
ಬೆಂಗಳೂರು: ಬೆಂಗಳೂರು: ರಾಜಧಾನಿಯ ಹೊರವಲಯದ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. ತಾವರೆಕೆರೆ ಹೋಬಳಿಯ ಮಾದಾಪಟ್ಟಣ ಗ್ರಾಮದ ವ್ಯಾಪ್ತಿಯಲ್ಲಿರುವ 'ಕಾವೇರಿ ಕ್ರಷರ್' ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಬಿದ್ದ ಪರಿಣಾಮ, ಕೆಳಗೆ ಕೆಲಸ ಮಾಡುತ್ತಿದ್ದ 9 ಮಂದಿ ವಲಸೆ ಕಾರ್ಮಿಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮಾಹಿತಿ ಪ್ರಕಾರ, ಇಂದು ಕಲ್ಲು ಕ್ವಾರಿಯ ಮೇಲ್ಭಾಗದಲ್ಲಿ ಟ್ರ್ಯಾಕ್ಟರ್ ಸಹಾಯದಿಂದ ಭಾರೀ ಗಾತ್ರದ ಬಂಡೆಯೊಂದನ್ನು ಜರುಗಿಸುವ (ಸರಿಸುವ) ಕೆಲಸ ನಡೆಯುತ್ತಿತ್ತು. ದುರದೃಷ್ಟವಶಾತ್, ಈ ವೇಳೆ ನಿಯಂತ್ರಣ ತಪ್ಪಿದ ಬಂಡೆಯು ನೇರವಾಗಿ ಕ್ವಾರಿಯ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಉರುಳಿ ಬಿದ್ದಿದೆ. ಬಂಡೆ ಬಿದ್ದ ತೀವ್ರತೆಗೆ ಸಿಲುಕಿದ ಒಂಬತ್ತು ಜನ ಕಾರ್ಮಿಕರು ಕ್ಷಣಮಾತ್ರದಲ್ಲಿ ಜೀವಬಿಟ್ಟಿದ್ದಾರೆ. ಮೃತರನ್ನು ಬಿಹಾರ ಮತ್ತು ಅಸ್ಸಾಂ ಮೂಲದ ಕಾರ್ಮಿಕರು ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಕಾವೇರಿ ಕ್ರಷರ್‌ನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ದುರಂತ ಸಂಭವಿಸುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಚೀರಾಟ, ಆಕ್ರಂದನ ಮುಗಿಲು ಮುಟ್ಟಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಸಾರ್ವಜನಿಕರು ಮತ್ತು ಇತರ ಕಾರ್ಮಿಕರು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದು, ಬಂಡೆಯಡಿ ಸಿಲುಕಿದ್ದ ನಾಲ್ಕು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನುಳಿದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಮುಂದುವರಿದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ತಾವರೆಕೆರೆ ಪೊಲೀಸ್ ಇನ್ಸ್‌ಪೆಕ್ಟರ್ ಮಾರುತಿ ಹಾಗೂ ಸಿಬ್ಬಂದಿಗಳ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದೆ. ಗುತ್ತಿಗೆದಾರ (ಮೇಸ್ತ್ರಿ) ಮತ್ತು ಕ್ರಷರ್ ಮಾಲೀಕರನ್ನು ಸ್ಥಳಕ್ಕೆ ಕರೆಸಲಾಗುತ್ತಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಈ ಹಿಂದೆ ಇದೇ ಹುಲವೇನಹಳ್ಳಿ ಮತ್ತು ಮಾದಾಪಟ್ಟಣ ಭಾಗದ ಕ್ವಾರಿ ಪ್ರದೇಶದಲ್ಲಿ ಅಕ್ರಮವಾಗಿ ಬಂಡೆ ಸ್ಫೋಟಿಸಿದಾಗ ಕಲ್ಲು ಸಿಡಿದು ಚಿರತೆಯೊಂದು ಸಾವನ್ನಪ್ಪಿತ್ತು. ಆಗಲೇ ಈ ಭಾಗದ ಕ್ವಾರಿಗಳ ಸುರಕ್ಷತಾ ನಿಯಮಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿಯಿಂದಾಗಿ ಇಂದು ಚಿರತೆಯ ಬೆನ್ನಲ್ಲೇ ಒಂಬತ್ತು ಮಂದಿ ಅಮಾಯಕರು ಬಲಿಯಾಗಿದ್ದಾರೆ.
ಕ್ವಾರಿಯ ಮೇಲ್ಭಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ಟ್ರ್ಯಾಕ್ಟರ್ ಬಳಸಿ ಬಂಡೆ ಜರುಗಿಸುವಾಗ ಕೆಳಗೆ ಕಾರ್ಮಿಕರು ಕೆಲಸ ಮಾಡಲು ಹೇಗೆ ಬಿಡಲಾಯಿತು? ಯಾವುದೇ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲವೇ? ಎಂಬ ಗಂಭೀರ ಪ್ರಶ್ನೆಗಳು ಈಗ ಎದ್ದಿವೆ.