
ಬೆಂಗಳೂರು (ಸೆ.30): ಸಿಲಿಕಾನ್ ಸಿಟಿ ಬೆಂಗಳೂರಿನ ಮಡಿವಾಳ ಸಿದ್ದಾರ್ಥ ಕಾಲೋನಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಭಾರಿ ದುರಂತ ಸಂಭವಿಸಿದೆ. ಅಡಿಪಾಯಕ್ಕಾಗಿ ತೆಗೆದಿದ್ದ ಆಳವಾದ ಗುಂಡಿಯ ಮೇಲೆ ಏಕಾಏಕಿ ಮಣ್ಣು ಕುಸಿದು ಬಿದ್ದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
ಕಾಲೋನಿಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿತ್ತು. ಪಿಲ್ಲರ್‌ಗಳನ್ನು ಹಾಕುವ ಉದ್ದೇಶದಿಂದ ನಿರ್ಮಾಣ ಸ್ಥಳದಲ್ಲಿ 20 ಅಡಿಗಳಿಗೂ ಹೆಚ್ಚು ಆಳದ ಗುಂಡಿಯನ್ನು ಅಗೆಯಲಾಗಿತ್ತು. ಒಂದು ಕಡೆ ಪಿಲ್ಲರ್‌ಗೆ ಸಿಮೆಂಟ್ ಪ್ಯಾಕಿಂಗ್ ಹಾಕಲಾಗುತ್ತಿತ್ತು. ಮತ್ತೊಂದು ಕಡೆ, ಸುಮಾರು 8 ಮಂದಿ ಕೂಲಿ ಕಾರ್ಮಿಕರು ಪಿಲ್ಲರ್ ನಿರ್ಮಾಣಕ್ಕೆ ಬೇಕಾದ ಕೆಲಸಗಳಲ್ಲಿ ನಿರತರಾಗಿದ್ದರು.
ಕೆಳಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದ ವೇಳೆ, ಗುಂಡಿಯ ಮೇಲ್ಭಾಗದಿಂದ ಭಾರೀ ಪ್ರಮಾಣದ ಮಣ್ಣು ಧಿಡೀರನೆ ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ಮೂವರು ಕಾರ್ಮಿಕರು ಮಣ್ಣಿನ ಅಡಿ ಸಿಲುಕಿದರು. ಅದೃಷ್ಟವಶಾತ್, ಉಳಿದ ಐವರು ಕಾರ್ಮಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಮಣ್ಣಿನ ಅಡಿ ಸಿಲುಕಿದ್ದ ಕಾರ್ಮಿಕರನ್ನು ಕೂಡಲೇ ಹೊರತೆಗೆಯಲು ಪ್ರಯತ್ನಿಸಲಾಯಿತು. ಈ ವೇಳೆ ಲಾಲ್ ಮದನ್ (33) ಮತ್ತು ರಜಾವುದ್ದೀನ್ (30) ಎಂಬ ಜಾರ್ಖಂಡ್ ಮೂಲದ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವುದು ದೃಢಪಟ್ಟಿದೆ. ಗಂಭೀರ ಸ್ಥಿತಿಯಲ್ಲಿದ್ದ ಮತ್ತೊಬ್ಬ ಕಾರ್ಮಿಕ ಸೈಫುಲ್ಲಾ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ತೀವ್ರ ನಿಗಾದಲ್ಲಿ ಚಿಕಿತ್ಸೆ ಮುಂದುವರೆದಿದೆ.
ಘಟನೆ ನಡೆದ ಕೂಡಲೇ ಡಿಸಿಪಿ ಸಾರಾ ಫಾತೀಮಾ ಅವರು ಮಡಿವಾಳ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಸುರಕ್ಷತಾ ಮಾನದಂಡಗಳನ್ನು ಸರಿಯಾಗಿ ಪಾಲಿಸಲಾಗಿದೆಯೇ, ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗುತ್ತಿಗೆದಾರರು ಮತ್ತು ಕಟ್ಟಡ ಮಾಲೀಕರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವೇ ಎಂಬುದರ ಬಗ್ಗೆಯೂ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.