
ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಮೇ 18ರಿಂದ ಮೂರು ಹೊಸ ಮಾರ್ಗಗಳಲ್ಲಿ ಬಸ್ ಸೇವೆ ಆರಂಭಿಸುತ್ತಿದೆ. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಿಂದ ವಿಜಯಪುರ ಮತ್ತು ಘಾಟಿ ಸುಬ್ರಹ್ಮಣ್ಯ, ದೇವಹಳ್ಳಿಯಿಂದ ನಂದಿ ಕ್ರಾಸ್‌ವರೆಗೆ ನೂತನ ಬಸ್ ಸೇವೆ ನೀಡಲಾಗುತ್ತಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ವಿಜಯಪುರಕ್ಕೆ ಸೇವೆ ನೀಡುವ ಬಸ್ ಹೆಬ್ಬಾಳ, ಯಲಹಂಕ, ದೇವನಹಳ್ಳಿ ಮೂಲಕ ಸಾಗಲಿದೆ. ಹಾಗೆಯೇ, ಕೆಂಪೇಗೌಡ ಬಸ್ ನಿಲ್ದಾಣದಿಂದ ಘಾಟಿ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್ ಹೆಬ್ಬಾಳ, ಯಲಹಂಕ, ಎನ್‌ಇಎಸ್, ದೊಡ್ಡಬಳ್ಳಾಪುರ ಮೂಲಕ ಹಾಗೂ ದೇವಹಳ್ಳಿಯಿಂದ ನಂದಿ ಕ್ರಾಸ್ ಮಾರ್ಗದ ಬಸ್ ಆವತಿ, ವೆಂಕಟಗಿರಿ ಕೋಟೆ ಮೂಲಕ ಸೇವೆ ನೀಡಲಿವೆ.
ರಾಜ್ಯ ಸರ್ಕಾರದ ಆದೇಶದಂತೆ ಬಿಎಂಟಿಸಿ ನೌಕರರಿಗೆ 26 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ನಿಗಮ ಮುಂದಾಗಿದ್ದು, ಅದಕ್ಕಾಗಿ ನೌಕರರ ಮಾಹಿತಿ ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಬಿಎಂಟಿಸಿ ಮುಖ್ಯಲೆಕ್ಕಾಧಿಕಾರಿ ಸೂಚಿಸಿದ್ದಾರೆ. ಸಾರಿಗೆ ನೌಕರರ ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 1271.92 ಕೋಟಿ ರು. ಅನುದಾನ ನೀಡುವುದಾಗಿ ಘೋಷಿಸಿದೆ. ಅದರ ಮೊದಲ ಕಂತಾಗಿ ನಾಲ್ಕೂ ನಿಗಮಗಳಿಗೆ ಒಟ್ಟು 450 ಕೋಟಿ ರು.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲಿ ಬಿಎಂಟಿಸಿ ನೌಕರರಿಗೆ ನೀಡಲು 137.24 ಕೋಟಿ ರು. ಕೊಡಲಾಗಿದೆ.
ಆ ಹಣದಲ್ಲಿ ಮೊದಲ ಕಂತಾಗಿ ನೌಕರರಿಗೆ ಪಾವತಿಸಲು ಬಿಎಂಟಿಸಿ ಮುಂದಾಗಿದ್ದು, ಅದಕ್ಕಾಗಿ ನೌಕರರ ವಿವರ ತರಿಸಿಕೊಳ್ಳಲಾಗುತ್ತಿದೆ. ಬಿಎಂಟಿಸಿ ಮುಖ್ಯ ಲೆಕ್ಕಾಧಿಕಾರಿ ಅವರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿರುವಂತೆ, ತಮ್ಮ ವ್ಯಾಪ್ತಿಯ ನೌಕರರ ವೇತನ ಹಿಂಬಾಕಿಗೆ ಸಂಬಂಧಿಸಿದಂತೆ ವರದಿ ನೀಡಬೇಕು ಎಂದು ತಿಳಿಸಲಾಗಿದೆ.