ಬೆಂಗಳೂರಿನ ಈ ವೈದ್ಯರ ಮಾತ್ರೆ ಚೀಟಿ ಸಿಕ್ಕಾಪಟ್ಟೆ ವೈರಲ್​: ಕೊನೆಗೂ ಆಸೆ ನೆರವೇರಿತು ಅಂತಿದ್ದಾರೆ ನೆಟ್ಟಿಗರು

Published : Jun 29, 2026, 01:37 PM IST
Doctors prescription

ಸಾರಾಂಶ

ಸಾಮಾನ್ಯವಾಗಿ ವೈದ್ಯರ ಅಸ್ಪಷ್ಟ ಕೈಬರಹದ ಬಗ್ಗೆ ಇರುವ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ, ಡಾ. ಲೋಕೇಶ್ ಎಂಬುವವರು ಬರೆದ ಸುಂದರ ಅಕ್ಷರಗಳ ಪ್ರಿಸ್ಕ್ರಿಪ್ಷನ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸ್ಪಷ್ಟವಾದ ಕೈಬರಹಕ್ಕೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ವೈದ್ಯರ ವೃತ್ತಿಪರತೆಯನ್ನು ಶ್ಲಾಘಿಸಲಾಗುತ್ತಿದೆ.

ಯಾರಾದರೂ ಓದಲು ಆಗದೇ ಇರುವಂಥ ಅಕ್ಷರ ಬರೆದರೆ ಅದನ್ನು ಸಾಮಾನ್ಯವಾಗಿ ವೈದ್ಯರು ಬರೆದುಕೊಡುವ ಪ್ರಿಸ್ಕ್ರಿಪ್ಷನ್​ಗೆ ಹೋಲಿಸುವುದು ಇದೆ. ಏಕೆಂದರೆ, ಸಾಮಾನ್ಯವಾಗಿ ಬಹುತೇಕ ವೈದ್ಯರು ಬರೆದುಕೊಡುವ ವೈದ್ಯರ ಮಾತ್ರೆಯ ಚೀಟಿ ಓದಲು ಯಾರಿಗೂ ಬರುವುದಿಲ್ಲ. ಜನಸಾಮಾನ್ಯರಿಗೂ ಅರ್ಥವಾಗುವಂತೆ ಚೀಟಿ ಬರೆದುಕೊಡಬೇಕು ಎಂದು ಸರ್ಕಾರವೇ ರೂಲ್ಸ್​ ಮಾಡಿದ್ದರೂ, ಅದು ಸಾಧ್ಯನೇ ಇಲ್ಲ ಎನ್ನುವ ಸ್ಥಿತಿ ಇದೆ. ಕಂಪ್ಯೂಟರೀಕರಣ ಆಗಿರುವ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಕಂಪ್ಯೂಟರ್​ ಪ್ರಿಂಟ್​ ಕೊಡುವ ಕಾರಣ ಅದು ಸಮಸ್ಯೆ ಆಗುವುದಿಲ್ಲ. ಆದರೆ ಚಿಕ್ಕಪುಟ್ಟ ಆಸ್ಪತ್ರೆಗಳಲ್ಲಿ, ನರ್ಸಿಂಗ್​ ಹೋಮ್​ಗಳಲ್ಲಿ ಕೈಯಲ್ಲಿ ವೈದ್ಯರು ಬರೆದುಕೊಡುವ ಕಾರಣ, ಅದು ಮೆಡಿಕಲ್​ ಷಾಪ್​ನವರಿಗಷ್ಟೇ ಅರ್ಥ ಆಗುತ್ತದೆ.

ಸಾಕಷ್ಟು ಮೀಮ್ಸ್​

ಇದೇ ಕಾರಣಕ್ಕೆ ವೈದ್ಯರ ಹ್ಯಾಂಡ್​ರೈಟಿಂಗ್​ ಸಾಕಷ್ಟು ಮೀಮ್ಸ್​ಗಳು ಬರುತ್ತಲೇ ಇರುತ್ತವೆ. ಆದರೆ ಈಗ ವೈರಲ್​ ಆಗಿರುವ ವೈದ್ಯರ ಪ್ರಿಸ್ಕ್ರಿಪ್ಷನ್​ ಒಂದರಲ್ಲಿ ಅತ್ಯಂತ ಸುಂದರವಾಗಿರುವ ಅಕ್ಷರವಿದ್ದು, ಇದನ್ನು ನೋಡಿದ ನೆಟ್ಟಿಗರು ಕೊನೆಗೂ ವೈದ್ಯರ ಸುಂದರ ಅಕ್ಷರ ನೋಡುವ ಕನಸು ನನಸಾಯಿತು ಎನ್ನುತ್ತಿದ್ದಾರೆ.

ಜಾಲತಾಣದಲ್ಲಿ ವೈರಲ್​

ಅಣೇಕಟ್ಟೆ ವಿಶ್ವನಾಥ್ ಎನ್ನುವವರು ಫೇಸ್​ಬುಕ್​ನಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು, 'ಈ ವೈದ್ಯರಿಗೊಂದು ಮೆಚ್ಚುಗೆ ಇರಲಿ!! ಇಂದು ನಮ್ಮವರೊಬ್ಬರನ್ನು ಹೆಸರಘಟ್ಟ ರಸ್ತೆಯ ಎನ್ ಆರ್ ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆನು. ಅಲ್ಲಿ ವೈದ್ಯರು ಬರೆದುಕೊಟ್ಟ ಈ ಚೀಟಿ ನನ್ನ ಗಮನ ಸೆಳೆಯಿತು. ಸಾಮಾನ್ಯವಾಗಿ ವೈದ್ಯರ ಚೀಟಿಗಳು ನಮಗೆ ಚೀನೀ ಭಾಷೆಯಂತೆ ಕಾಣುತ್ತವೆ. ಏನೂ ಅರ್ಥ ಆಗುವುದೇ ಇಲ್ಲ. ಮೆಡಿಕಲ್ ನವರಿಗೆ ಮಾತ್ರ ಅಂದಾಜಾಗುತ್ತದೆ. ಅವರು ಬರೆದುಕೊಟ್ಟ ಮಾತ್ರೆ ಯಾವಾಗ ನುಂಗಬೇಕು ಎಂಬುದನ್ನು ಅವರು ಹೇಳುವುದರಿಂದಲೇ ನೆನಪಿಟ್ಟುಕೊಳ್ಳಬೇಕು. ಅದಕ್ಕಾಗಿ ಮಾತ್ರೆ ಬಣ್ಣ ನೋಡಿಕೊಂಡು, ಇಲ್ಲವೆ, ಮಾತ್ರೆಯ ಮೂಲೆ ಮಡಚಿಕೊಂಡು ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ. ಈ ಡಾಕ್ಟರ್ ಬರೆದುಕೊಟ್ಟ ಚೀಟಿಯಲ್ಲಿ ವಿವರಗಳು ಇಂಗ್ಲಿಷ್ ಬರುವ ಯಾರಿಗಾದರೂ ಅರ್ಥ ಅಗುವಂತೆ ಮುತ್ತು ಪೋಣಿಸಿದಂತೆ ಅಕ್ಷರ ಇವೆ. ಈ ಅಕ್ಷರಗಳು ಅವರು ವೃತ್ತಿಯನ್ನು ಪ್ರೀತಿಸುವುದನ್ನು ಸೂಚಿಸುತ್ತದೆ. ಇಂತಹ ವೈದ್ಯರ ಸಂಖ್ಯೆ ಹೆಚ್ಚಾಗಬೇಕು. ಇವರ ಹೆಸರು ಡಾ‌.ಲೋಕೇಶ್, ಇವರಿಗೆ ಇವರ ಹಸ್ತಾಕ್ಷರ ಸುಂದರವಾಗಿ ಇರುವುದನ್ನು ತಿಳಿಸಿದೆ. ಖುಷಿಪಟ್ಟರು' ಎಂದು ಬರೆದುಕೊಂಡಿದ್ದಾರೆ.

ಇದರ ಬಗ್ಗೆ ನೆಟ್ಟಿಗರಿಂದಲೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ತಮಗೆ ಪರಿಚಯವಿರುವ ಸುಂದರ ಅಕ್ಷರ ಬರೆಯುವ ವೈದ್ಯರ ಬಗ್ಗೆಯೂ ಉಲ್ಲೇಖಿಸುತ್ತಿದ್ದಾರೆ. ಒಟ್ಟಿನಲ್ಲಿ ವೈದ್ಯರು ಸುಂದರವಾಗಿ ಬರೆದರೆ ಅದು ವೈರಲ್​ ಆಗುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗುತ್ತಿದೆ.

PREV
Read more Articles on
click me!

Recommended Stories

ಜನರ ಕಾರು ಓಡಲು ಪ್ರಕೃತಿಯ ಒಡಲು ಹರಿದರು..ಶಿವಮೊಗ್ಗದಲ್ಲಿ ‘ಟ್ರಾಫಿಕ್’ ನೆಪದಲ್ಲಿ ಮರಗಳ ಮಾರಣಹೋಮ!
ಹೆಬ್ಬಾಳ ವೆಟರ್ನರಿ ಕಾಲೇಜಿನಲ್ಲಿ ವಾಕಿಂಗ್‌ಗೆ ಇನ್ಮುಂದೆ ಉಚಿತ ಪ್ರವೇಶವಿಲ್ಲ; ವಾರ್ಷಿಕ ಪಾಸ್ ಕಡ್ಡಾಯ ಮಾಡಿದ ಮಂಡಳಿ!