
ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳು, ಫುಟ್‌ಪಾತ್‌ಗಳು ಮತ್ತು ಸಾರ್ವಜನಿಕ ಮುಕ್ತ ಪ್ರದೇಶಗಳಲ್ಲಿ ದಿನಗಟ್ಟಲೆ, ತಿಂಗಳುಗಟ್ಟಲೆ ಅನಾಥವಾಗಿ ನಿಲ್ಲಿಸಲಾಗಿರುವ ಹಳೇ ವಾಹನಗಳ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮತ್ತು ಸಂಚಾರಿ ಪೊಲೀಸರು ಜಂಟಿಯಾಗಿ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರ ಸೂಚನೆ ಮೇರೆಗೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅನಾಥ ವಾಹನಗಳ ತೆರವು ಕಾರ್ಯಾಚರಣೆಗೆ ಕಠಿಣ ಮಾರ್ಗಸೂಚಿ ಪ್ರಕಟಿಸಿದ್ದು, ಜುಲೈ 10 ರಿಂದ ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಅಧಿಕೃತವಾಗಿ ಕಾರ್ಯಾಚರಣೆ ಆರಂಭವಾಗಲಿದೆ. ಜಿಬಿಎ ಕಾಯ್ದೆ-2024ರ ಸೆಕ್ಷನ್ 324ರ ಅನ್ವಯ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವ ಇಂತಹ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಅನಾಥ ಹಾಗೂ ಬಿಡಾಡಿ ವಾಹನಗಳನ್ನು ತೆರವುಗೊಳಿಸಲು ಜಿಬಿಎ ಹಂತ-ಹಂತದ ಕಠಿಣ ನಿಯಮಾವಳಿಗಳನ್ನು ರೂಪಿಸಿದೆ:
ರಸ್ತೆ ಬದಿ, ಸರ್ಕಾರಿ ಜಾಗ ಅಥವಾ ಫುಟ್‌ಪಾತ್‌ಗಳಲ್ಲಿ ದೀರ್ಘಕಾಲದಿಂದ ಬಿದ್ದಿರುವ ವಾಹನಗಳನ್ನು ಗುರುತಿಸಿ, ಅವುಗಳ ಮೇಲೆ ಅಧಿಕಾರಿಗಳು ಅಧಿಕೃತ ಸ್ಟಿಕ್ಕರ್ ಮಾದರಿಯ ನೋಟಿಸ್ ಅಂಟಿಸಲಿದ್ದಾರೆ. ಇದರೊಂದಿಗೆ ಆ ವಾಹನಗಳು ಅಲ್ಲಿಂದ ಕದಲದಂತೆ ಚಕ್ರಗಳಿಗೆ ವೀಲ್ ಕ್ಲಾಂಪ್ ಅಳವಡಿಸಲಾಗುತ್ತದೆ.
ನೋಟಿಸ್ ಅಂಟಿಸಿದ 7 ದಿನಗಳ ಒಳಗಾಗಿ ವಾಹನಗಳ ಮಾಲೀಕರು ಎಚ್ಚೆತ್ತುಕೊಂಡು, ತಮ್ಮ ವಾಹನಗಳನ್ನು ಅಲ್ಲಿಂದ ತೆರವುಗೊಳಿಸದಿದ್ದರೆ, ಅಂತಹ ವಾಹನಗಳನ್ನು ಜಿಬಿಎ ಮತ್ತು ಪೊಲೀಸರು ಜಂಟಿಯಾಗಿ ಟೋಯಿಂಗ್ ಮೂಲಕ ಜಪ್ತಿ ಮಾಡಲಿದ್ದಾರೆ.
ಜಪ್ತಿ ಮಾಡಲಾದ ವಾಹನಗಳನ್ನು ಹಿಂತಿರುಗಿಸದೆ, ನಿಯಮಾನುಸಾರ ಸರ್ಕಾರಿ ಪ್ರಕ್ರಿಯೆಗಳ ಮೂಲಕ ಬಹಿರಂಗವಾಗಿ ಹರಾಜು ಹಾಕಿ ವಿಲೇವಾರಿ ಮಾಡಲಾಗುತ್ತದೆ.
ನಿಮ್ಮ ಮನೆ ಮುಂದೆ, ಗಲ್ಲಿಗಳಲ್ಲಿ ಅಥವಾ ಅಪಾರ್ಟ್‌ಮೆಂಟ್‌ಗಳ ಸುತ್ತಮುತ್ತ ಯಾರಾದರೂ ಹಳೆಯ ವಾಹನಗಳನ್ನು ತಂದು ಅನಾಥವಾಗಿ ನಿಲ್ಲಿಸಿದ್ದಲ್ಲಿ, ಸಾರ್ವಜನಿಕರೇ ನೇರವಾಗಿ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್ (Play Store) ಅಥವಾ ಆಪಲ್ ಆಪ್ ಸ್ಟೋರ್ (App Store) ನಿಂದ 'Public Eye' ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಫುಟ್‌ಪಾತ್ ಅಥವಾ ರಸ್ತೆ ಬದಿ ಅನಾಥವಾಗಿ ನಿಂತಿರುವ ವಾಹನಗಳ ಫೋಟೋವನ್ನು ಈ ಆಪ್‌ನಲ್ಲಿ ಅಪ್‌ಲೋಡ್ ಮಾಡಿ ಮಾಹಿತಿ ನೀಡಿದರೆ, ಸಂಚಾರಿ ಪೊಲೀಸರು ಮತ್ತು ಜಿಬಿಎ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಿದ್ದಾರೆ.
ನಗರದ ಸೌಂದರ್ಯಕ್ಕೆ ಕಳಂಕ ತರುತ್ತಿರುವ ಹಾಗೂ ಸಾರ್ವಜನಿಕರ ಮತ್ತು ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟುಮಾಡುತ್ತಿರುವ ಅನಾಥ ವಾಹನಗಳ ವಿರುದ್ಧ ನಾಳೆಯಿಂದಲೇ (ಜುಲೈ 10) ಜಂಟಿ ಕಾರ್ಯಾಚರಣೆ ಶುರುವಾಗಲಿದೆ. ಸಾರ್ವಜನಿಕರು ತಮ್ಮ ಯಾವುದೇ ಹಳೇ ಅಥವಾ ದುರಸ್ತಿಯಲ್ಲಿರುವ ವಾಹನಗಳನ್ನು ರಸ್ತೆ ಬದಿ ಬಿಟ್ಟಿದ್ದರೆ, ತಕ್ಷಣವೇ ಅವುಗಳನ್ನು ತಮ್ಮ ಸ್ವಂತ ಜಾಗಗಳಿಗೆ ಸ್ಥಳಾಂತರಿಸಿಕೊಳ್ಳಬೇಕು. ನಿಯಮ ಉಲ್ಲಂಘಿಸಿದರೆ ಯಾವುದೇ ಮುಲಾಜಿಲ್ಲದೆ ವಾಹನಗಳನ್ನು ಜಪ್ತಿ ಮಾಡಿ ಹರಾಜು ಹಾಕಲಾಗುವುದು." ಎಂದು ಜಿಬಿಎ ಮುಖ್ಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.