
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಯಡಕುಮರಿ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಪರಿಣಾಮ ಬೆಂಗಳೂರು-ಮಂಗಳೂರು ಮಾರ್ಗದ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಘಟನಾ ಸ್ಥಳಕ್ಕೆ ಆಗಮಿಸಿರುವ ರೈಲ್ವೆ ಇಲಾಖೆ ಸಿಬ್ಬಂದಿ ಗುಡ್ಡ ತೆರವು ಕಾಮಗಾರಿಯನ್ನು ಭರದಿಂದ ನಡೆಸುತ್ತಿದ್ದಾರೆ. ಆದರೆ, ಸಂಚಾರ ರದ್ದತಿಯಿಂದಾಗಿ ಪ್ರಯಾಣಿಕರು ತೀವ್ರ ಪರದಾಟ ನಡೆಸುವಂತಾಗಿದೆ. ಬೆಂಗಳೂರು-ಮುರಡೇಶ್ವರ, ಬೆಂಗಳೂರು-ಕೋಝಿಕ್ಕೋಡ್ ಹಾಗೂ ವಿಜಯಪುರ-ಮಂಗಳೂರು ರೈಲುಗಳನ್ನು ಹಾಸನದಲ್ಲಿ ನಿಲ್ಲಿಸಲಾಗಿದ್ದರೆ, ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ ರೈಲನ್ನು ಸಕಲೇಶಪುರದಲ್ಲಿ ತಡೆಯಲಾಗಿದೆ.
ಅದೇ ರೀತಿ, ಮುರಡೇಶ್ವರ-ಬೆಂಗಳೂರು ಮತ್ತು ಮಂಗಳೂರು-ವಿಜಯಪುರ ರೈಲುಗಳು ಸುಬ್ರಹ್ಮಣ್ಯದಲ್ಲಿ ಸ್ಥಗಿತಗೊಂಡಿದ್ದರೆ, ಕೋಝಿಕ್ಕೋಡ್-ಬೆಂಗಳೂರು ರೈಲನ್ನು ಪುತ್ತೂರಿನಲ್ಲಿ ನಿಲ್ಲಿಸಲಾಗಿದೆ. ರೈಲು ಸಂಚಾರ ರದ್ದತಿಯ ಕುರಿತು ಇಲಾಖೆಯು ಪ್ರಯಾಣಿಕರಿಗೆ ಮಾಹಿತಿ ನೀಡಿದ್ದು, ನಿನ್ನೆ ರಾತ್ರಿಯಿಂದಲೇ ಕಾಯುತ್ತಿದ್ದ ಹಲವು ಪ್ರಯಾಣಿಕರು ನಡುರಾತ್ರಿಯಲ್ಲಿ ಪರ್ಯಾಯವಾಗಿ ಬಸ್ ಮತ್ತು ಕಾರುಗಳ ವ್ಯವಸ್ಥೆ ಮಾಡಿಕೊಂಡು ಪ್ರಯಾಣ ಬೆಳೆಸಿದ್ದಾರೆ. ಇನ್ನು ಸುರಕ್ಷತೆಯ ದೃಷ್ಟಿಯಿಂದ ಇಂದು ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಮಂಗಳೂರು ಜಂಕ್ಷನ್ - ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ (ಸಂಖ್ಯೆ 16540 ) ಭಾನುವಾರದ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
ಯಶವಂತಪುರ - ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲಿನ (16575) ಭಾನುವಾರದ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶೃಂಗೇರಿ ತಾಲೂಕು ನೆರೆ ಹೊಸ್ತಿಲಲ್ಲಿದೆ. ಗುರುವಾರ ರಾತ್ರಿಯಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದು ನದಿ ಜಲಾನಯನ ಪ್ರದೇಶದ ಜನರಲ್ಲಿ ನೆರೆ ಭೀತಿ ಮೂಡಿಸಿದೆ. ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ತುಂಗಾ ನದಿಯ ಈ ಭೋರ್ಗರೆತದ ದೃಶ್ಯ ಮನಮೋಹಕವಾಗಿದ್ದರೂ, ನೆರೆ ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ.
ತುಂಬಿದ ನದಿ, ಕೆರೆ-ಕಟ್ಟೆಗಳು
ಮಳೆ ಕೊರತೆಯಿಂದ ಒಣಗಿದ್ದ ಮಲೆನಾಡು ಕೇವಲ ಎರಡು ದಿನಗಳ ಮಳೆಗೆ ಸಂಪೂರ್ಣವಾಗಿ ಬದಲಾಗಿದೆ. ನದಿ, ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಶೃಂಗೇರಿ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರವಾಹ ಭೀತಿ ಎದುರಾಗಿದೆ. ನದಿ ತೀರದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆಡಳಿತ ಮಂಡಳಿ ಸೂಚನೆ ನೀಡಿದೆ.