
ಬೆಂಗಳೂರು (ಡಿ.20): ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಆರಂಭಿಸಲಾಗಿರುವ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಈಗ ಸುಗಮ ಸಂಪರ್ಕದ (Feeder Connectivity) ಭಾಗ್ಯ ಲಭಿಸಿದೆ. ರಾಷ್ಟ್ರೀಯ ವಿದ್ಯಾಲಯ ರಸ್ತೆ (RV Road) ಯಿಂದ ಬೊಮ್ಮಸಂದ್ರದವರೆಗೆ ಸಂಚರಿಸುವ ಈ ಹಳದಿ ಮಾರ್ಗದಲ್ಲಿ ಮೆಟ್ರೋ ಇಳಿದ ಕೂಡಲೇ ಬಸ್ ಹತ್ತಲು ಅನುಕೂಲವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ-BMTC) ಮತ್ತು ಬೆಂಳೂರು ಮೆಟ್ರೋ ರೇಲ್ ಕಾರ್ಪೋರೇಷನ್ ಲಿ. (ಬಿಎಂಆರ್‌ಸಿಎಲ್-BMRCL) ಜಂಟಿಯಾಗಿ ಬಸ್ ನಿಲ್ದಾಣಗಳ ಮರುಹೊಂದಾಣಿಕೆ ಮಾಡಿವೆ.
ದಿನಾಂಕ 11ನೇ ಆಗಸ್ಟ್ 2025 ರಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಸೇವೆ ಅಧಿಕೃತವಾಗಿ ಆರಂಭವಾಗಿದ್ದು, ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದೆ. ಮೆಟ್ರೋ ರೈಲಿನಿಂದ ಇಳಿದ ಪ್ರಯಾಣಿಕರು ಬಸ್ ಹಿಡಿಯಲು ದೂರ ನಡೆಯುವುದನ್ನು ತಪ್ಪಿಸಲು ಈ ಕೆಳಗಿನ 6 ನಿಲ್ದಾಣಗಳ ಸಮೀಪ ಹೊಸದಾಗಿ ಬಸ್ ಸ್ಟಾಪ್‌ಗಳನ್ನು ನಿರ್ಮಿಸಲಾಗಿದೆ.
ಈಗಾಗಲೇ ಇದ್ದ ಕೆಲವು ಬಸ್ ನಿಲ್ದಾಣಗಳನ್ನು ಮೆಟ್ರೋ ಪ್ರವೇಶ ದ್ವಾರಗಳ ಸಮೀಪಕ್ಕೆ ತರಲು ಎಲೆಕ್ಟ್ರಾನಿಕ್ ಸಿಟಿ, ಹೊಸ ರಸ್ತೆ ಮತ್ತು ರಾಗಿಗುಡ್ಡ ನಿಲ್ದಾಣಗಳಲ್ಲಿ ಸ್ಥಳಾಂತರ ಪ್ರಕ್ರಿಯೆ ನಡೆಸಲಾಗಿದೆ. ಇನ್ನು ಜಯದೇವ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಕುಡ್ಲು ಗೇಟ್ ಹಾಗೂ ಇನ್ಫೋಸಿಸ್ ಫೌಂಡೇಶನ್ ಕೊನ್ನಪ್ಪನ ಅಗ್ರಹಾರ ನಿಲ್ದಾಣಗಳಲ್ಲಿ ಈಗಾಗಲೇ 100 ಮೀಟರ್ ಅಂತರದೊಳಗೆ ಬಸ್ ಸಂಪರ್ಕ ಲಭ್ಯವಿದೆ.
ಹಸ್ಕೂರು ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಲ್ಲಿ ಸ್ಥಳದ ಕೊರತೆ ಇರುವುದರಿಂದ ಬಸ್ ನಿಲ್ದಾಣಗಳನ್ನು ಮೆಟ್ರೋ ನಿಲ್ದಾಣದ ತೀರಾ ಹತ್ತಿರಕ್ಕೆ ಸ್ಥಳಾಂತರಿಸಲು ಸಾಧ್ಯವಾಗಿಲ್ಲ. ಆದರೂ, ಸಮಗ್ರವಾಗಿ ನೋಡುವುದಾದರೆ ಮೆಟ್ರೋ ಮತ್ತು ಬಸ್ ನಡುವಿನ ಸಂಪರ್ಕವನ್ನು ವೃದ್ಧಿಸಿರುವುದು ನಗರದ ಐಟಿ ಉದ್ಯೋಗಿಗಳಿಗೆ ಮತ್ತು ನಿತ್ಯ ಪ್ರಯಾಣಿಕರಿಗೆ ವರದಾನವಾಗಲಿದೆ.
ಈ ಸುಧಾರಿತ ಸಾರಿಗೆ ವ್ಯವಸ್ಥೆಯು ಪ್ರಯಾಣಿಕರ ಸಮಯವನ್ನು ಉಳಿಸುವುದಲ್ಲದೆ, ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ವಿನಂತಿಸಿದೆ.