
ಬೆಂಗಳೂರು: ಮಗಳನ್ನು ಮದುವೆ ಮಾಡಿ ಕೊಡಲು ಒಪ್ಪದಿದ್ದ ಕಾರಣಕ್ಕೆ ತಾಯಿಯೊಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಮಾನುಷ ಘಟನೆ ಈಗ ಸಾವಿನಲ್ಲಿ ಅಂತ್ಯಕಂಡಿದೆ. ಚಿಕಿತ್ಸೆ ಫಲಿಸದೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ ತಾಯಿ ಮೃತಪಟ್ಟಿದ್ದಾಳೆ. ಡಿಸೆಂಬರ್ 23ರಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಈ ಘಟನೆ ನಡೆದಿತ್ತು. ಬೆಂಕಿ ಹಚ್ಚಿದವನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಸಾಣೆಗುರುವನಹಳ್ಳಿ ನಿವಾಸಿ ಗೀತಾ (40) ಅವರು, ತೀವ್ರ ಸುಟ್ಟ ಗಾಯಗಳೊಂದಿಗೆ ಕಳೆದ 20 ದಿನಗಳಿಂದ ಆಸ್ಪತ್ರೆಯಲ್ಲಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ, ನಿನ್ನೆ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಪ್ರಕರಣದಲ್ಲಿ ಗೀತಾ ಅವರ ಸಂಬಂಧಿ ಮುತ್ತು ಅಭಿಮನ್ಯು ಎಂಬಾತ ಆರೋಪಿಯಾಗಿದ್ದಾನೆ, ಮಗಳ ಮದುವೆ ವಿಚಾರವೇ ಈ ದಾರುಣ ಕೃತ್ಯಕ್ಕೆ ಕಾರಣವಾಗಿದೆ. ಆರಂಭದಲ್ಲಿ ಬಸವೇಶ್ವರ ನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಗೀತಾ ಅವರ ನಿಧನದ ಬಳಿಕ, ಪ್ರಕರಣವನ್ನು ಇದೀಗ ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ಮುಂದುವರಿಸಲಾಗಿದೆ.
ಪೊಲೀಸರ ತನಿಖೆಯ ಪ್ರಕಾರ, ತಮಿಳುನಾಡು ಮೂಲದ ಗೀತಾ ಅವರು ಹಲವು ವರ್ಷಗಳಿಂದ ಸಾಣೆಗುರುವನಹಳ್ಳಿಯಲ್ಲಿ ತಮ್ಮ ಮಗಳೊಂದಿಗೆ ವಾಸವಾಗಿದ್ದರು. ಮನೆ ಸಮೀಪವೇ ಕಿರಾಣಿ ಅಂಗಡಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದರು. ಇದೇ ಪ್ರದೇಶದಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಮುತ್ತು ಅಭಿಮನ್ಯು ಜತೆ ಗೀತಾ ಅವರ ಮಗಳು ಪ್ರೀತಿಗೆ ಬಿದ್ದಿದ್ದಳು.
ಆರಂಭದಲ್ಲಿ ಮಗಳ ಪ್ರೇಮಕ್ಕೆ ಗೀತಾ ಸಮ್ಮತಿಸಿ ಮದುವೆಗೆ ಒಪ್ಪಿದ್ದರು. ಆದರೆ ಇತ್ತೀಚೆಗೆ ಮುತ್ತು ಮದ್ಯ ವ್ಯಸನಕ್ಕೆ ಒಳಗಾಗಿರುವ ವಿಚಾರ ತಿಳಿದ ನಂತರ, ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮುತ್ತು, ಗೀತಾ ಅವರೊಂದಿಗೆ ಪದೇಪದೇ ಜಗಳವಾಡುತ್ತಿದ್ದನಂತೆ.
ಡಿಸೆಂಬರ್ 23ರ ರಾತ್ರಿ ಗೀತಾ ಮತ್ತು ಮುತ್ತು ನಡುವೆ ಮತ್ತೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ ಬಳಿಕ, ಗೀತಾ ನಿದ್ರೆಗೆ ಜಾರಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಮುತ್ತು, ಗೀತಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದ.
ಘಟನೆ ನಡೆದ ತಕ್ಷಣ ಸ್ಥಳೀಯರು ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದ ಗೀತಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು. ಶೇ.50ಕ್ಕೂ ಹೆಚ್ಚು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಎಲ್ಲಾ ಪ್ರಯತ್ನಗಳ ನಡುವೆಯೂ 20 ದಿನಗಳ ಹೋರಾಟದ ಬಳಿಕ ಗೀತಾ ಜೀವ ಬಿಟ್ಟಿದ್ದಾರೆ.
ಘಟನೆಯ ಬಳಿಕ ಬಸವೇಶ್ವರ ನಗರ ಪೊಲೀಸರು ಆರೋಪಿ ಮುತ್ತು ಅಭಿಮನ್ಯುನ್ನು ಬಂಧಿಸಿದ್ದರು. ಗೀತಾ ಅವರ ಸಾವಿನ ನಂತರ, ಪ್ರಕರಣವನ್ನು ಕೊಲೆಯತ್ನದಿಂದ ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಒಟ್ಟಾರೆ, ಮಗಳ ಮದುವೆ ವಿಚಾರದಿಂದ ಆರಂಭವಾದ ವೈಷಮ್ಯ, ತಾಯಿಯ ಪ್ರಾಣ ಕಿತ್ತುಕೊಂಡ ದಾರುಣ ಘಟನೆಯಾಗಿ ಅಂತ್ಯಗೊಂಡಿದೆ.