
ಬೆಂಗಳೂರು (ಫೆ.06): ಉದ್ಯಾನನಗರಿ ಬೆಂಗಳೂರಿನಲ್ಲಿ ಹಾಡ ಹಗಲಿನಲ್ಲಿಯೇ ನಿರ್ಮಾಣ ಹಂತದ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು ಕಾರ್ಪೆಂಟರ್ ಮತ್ತು ವಾಲ್ಡ್ರೋಬ್ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಧಗಧಗನೆ ಉರಿಯುತ್ತಿದ್ದರೂ, ಅದರೊಳಗೆ ಕಾರ್ಮಿಕರಿದ್ದಾರೆ ಎಂಬ ಸುಳಿವು ಕೂಡ ಯಾರಿಗೂ ಸಿಕ್ಕಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿ ಒಳಗೆ ಹೋದ ನಂತರ ಇಬ್ಬರು ಸಜೀವ ದಹನವಾಗಿ ಬಿದ್ಡಿರುವುದು ಕಂಡುಬಂದಿದೆ.
ಈ ದುರ್ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಸೀಗೆಹಳ್ಳಿಯ ಶಿವಾನಿ ಗ್ರೀನ್ಸ್ ಲೇಔಟ್ ನಲ್ಲಿ ನಡೆದಿದೆ. ನಿರ್ಮಾಣ ಹಂತದಲ್ಲಿದ್ದ ಬೃಹತ್ ಕಟ್ಟಡ ಹಾಡ ಹಗಲಿನಲ್ಲಿಯೇ ಹೊತ್ತಿ ಉರಿದಿದೆ. ನಿರ್ಮಾಣ ಹಂತದ ಕಟ್ಟಡ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೆಂಗಳೂರು ನಿವಾಸಿ ಸತೀಶ್ ಎನ್ನುವವರಿಗೆ ಸೇರಿದ ಕಟ್ಟದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ವುಡ್ ವರ್ಕ್ಸ್ ಮಾಡಲಾಗುತ್ತಿತ್ತು. ಕೆಲಸಗಾರರು ಅವರ ಪಾಡಿಕೆ ಬೇರೊಂದು ಮಹಡಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡುವಾಗ ಸಿಲಿಂಡರ್ ಸೋರಿಕೆಯಾಗಿದೆ. ಈ ವೇಳೆ ಅವರು ಕಟ್ಟಿಗೆ ಕೊರೆಯುತ್ತಿದ್ದ ವೇಳೆ ಬೆಂಕಿಯ ಕಿಡಿ ಹೊತ್ತಿಕೊಂಡ ನಂತರ ಗ್ಯಾಸ್ ಸೋರಿಯಾದ ಅನಿಲದಿಂದ ಒಮ್ಮೆಲೆ ಬೆಂಕಿಯ ಜ್ವಾಲೆ ಜೋರಾಗಿ ವ್ಯಾಪಿಸಿದೆ. ಕೆಲವೇ ಕ್ಷಣಗಳಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿ ಸಂಪೂರ್ಣ ಕಟ್ಟಡವೇ ಸುಟ್ಟು ಕರಕಲಾಗಿದೆ.
ಬೆಂಕಿ ಹತ್ತಿಕೊಂಡ ಕಟ್ಟಡದೊಳಗೆ ಇಬ್ಬರು ಕಾರ್ಮಿಕರು ಸಿಲುಕಿರುವ ಶಂಕೆಯನ್ನು ಮಾಲೀಕರು ಹಾಗೂ ಸ್ಥಳೀಯರು ವ್ಯಕ್ತಪಡಿಸಿದ್ದರು. ಜೊತೆಗೆ, ಕಟ್ಟಡಕ್ಕೆ ಬೆಂಕಿ ಬಿದ್ದಾಕ್ಷಣ ಸಂಪೂರ್ಣವಾಗಿ ಮಹಡಿ ಮೇಲೇರಿದ ಕಾರ್ಮಿಕನೊಬ್ಬ ನೀರಿನ ಟ್ಯಾಂಕ್‌ನ ಬಳಿ ಕುಳಿತುಕೊಂಡಿದ್ದಾನೆ. ಕಟ್ಟಡಕ್ಕೆ ಬೆಂಕಿ ವ್ಯಾಪಿಸಿಕೊಂಡಾಗ ಆತನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇದಾದ ನಂತರ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಗಿದೆ. ಇದಾದ ನಂತರ ಸ್ಥಳೀಯರ ಮಾಹಿತಿ ಮೇರೆಗೆ ಒಳಗೆ ಹೋದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಇಬ್ಬರು ಕಾರ್ಮಿಕರು ಸಜೀವ ದಹನವಾಗಿ ಬಿದ್ದಿರುವುದು ಕಂಡುಬಂದಿದೆ.
ಇದನ್ನೂ ಓದಿ: Kalaburagi: ರಾಜಾರೋಷವಾಗಿ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ್ದ ಐವರ ಬಂಧನ!
ಕಟ್ಟಡದ ಅಗ್ನಿ ದುರಂತದಲ್ಲಿ ಮೃತಪಟ್ಟ ಕಾರ್ಮಿಕರನ್ನು ಬಿಹಾರ ಮೂಲದ ರೋಷನ್ (23) ಹಾಗೂ ಉತ್ತರ ಪ್ರದೇಶ ಮೂಲದ ಉದಯ್ ಭಾನು (40) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕಟ್ಟಡದಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಇಬ್ಬರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಜೊತೆಗೆ, ನೀರಿನ ಟ್ಯಾಂಕರ್ ಏರಿ ಕುಳಿತು ಜೀವ ಭಯದಿಂದ ನಲುಗುತ್ತಿದ್ದ ಕಾರ್ಮಿಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆತನನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.