
ಬೆಂಗಳೂರು (ಡಿ.20): ರಾಜ್ಯ ರಾಜಧಾನಿ ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆ ಬನಶಂಕರಿಯ ಪಕ್ಕದಲ್ಲಿರುವ ತ್ಯಾಗರಾಜನಗರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಈ ಬಡಾವಣೆಯ ರಸ್ತೆಯಲ್ಲಿ ಆಟವಾಡುತ್ತಿದ್ದ ಪುಟ್ಟ ಮಕ್ಕಳನ್ನು ಕಂಡರೆ ಫುಟ್‌ಬಾಲ್‌ನಂತೆ ಸಾಯುವಂತೆ ಒದೆಯೋದು, ಗುದ್ದೋದು, ಬೈಕ್ ಹತ್ತಿಸೋದು, ತಲೆ ಚಚ್ಚುವುದನ್ನು ಮಾಡುತ್ತಿದ್ದ ರಾಕ್ಷಸ ಪ್ರವೃತ್ತಿಯ ಜಿಮ್ ಟ್ರೈನರ್ ರಂಜನ್ ಆಟ ಇದೀಗ ಪೊಲೀಸರ ಮುಂದೆ ಬಟಾಬಯಲಾಗಿದೆ.
ಆರೋಪಿ ರಂಜನ್ (35) ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದು, ಕಳೆದ ಕೆಲವು ದಿನಗಳಿಂದ ಜಿಮ್‌ಗೆ ಹೋಗುವುದನ್ನು ಬಿಟ್ಟು ಮನೆಯಲ್ಲೇ ಉಳಿದಿದ್ದನು. ಇತ್ತೀಚೆಗೆ ಮನೆಯ ಪಕ್ಕದಲ್ಲಿ ಮಗು ಆಟವಾಡುತ್ತಿದ್ದಾಗ ಏಕಾಏಕಿ ಬಂದ ರಂಜನ್, ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಮಗುವನ್ನು ಕಾಲಿನಿಂದ ಒದ್ದು ಬೀಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರಂಭದಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದಾಗ, ಪೊಲೀಸರು ಈತನನ್ನು ಕರೆಸಿ ಎಚ್ಚರಿಕೆ ನೀಡಿ ಕಳಿಸಿದ್ದರು. ಆದರೆ, ಪೋಷಕರು ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ರಂಜನ್ ಕೇವಲ ಒಂದು ಮಗುವಿನ ಮೇಲೆ ಮಾತ್ರವಲ್ಲದೆ, ದಾರಿಯಲ್ಲಿ ಹೋಗುವ ಹಲವು ಮಕ್ಕಳ ಮೇಲೆ ಇದೇ ರೀತಿ ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿದೆ.
ಬನಶಂಕರಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ನೀಡಿದ ಹೇಳಿಕೆ ಬೆಚ್ಚಿಬೀಳಿಸುವಂತಿದೆ. 'ಮಕ್ಕಳು ರಸ್ತೆಯಲ್ಲಿ ಆಟವಾಡುತ್ತಿದ್ದರೆ ನನಗೆ ತುಂಬಾ ಹಿಂಸೆಯಾಗುತ್ತದೆ, ಇರಿಟೇಟ್ ಆಗುತ್ತದೆ. ನನಗೆ ಮಕ್ಕಳನ್ನು ನೋಡುವುದಕ್ಕೆ ಆಗುವುದಿಲ್ಲ, ಅದಕ್ಕಾಗಿಯೇ ಅವರನ್ನು ಒದ್ದೆ ಮತ್ತು ಕೈಯಿಂದ ಹೊಡೆದೆ" ಎಂದು ರಂಜನ್ ಒಪ್ಪಿಕೊಂಡಿದ್ದಾನೆ. ಬಳಿಕ "ನನ್ನಿಂದ ತಪ್ಪಾಗಿದೆ ಸಾರ್, ಕ್ಷಮಿಸಿ ಬಿಡಿ' ಎಂದು ಪೊಲೀಸರ ಮುಂದೆ ಬೇಡಿಕೊಂಡಿದ್ದಾನೆ.
ಪ್ರಕರಣದ ಆರಂಭದಲ್ಲಿ ಬನಶಂಕರಿ ಪೊಲೀಸರು ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ಎಂದು ದಾಖಲಿಸಿದ್ದರು. ಆದರೆ ಸಿಸಿಟಿವಿ ದೃಶ್ಯಗಳು ವೈರಲ್ ಆಗಿ ಸಾರ್ವಜನಿಕ ಒತ್ತಡ ಹೆಚ್ಚಾದ ನಂತರ, ಕೋರ್ಟ್‌ನಿಂದ ಅನುಮತಿ ಪಡೆದು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಯ ವಿರುದ್ಧ ಬಿಎನ್‌ಎಸ್ ಸೆಕ್ಷನ್ 115(2) (ಹಲ್ಲೆ) ಅಡಿ ಪ್ರಕರಣ ದಾಖಲಾಗಿದ್ದು, ಈ ಸೆಕ್ಷನ್ ಅಡಿಯಲ್ಲಿ ಒಂದು ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ. ದಂಡಕ್ಕೆ ಅವಕಾಶವಿದೆ. ಇದು ಜಾಮೀನು ನೀಡಬಹುದಾದ ಸೆಕ್ಷನ್ ಆಗಿದ್ದರಿಂದ, ಪೊಲೀಸರು ಸ್ಟೇಷನ್ ಬೇಲ್ ಮೇಲೆ ಆತನನ್ನು ಬಿಟ್ಟು ಕಳಿಸಿದ್ದಾರೆ.
ಸದ್ಯ ಆರೋಪಿ ಹೊರಗಿದ್ದರೂ, ಇಂತಹ ರಾಕ್ಷಸ ಪ್ರವೃತ್ತಿಯ ವ್ಯಕ್ತಿಯಿಂದ ಸಮಾಜಕ್ಕೆ, ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ಅಪಾಯವಿದೆ ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.