
ಉಡುಪಿ: ಬೆಂಗಳೂರಿನಿಂದ ಮಂಗಳೂರು, ಉಡುಪಿ ಮಾರ್ಗವಾಗಿ ಕಾರವಾರ, ಮಡಗಾಂವ್ ತಲುಪಲಿರುವ ಬಹುದಿನ ನಿರೀಕ್ಷಿತ ವಂದೇ ಭಾರತ್ ರೈಲಿಗೆ ನವೆಂಬರ್ ಮೂರನೇ ವಾರದಲ್ಲಿ ಮಂಗಳೂರಿನಲ್ಲಿ ಚಾಲನೆ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸಂಸದ ಕೋಟ ದೆಹಲಿಯಲ್ಲಿ ರೈಲ್ವೆ ಭವನದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ಸೋಮಣ್ಣ ಅವರನ್ನು ಭೇಟಿಯಾಗಿ ಮಂಗಳೂರು - ಮಡಗಾಂವ್ ವಂದೇ ಭಾರತ್ ರೈಲ್ವೆ ಮಂಜೂರು ಮಾಡಿರುವುದಕ್ಕೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು.
ಕೊಂಕಣ ರೈಲ್ವೆ ಮಾರ್ಗ ದ್ವಿಪಥಗೊಳಿಸದಿರಲು ಮತ್ತು ಮಾರ್ಗದ ಎಲ್ಲಾ ರೈಲು ನಿಲ್ದಾಣಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡದಿರಲು ಮುಖ್ಯ ಕಾರಣ ಕೊಂಕಣ ರೈಲ್ವೆ ನಿಗಮದಲ್ಲಿ ಆರ್ಥಿಕ ಕೊರತೆಯಾಗಿದೆ. ಈ ಹಿನ್ನಲೆಯಲ್ಲಿ ಕೇರಳ, ಗೋವಾ, ಕರ್ನಾಟಕ, ಮಹಾರಾಷ್ಟ್ರ ಸರ್ಕಾರಗಳ ಜೊತೆ ಸಮನ್ವಯಗೊಳಿಸಿ ಕೊಂಕಣ ರೈಲ್ವೆ ಯನ್ನು ಭಾರತೀಯ ರೈಲ್ವೆಯೊಡನೆ ವಿಲೀನಗೊಳಿಸಲು ಕೇಂದ್ರ ಮಧ್ಯ ಪ್ರವೇಶಿಸಬೇಕು ಎಂದು ವಿನಂತಿಸಿದ್ದು, ಈ ಬಗ್ಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಸಹಕಾರ ನೀಡುವ ಬಗ್ಗೆ ಸಹಮತ ವ್ಯಕ್ತಪಡಿಸಿರುವುದನ್ನು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದೇನೆ, ಇದಕ್ಕೆ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ ರೈಲ್ವೆ ಸಚಿವರಿಬ್ಬರು ವಿಲೀನದ ಬಗ್ಗೆ ವಿಶೇಷ ಗಮನಹರಿಸುವುದಾಗಿ ತಿಳಿಸಿದ್ದಾರೆ ಎಂದು ಕೋಟ ತಿಳಿಸಿದ್ದಾರೆ.
ಚಿಕ್ಕಮಗಳೂರಿನಿಂದ ಬೆಂಗಳೂರು ರೈಲ್ವೆ ಪ್ರಯಾಣಿಕರ ಬೇಡಿಕೆಯಂತೆ ದಿನನಿತ್ಯ ಇಂಟರ್ ಸಿಟಿ ರೈಲ್ವೆಗೆ ಚಾಲನೆ ಕೊಡಬೇಕೆಂಬ ತಮ್ಮ ಬೇಡಿಕೆಗೆ ಕೂಡಲೇ ಕ್ರಮ ಜರುಗಿಸುವುದಾಗಿ ರೈಲ್ವೆ ಸಚಿವರು ತಿಳಿಸಿದ್ದಾರೆ ಎಂದು ಕೋಟ ಹೇಳಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಅವರನ್ನು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಂಬೈಯಲ್ಲಿ ಭೇಟಿ ಮಾಡಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಬೇಕಾದ ಅನಿವಾರ್ಯತೆ ವಿವರಿಸಿ ಸಹಕಾರ ಕೋರಿದರು. ಸುಮಾರು 750 ಕಿ.ಮೀ ಉದ್ದದ ಕೊಂಕಣ ರೈಲ್ವೆಯ ಮಾರ್ಗವನ್ನು ಅಭಿವೃದ್ಧಿಪಡಿಸಲು ಹಾಗೂ ಭವಿಷ್ಯದ ಸಂಚಾರ ಬೆಳವಣಿಗೆಯ ಸಾಮರ್ಥ್ಯ ಹೆಚ್ಚಿಸಲು ಇಡೀ ಮಾರ್ಗ ದ್ವಿಗುಣಗೊಳಿಸುವುದು ಅನಿವಾರ್ಯವಾಗಿದೆ. ಒಂದು ಅಂದಾಜಿನ ಪ್ರಕಾರ ಮಾರ್ಗದ ಹಳಿಗಳನ್ನು ದ್ವಿಗುಣಗೊಳಿಸುವುದು ಮತ್ತು ತುಂಬಾ ಅವ್ಯವಸ್ಥೆಯಲ್ಲಿರುವ ರೈಲ್ವೆ ನಿಲ್ದಾಣಗಳನ್ನು ಉತ್ತಮವಾಗಿ ನಿರ್ಮಾಣ ಮಾಡಲು 40,000 ಕೋಟಿ ರುಪಾಯಿಗಳ ಅಗತ್ಯವಿದೆ, ಇಷ್ಟು ಹಣವನ್ನು ಭರಿಸಲು ಕೊಂಕಣ ರೈಲ್ವೆಯ ಆರ್ಥಿಕ ಸ್ಥಿತಿ ಸಹಕಾರಿಯಾಗಿಲ್ಲ. ಕೊಂಕಣ ರೈಲ್ವೆ ಹಾದುಹೋಗುವ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಶೇರನ್ನು ಬಿಟ್ಟುಕೊಟ್ಟರೆ ವಿಲೀನಗೊಳಿಸಬಹುದು ಎಂದು ಕೇಂದ್ರ ಸಚಿವರು ಲೋಕಸಭೆಯಲ್ಲಿ ಉಲ್ಲೇಖಿಸಿದ್ದನ್ನು ಸಂಸದ ಕೋಟ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಸಹಮತದ ಬಗ್ಗೆ ಕೂಡಲೇ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು. ಮಹಾರಾಷ್ಟ್ರದ ಚಂದಗಡ್ ಮತಕ್ಷೇತ್ರದ ಶಾಸಕ ಶಿವಾಜಿ ಪಾಟೀಲ್, ನ್ಯೂಮುಂಬೈ ಮಹಾನಗರ ಪಾಲಿಕೆ ಸದಸ್ಯ ಸಂತೋಷ ಶೆಟ್ಟಿ, ಕುಂದಾಪುರ ರೈಲ್ವೆ ಬಳಕೆದಾರರ ಸಂಘದ ಗೌತಮ್ ಶೆಟ್ಟಿ ಮತ್ತು ಸುನಿಲ್ ಪೂಜಾರಿ ಇದ್ದರು.