಾರಂಭಿಸಿದ್ದ. ಇದರಿಂದ ಅನುಮಾನಗೊಂಡ ಯುವತಿ ವಿಜಯ್‌ನ ಹಿನ್ನೆಲೆ ತಲಾಷ್ ನಡೆಸಿದಾಗ, ಆತನಿಗೆ ಈಗಾಗಲೇ ಮದುವೆಯಾಗಿರುವುದು ಮತ್ತು ಆತ ಪರಿಚಯಿಸಿದ 'ಅಕ್ಕ' ಎಂಬ ಮಹಿಳೆ ಬೇರೆ ಯಾರೂ ಅಲ್ಲ, ಆತನ ಹೆಂಡತಿ ಎಂಬ ಸತ್ಯ ಗೊತ್ತಾಗಿ ಆಘಾತಕ್ಕೊಳಗಾಗಿದ್ದಾರೆ.
ಮೋಸ ಹೋದ ಯುವತಿ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ವಿಜಯ್ ರಾಜ್ ಗೌಡ, ಬೋರೆಗೌಡ ಮತ್ತು ಸೌಮ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆ ನಡೆದ ಸ್ಥಳ ಕೆಂಗೇರಿ ವ್ಯಾಪ್ತಿಯಲ್ಲಿ ಬರುವುದರಿಂದ ಪ್ರಕರಣವನ್ನು ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.