
ಬೆಂಗಳೂರು ನಗರದಲ್ಲಿ ಕಸ ಸಂಗ್ರಹಣೆ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ವ್ಯಾಪ್ತಿಯಲ್ಲಿ ಪರಿಸ್ಥಿತಿ ತಾರಕ್ಕಕ್ಕೇರಿದೆ. ಕಳೆದ ಮೂರು ದಿನಗಳಿಂದ ಮನೆಮನೆ ಕಸ ಸಂಗ್ರಹಣೆ ಬಹುತೇಕ ಸ್ಥಗಿತಗೊಂಡಿದ್ದು, ನಗರದ ಹಲವು ಭಾಗಗಳಲ್ಲಿ ಕಸದ ರಾಶಿಗಳು ರಸ್ತೆಗಳಲ್ಲೇ ಕಾಣಿಸಿಕೊಳ್ಳುತ್ತಿವೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.
ಇಂದು ಮತ್ತಷ್ಟು ವಾರ್ಡ್‌ಗಳಲ್ಲಿ ಕಸ ಸಂಗ್ರಹಣೆ ಮಾಡದಿರಲು ಆಟೋ ಟಿಪ್ಪರ್ ಚಾಲಕರು ಮತ್ತು ಸಹಾಯಕರು ನಿರ್ಧರಿಸಿದ್ದು, ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಈಗಾಗಲೇ ಶೇಕಡಾ 60ರಷ್ಟು ವಾರ್ಡ್‌ಗಳಲ್ಲಿ ಕಸ ಸಂಗ್ರಹಣೆ ಸ್ಥಗಿತಗೊಂಡಿದ್ದು, ಮೆಜೆಸ್ಟಿಕ್ ಸೇರಿದಂತೆ ನಗರದ ಹೃದಯ ಭಾಗದಲ್ಲಿಯೇ ಕಸದ ರಾಶಿಗಳು ಹೆಚ್ಚಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಕಸ ಸಂಗ್ರಹಣೆ ನಡೆಸುವ ಆಟೋ ಚಾಲಕರು ಹಾಗೂ ಹೆಲ್ಪರ್‌ಗಳು ಅಸಹಕಾರ ಚಳವಳಿಗೆ ಇಳಿದಿದ್ದಾರೆ. ಕಸ ವಿಂಗಡಣೆ ಸಮಸ್ಯೆ, ಸುರಕ್ಷತಾ ಕೊರತೆ ಮತ್ತು ವೇತನ ಬಾಕಿ ಸೇರಿದಂತೆ ಹಲವು ಕಾರಣಗಳಿಂದ ಅವರು ಕೆಲಸ ನಿಲ್ಲಿಸಿದ್ದಾರೆ. ಇದರಿಂದ ಮನೆಮನೆ ಕಸ ಸಂಗ್ರಹಣೆ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಜಿಬಿಎ ವತಿಯಿಂದ ಮೂರು ವಿಧಗಳಲ್ಲಿ ಕಸ ವಿಂಗಡನೆ ಮಾಡಿ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಆದರೆ, ಈ ಬಗ್ಗೆ ಯಾವುದೇ ತರಬೇತಿ ಇಲ್ಲದೆ ಕೆಲಸ ಮಾಡುತ್ತಿರುವ ಆಟೋ ಚಾಲಕರು ಮತ್ತು ಹೆಲ್ಪರ್‌ಗಳಿಗೆ ಇದು ದೊಡ್ಡ ಸಮಸ್ಯೆಯಾಗಿದೆ. ಕಸ ವಿಂಗಡಣೆ ಮಾಡುವ ವೇಳೆ ಕೈಗಳಿಗೆ ಗಾಯಗಳು ಆಗುತ್ತಿದ್ದು, ಚರ್ಮ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುತ್ತಿರುವುದಾಗಿ ದೂರಿದ್ದಾರೆ.
ನಗರದಲ್ಲಿ ಪ್ರತಿಯೊಂದು ವಾರ್ಡ್‌ನಲ್ಲೂ ಕಸ ವಿಂಗಡಣೆ ಕೇಂದ್ರಗಳು (DWCC) ಇದ್ದರೂ, ಕಸ ವಿಂಗಡಣೆ ಹೊಣೆಗಾರಿಕೆಯನ್ನು ತಮ್ಮ ಮೇಲೇ ಹಾಕಲಾಗಿದೆ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಮೊದಲ ಹಂತದಲ್ಲೇ ಒಣ, ಹಸಿ ಮತ್ತು ಪ್ಲಾಸ್ಟಿಕ್ ಕಸವನ್ನು ಪ್ರತ್ಯೇಕವಾಗಿ ನೀಡದಿರುವುದು ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
ಮನೆಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು ಹಾಗೂ ಗುತ್ತಿಗೆ ಆಧಾರಿತ ಸಿಬ್ಬಂದಿಗೆ ಕಳೆದ 6 ತಿಂಗಳಿನಿಂದ ಸಂಬಳ ಬಾಕಿಯಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸುಮಾರು 10,000 ಆಟೋ ಚಾಲಕರು ಮತ್ತು ಹೆಲ್ಪರ್‌ಗಳಿಗೆ ವೇತನ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ನೇರ ವೇತನ ವ್ಯವಸ್ಥೆಯಲ್ಲಿರುವ ಸುಮಾರು 18,000 ಪೌರಕಾರ್ಮಿಕರಿಗೆ ಕಳೆದ 2 ತಿಂಗಳಿನಿಂದ ಸಂಬಳ ನೀಡಿಲ್ಲ ಎಂಬ ಆರೋಪವೂ ಇದೆ.
ಈ ಸಮಸ್ಯೆಯ ನಡುವೆ ಜಿಬಿಎ ಕಠಿಣ ಕ್ರಮಕ್ಕೂ ಮುಂದಾಗಿದೆ. ಕಸ ಸಂಗ್ರಹಣೆ ಮಾಡದವರ ವಿರುದ್ಧ ಎಸೆನ್ಶಿಯಲ್ ಸರ್ವೀಸ್ ಕಾಯ್ದೆ (ESMA) ಜಾರಿಗೆ ತರುವ ಎಚ್ಚರಿಕೆ ನೀಡಲಾಗಿದೆ. ಕೆಲಸ ನಿರ್ವಹಿಸದ ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ. BLMD ಅಧಿಕಾರಿಗಳು 24 ಪ್ಯಾಕೇಜ್‌ಗಳ ಗುತ್ತಿಗೆದಾರರ ವಿರುದ್ಧ FIR ದಾಖಲಿಸಿದ್ದು, ಆರ್.ಆರ್. ನಗರ, ಸಿ.ವಿ. ರಾಮನ್ ನಗರ, ಅಗ್ರಹಾರ ಸೇರಿದಂತೆ ಹಲವು ಪ್ರದೇಶಗಳು ಒಳಗೊಂಡಿವೆ.
ಬೆಂಗಳೂರು ನಗರದಲ್ಲಿ ಪ್ರತಿದಿನ ಸುಮಾರು 3,000 ರಿಂದ 3,500 ಟನ್‌ಗಳಷ್ಟು ಕಸ ಸಂಗ್ರಹಣೆ ನಡೆಯುತ್ತದೆ. ಕಸ ನಿರ್ವಹಣೆಗೆ ವರ್ಷಕ್ಕೆ ಸುಮಾರು ₹1,400 ರಿಂದ ₹1,600 ಕೋಟಿ ವೆಚ್ಚವಾಗುತ್ತಿದೆ.
ಮನೆಮನೆ ಕಸ ಸಂಗ್ರಹಣೆಗಾಗಿ ಸುಮಾರು 10,000 ಗುತ್ತಿಗೆ ಆಧಾರಿತ ಸಿಬ್ಬಂದಿ ಹಾಗೂ 18,000 ರಿಂದ 20,000 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ಕಾಗಿ ಸುಮಾರು 1,500 ಆಟೋ ಟಿಪ್ಪರ್‌ಗಳು ಬಳಸಲಾಗುತ್ತಿದ್ದು, ಸಂಗ್ರಹಿಸಿದ ಕಸವನ್ನು ಸುಮಾರು 650 ಲಾರಿಗಳು ಮತ್ತು ಕಾಂಪ್ಯಾಕ್ಟರ್‌ಗಳ ಮೂಲಕ ಟ್ರಾನ್ಸ್‌ಫರ್ ಸ್ಟೇಷನ್‌ಗಳು ಮತ್ತು ಡಂಪಿಂಗ್ ಯಾರ್ಡ್‌ಗಳಿಗೆ ಸಾಗಿಸಲಾಗುತ್ತದೆ.
ನಗರದಲ್ಲಿ ಒಣ ಕಸ ಮತ್ತು ತೇವ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ಇದೆ. ಸುಮಾರು 40ರಿಂದ 50 ಒಣ ಕಸ ವಿಂಗಡಣೆ ಕೇಂದ್ರಗಳು (DWCC) ಕಾರ್ಯನಿರ್ವಹಿಸುತ್ತಿದ್ದು, ಪ್ಲಾಸ್ಟಿಕ್, ಲೋಹ, ಕಾಗದ ಮುಂತಾದ ವಸ್ತುಗಳನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುತ್ತದೆ.
ಕಸ ಸಂಗ್ರಹಣೆ ಸ್ಥಗಿತದಿಂದ ನಗರದ ಹಲವು ಭಾಗಗಳಲ್ಲಿ ಅಸ್ವಚ್ಛತೆ ಹೆಚ್ಚಾಗಿದ್ದು, ಸಾರ್ವಜನಿಕ ಆರೋಗ್ಯಕ್ಕೂ ಆತಂಕ ಉಂಟಾಗಿದೆ. ರಸ್ತೆಗಳ ಮೇಲೆ ಕಸದ ರಾಶಿಗಳು ಹೆಚ್ಚಾಗುತ್ತಿರುವುದರಿಂದ ಪರಿಸ್ಥಿತಿ ನಿಯಂತ್ರಣ ತಪ್ಪುವ ಸಾಧ್ಯತೆ ಇದೆ.
ಇಂದಿನಿಂದ ಇನ್ನಷ್ಟು ಭಾಗಗಳಲ್ಲಿ ಕಸ ಸಂಗ್ರಹಣೆ ಸ್ಥಗಿತಗೊಳ್ಳುವ ಸಾಧ್ಯತೆ ಇರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಭೀತಿ ವ್ಯಕ್ತವಾಗಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.