
ಬೆಂಗಳೂರು (ಅ.30): ರಾಜ್ಯ ರಾಜಧಾನಿ ಬೆಂಗಳೂರಿನ ಸಾರಿಗೆ ಜೀವನಾಡಿ 'ನಮ್ಮ ಮೆಟ್ರೋ'ದ (Namma Metro) ನೇರಳೆ ಮಾರ್ಗದಲ್ಲಿ (Purple Line) ಇಂದು ಬೆಳಿಗ್ಗೆ ದಿಢೀರ್ ರೈಲು ಸಂಚಾರ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು. ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಹಳಿಗೆ ಧುಮುಕಿದ ಪರಿಣಾಮ, ಭದ್ರತಾ ಸಿಬ್ಬಂದಿ ತುರ್ತು ವ್ಯವಸ್ಥೆ ಸಕ್ರಿಯಗೊಳಿಸಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ಸಮಯಪ್ರಜ್ಞೆಯಿಂದ ತಕ್ಷಣವೇ ಕಾರ್ಯಪ್ರವೃತ್ತರಾದ ಮೆಟ್ರೋ ಸಿಬ್ಬಂದಿ, ಹಳಿಗೆ ಬಿದ್ದಿದ್ದ ಪ್ರಯಾಣಿಕನನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಎಂಆರ್‌ಸಿಎಲ್ (BMRCL) ನೀಡಿರುವೃತ ಅಧಿಕೃತ ಮಾಹಿತಿಯ ಪ್ರಕಾರ, ಇಂದು ಬೆಳಿಗ್ಗೆ ಸುಮಾರು 09:22 ಗಂಟೆಯ ವೇಳೆಗೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ (Indiranagar Metro Station) ಈ ಘಟನೆ ಸಂಭವಿಸಿದೆ. ರೈಲು ಬರುವ ಹಳಿಗೆ ಪ್ರಯಾಣಿಕರೊಬ್ಬರು ಇಳಿದ ತಕ್ಷಣವೇ ನಿಲ್ದಾಣದಲ್ಲಿದ್ದ 'ತುರ್ತು ಟ್ರಿಪ್ ವ್ಯವಸ್ಥೆ' (ETS - Emergency Trip System) ಮತ್ತು 'ತುರ್ತು ನಿಲುಗಡೆ ಬಟನ್' (ESP - Emergency Stop Plunger) ಅನ್ನು ಸಕ್ರಿಯಗೊಳಿಸಲಾಯಿತು. ಇದರಿಂದಾಗಿ ಆ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಅನಾಹುತ ತಪ್ಪಿದೆ. ಹಳಿಗೆ ಇಳಿದಿದ್ದ ಪ್ರಯಾಣಿಕನನ್ನು ಯಾವುದೇ ಅಪಾಯವಿಲ್ಲದೆ ತಕ್ಷಣವೇ ಮೇಲಕ್ಕೆತ್ತಿ ಸುರಕ್ಷಿತವಾಗಿ ರಕ್ಷಿಸಲಾಯಿತು.
ಇಂದಿರಾನಗರ ನಿಲ್ದಾಣದ ಘಟನೆಯಿಂದಾಗಿ ನೇರಳೆ ಮಾರ್ಗದಲ್ಲಿ ರೈಲುಗಳ ಸಂಚಾರ ಸುಮಾರು 10 ನಿಮಿಷಗಳ ಕಾಲ ವಿಳಂಬವಾಯಿತು. ಬೆಳಗಿನ ಆಫೀಸ್ ಅವಧಿಯಾಗಿದ್ದರಿಂದ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾದ ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್ ನಿಲ್ದಾಣದಲ್ಲಿ ಪ್ರಯಾಣಿಕರ ನಿಯಂತ್ರಣ ತಪ್ಪುವ ವಾತಾವರಣ ನಿರ್ಮಾಣವಾಯಿತು. ಮೆಜೆಸ್ಟಿಕ್ ನಿಲ್ದಾಣದಲ್ಲಿ ಪ್ರಯಾಣಿಕರ ವಿಪರೀತ ದಟ್ಟಣೆಯನ್ನು (Overcrowding) ತಡೆಯುವ ಸಲುವಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಹಸಿರು ಮಾರ್ಗದಲ್ಲೂ (Green Line) ಕೆಲವು ಮೆಟ್ರೋ ರೈಲುಗಳ ಚಲನವಲನವನ್ನು ತಾತ್ಕಾಲಿಕವಾಗಿ ನಿಯಂತ್ರಿಸಲಾಯಿತು.
ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ಸಿಬ್ಬಂದಿ, ಬೆಳಿಗ್ಗೆ 09:40 ಗಂಟೆಯ ವೇಳೆಗೆ ನೇರಳೆ ಹಾಗೂ ಹಸಿರು ಎರಡೂ ಮಾರ್ಗಗಳಲ್ಲಿ ರೈಲು ಸಂಚಾರವನ್ನು ಯಥಾಸ್ಥಿತಿಗೆ ತಂದಿದ್ದಾರೆ. ಈ ದಿಢೀರ್ ತಾಂತ್ರಿಕ ಅಡಚಣೆ ಹಾಗೂ ವಿಳಂಬದಿಂದಾಗಿ ಬೆಳಗಿನ ವೇಳೆಯಲ್ಲಿ ಕಚೇರಿ ಮತ್ತು ಕಾಲೇಜುಗಳಿಗೆ ತೆರಳುತ್ತಿದ್ದ ಸಾವಿರಾರು ಪ್ರಯಾಣಿಕರಿಗೆ ಅನಾನುಕೂಲ ಉಂಟಾಗಿದ್ದು, ಉಂಟಾದ ತೊಂದರೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸಾರ್ವಜನಿಕರಲ್ಲಿ ವಿಷಾದ ವ್ಯಕ್ತಪಡಿಸಿದೆ.