Bengaluru: ಬಸವನಗುಡಿಯ ಶೇಖರ್‌ ಆಸ್ಪತ್ರೆ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಅಪಪ್ರಚಾರ, ಸ್ಪಷ್ಟನೆ ನೀಡಿದ ಹಾಸ್ಪಿಟಲ್‌!

By Santosh Naik  |  First Published Sep 28, 2024, 4:13 PM IST

ಬೆಂಗಳೂರಿನ ಶೇಖರ್ ಆಸ್ಪತ್ರೆಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ಖರೀದಿಸಿ ರೋಗಿಗಳನ್ನು ಸಾಯಿಸುತ್ತಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಆಸ್ಪತ್ರೆಯು ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಆಸ್ಪತ್ರೆಯನ್ನು ಯಾರಿಗೂ ಮಾರಲಾಗಿಲ್ಲ ಅಥವಾ ಬಾಡಿಗೆಗೆ ನೀಡಲಾಗಿಲ್ಲ ಎಂದು ಆಸ್ಪತ್ರೆಯು ಸ್ಪಷ್ಟಪಡಿಸಿದೆ.


ಬೆಂಗಳೂರು (ಸೆ.28): ರಾಜಧಾನಿಯ ಬಸವನಗುಡಿಯಲ್ಲಿರುವ ಪ್ರತಿಷ್ಠಿತ ಶೇಖರ್‌ ಆಸ್ಪತ್ರೆಯ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಅಪಪ್ರಚಾರವಾಗುತ್ತಿರುವ ಬಗ್ಗೆ ಸ್ವತಃ ಆಸ್ಪತ್ರೆಯೇ ಸ್ಪಷ್ಟನೆ ನೀಡಿದೆ. ಶೇಖರ್‌ ಆಸ್ಪತ್ರೆಯನ್ನು ಇತ್ತೀಚೆಗೆ ಮುಸ್ಲಿಂ ವ್ಯಕ್ತಿಯೊಬ್ಬ ಖರೀದಿ ಮಾಡಿದ್ದು, ಅಲ್ಲಿಗೆ ಬಂದ ರೋಗಿಗಳನ್ನು ಸಾಯಿಸುವ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪ ಮಾಡಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಸ್ಪತ್ರೆ ಇದು. ಅಪ್ರಪ್ರಚಾರ ಹಾಗೂ ಸಂಪೂರ್ಣವಾಗಿ ಸುಳ್ಳು ಸುದ್ದಿ ಎಂದು ಹೇಳಿದೆ. ಆಸ್ಪತ್ರೆಯನ್ನು ಅನ್ಯ ಕೋಮಿನ ವ್ಯಕ್ತಿಗೆ ಮಾರಲಾಗಿದ್ದು, ಅಲ್ಲಿ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲವೆಂದು ಕಳೆದ 3-4 ದಿನಗಳಿಂದ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದು ಶುದ್ಧ ಸುಳ್ಳೆಂದು ಆಸ್ಪತ್ರೆ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. 

ಆಸ್ಪತ್ರೆ ನೀಡಿದ ಸ್ಪಷ್ಟನೆ:  ಕಳೆದ 3-4 ದಿನಗಳಿಂದ ನಮ್ಮ ಶೇಖರ್ ಆಸ್ಪತ್ರೆ ಬಗ್ಗೆ ವ್ಯಾಪಕವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಅವಹೇಳನ ಮತ್ತು ಆಘಾತಕಾರಿ ಅಲ್ಲದೇ ಸತ್ಯಕ್ಕೆ ದೂರವಾದ ಸುದ್ದಿಯೊಂದು ಹರಿದಾಡುತ್ತಿದೆ. ಇದರ ಬಗ್ಗೆ ಸ್ಪಷ್ಟಿಕರಣವನ್ನು ಈ ಮೂಲಕ ಶೇಖರ್ ಹಾಸ್ಪಿಟಲ್ ನೀಡುತ್ತಿದೆ. ಮೊದಲಿಗೆ,  ಆಸ್ಪತ್ರೆಯನ್ನು ಯಾರಿಗೂ ಮಾರಾಟ ಮಾಡಿಲ್ಲ ಮಾಡುವುದೂ ಇಲ್ಲ. ಮುಂಬರುವ ಯಾವುದೇ ದಿನಗಳಲ್ಲಿ ಬಾಡಿಗೆಗೆ ನೀಡುವುದಿಲ್ಲ. ಅಲ್ಲದೆ ಸುದ್ದಿ ಮಾಧ್ಯಮದಲ್ಲಿ ತಿಳಿದು ಬಂದಂತೆ ಕಳೆದ 45 ವರ್ಷಗಳಿಂದ ಇತಿಹಾಸದಲ್ಲಿ, ಸುದ್ದಿ ಮಾಧ್ಯಮದಲ್ಲಿ ತಿಳಿಸಲ್ಪಟ್ಟ ರೋಗಿಯನ್ನು ನಾವು ನೋಡಿಲ್ಲ, ಚಿಕಿತ್ಸೆಯನ್ನು ನೀಡಿಲ್ಲ. ಇದೆಲ್ಲ ವಿಷ ತುಂಬಿದ ವಿಕೃತಿ ಮನಸ್ಸಿನ ಕಟ್ಟು ಕಥೆ.

ಎರಡನೆಯದಾಗಿ, ನಮ್ಮ ಆಸ್ಪತ್ರೆಯು ಉತ್ತಮ ಕಾರ್ಯವೈಖರಿಯಿಂದ ನಮ್ಮ ಕುಟುಂಬದ ಹಾಗೂ ಇತರೇ ವೈದ್ಯ ತಂಡದಿಂದ ಹೆಸರುವಾಸಿಯಾಗಿದೆ. ಮತ್ತು ಈ ಸುದ್ದಿಯು ನೂರಾರು ಹಿತೈಷಿಗಳಿಗೆ ಹಾನಿ ಮಾಡಿದ್ದಲ್ಲದೆ ಇದರ ಬಗ್ಗೆ ಕಾನೂನಾತ್ಮಕ ಕ್ರಮಕೈಗೊಂಡಿದ್ದೇವೆ. ಮತ್ತು ಸತ್ಯಾಸತ್ಯತೆಯನ್ನು ದೇವರ ಇಚ್ಛೆಗೆ ಬಿಟ್ಟಿದ್ದೇವೆ ಹಾಗೂ ನಮ್ಮನ್ನು ದೂರವಾಣಿಯ ಮೂಲಕ ಸಂತೈಸಿದ ನಮ್ಮ ಎಲ್ಲಾ ಹಿತೈಷಿಗಳಿಗೆ ಈ ಮೂಲಕ ಧನ್ಯವಾದಗಳನ್ನು ಶೇಖರ್ ಆಸ್ಪತ್ರೆ ಮ್ಯಾನೆಜ್‌ಮೆಂಟ್ ಅರ್ಪಿಸುತ್ತದೆ ಎಂದು ತಿಳಿಸಿದೆ.

ಏನಿದು ಸುಳ್ಳು ಸುದ್ದಿ: ಕೆಲವರ ವಾಟ್ಸ್‌ಆಪ್‌ನಲ್ಲಿ ಈ ಬಗ್ಗೆ ಮಾಹಿತಿ ಹರಿದಾಡುತ್ತಿದ್ದು. ಇದು ಸಂಪೂರ್ಣವಾಗಿ ಸುಳ್ಳು. ಅದೇನು ಅನ್ನೋದನ್ನ ನೋಡೋದಾದರೆ, 'ಈ ವಿಷಯ ಇದೇ ರೀತಿ ನನ್ನ ವಿಷಯದಲ್ಲೂ ನಡೆದಿದೆ , ಅಲ್ಲಿಂದ ಜೀವ ಉಳಿಸಿಕೊಂಡು ಹೊರಗೆ ಬರೋದೇ ಕಷ್ಟ ಆಯ್ತು. ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಮಠದ ಹತ್ತಿರ ಇರೋ ಶೇಖರ್ ಆಸ್ಪತ್ರೆ. ಮೊದಲು ಹಿಂದೂಗಳದ್ದಾಗಿತ್ತು , ಅದನ್ನೀಗ ಸಾಬಿ ತೊಗೊಂಡು, ಪೇಷೆಂಟ್ ಗಳನ್ನೆಲ್ಲಾ ಸಾಯಿಸುತ್ತಿದ್ದಾನೆ. ನು ಸ್ವಲ್ಪ ಬೆನ್ನು ನೋವಿಗೆ ಒಂದು ಇಂಜೆಕ್ಷನ್ ಕೊಡಿ ಅಂತ ಹೋದರೆ, ಅಲ್ಲಿರೋ ಮಂಗಳೂರು ಮೂಲದ ಹಿಂದೂ ಮೋಸಗಾರ ಡಾಕ್ಟರೊಬ್ಬ, ಬೆನ್ನಿನ ಎಕ್ಸ್‌ರೇ ತೆಗೆಸಿ-ಅದರ ಮೇಲೆಲ್ಲಾ ಗೀಚಿ-ಮೂಳೆ ಎಲ್ಲಾ ಪುಡಿಪುಡಿಯಾಗಿ ಹೋಗಿದೆ ಅಂತ ಸುಳ್ಳು ಹೇಳಿ -ಎರಡು ದಿನ ಅಡ್ಮಿಟ್‌ ಆಗಿ ನೋಡೋಣ ಅಂದ. ಕೊನೆಗೆ ಪೊಲೀಸ್ ಗೆ ಫೋನ್ ಮಾಡ್ತೀನಿ ಅಂತ ಗಲಾಟೆ ಶುರು ಮಾಡಿದೆ. ನನ್ನ ನೋಡಲು ಬಂದ ನಮ್ಮ ಮನೆಯವರನ್ನು ಯಾರನ್ನೂ ನನ್ನ ಹತ್ತಿರಕ್ಕೆ ಬಿಡುತ್ತಿರಲಿಲ್ಲ.

ನಂಗೆ ಅನುಮಾನ ಜಾಸ್ತಿ ಆಯ್ತು,  ಪೊಲೀಸ್ ಗೆ ಫೋನ್ ಮಾಡಿ ನಿಮ್ಮನ್ನು ಜೈಲ್ ಗೆ ಕಳಿಸ್ತೀನಿ. ಏನೋ ಮೋಸ ಮಾಡ್ತಿದೀರಿ. ನನ್ನ ಸಾಯಿಸಲು ಪ್ರಯತ್ನ ನಡೀತಿದೆ ,ನಂಗೇನೂ ಆಗಿಲ್ಲ ಅಂತ ಕೂಗಾಡಲು ಶುರು ಮಾಡಿದೆ(ಶಕ್ತಿಯೇ ಇರಲಿಲ್ಲ). ಆದರೂ ಮೂರೂವರೆ ಲಕ್ಷ ಬಿಲ್ ಕೊಟ್ಟಾಗ ಗಾಬರಿಯಾಗಿಬಿಟ್ಟಿತು. Medical claim card ಕೊಟ್ಟಿದ್ದರೂ ಆ ಏಜೆಂಟ್ ಕೂಡ ಅವರೊಂದಿಗೆ ಶಾಮೀಲಾಗಿದ್ದ. ನನ್ನ ಹತ್ತಿರ ರೆಡಿ ಕ್ಯಾಷ್ ಇರಲಿಲ್ಲ. ಕೊನೆಗೆ-ಕೈ ಬ್ಯಾಂಡೇಜ್ ಜೊತೆಗೆ ಆಸ್ಪತ್ರೆಯ ಸ್ಟಾಫ್‌ ಜತೆಗೆ ಬ್ಯಾಂಕ್ ಗೆ ಹೋಗಿ ನನ್ನ ಕಷ್ಟ ಹೇಳಿದಾಗ ಅವರು ಕರುಣೆಯಿಂದ ತಕ್ಷಣ ಚಿನ್ನದ ಒಡವೆ ತೊಗೊಂಡು ಸಾಲ ಕೊಟ್ಟರು.

ಅಷ್ಟರಲ್ಲಿ ಪೊಲೀಸ್ ಗೆ ಫೋನ್ ಮಾಡಿದ್ದೆ. ಇದು ಗೊತ್ತಾದ ಕೂಡಲೇ ಮೂರೂವರೆ ಬೇಡ, ಒಂದೂವರೆ ಲಕ್ಷ ಮಾತ್ರ ಕಟ್ಟಿ ಸಾಕು-ಡಿಸ್ಚಾರ್ಜ್‌ ಮಾಡ್ತೀವಿ ಅಂತ ನಾಟಕ ಮಾಡಿದ್ರು. ಅಲ್ಲಿಂದ ಹೊರಗೆ ಬಂದು ನಂತರ ಪೊಲೀಸ್ ಗೆ ಕಂಪ್ಲೇಂಟ್ ಕೊಡೋಣ ಅಂತ ಹೇಳಿ, ಹಣ ಕಟ್ಟಿ ,ಸಿಕ್ಕಿದ ಆಟೋ ಹತ್ತಿ ಮನೆಗೆ ಬಂದೆ. ಅವರ ಜತೆಗೆ ದಿನಾ ಅವರು ಮೋಸದಿಂದ ಕೊಟ್ಟಿದ್ದ ನಿದ್ರೆ ಔಷಧಿಯ side effect ನಿಂದ ನಂತರದ 4-5 ದಿನಗಳು ಇಡೀ ರಾತ್ರಿ ನಿದ್ದೆ ಬರದೇ -ನರಕ ಯಾತನೆ ಅನುಭವಿಸಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್‌, ಎಂಆರ್‌ಐ ಸ್ಥಗಿತ: ಬಡ ರೋಗಿಗಳ ಪರದಾಟ

ಪೊಲೀಸ್ ರು ನನಗೇ ಬೈದರು: ಆ ಆಸ್ಪತ್ರೆ ಗೆ ದೊಡ್ಡ ದೊಡ್ಡ ಸಾಬಿ ರಾಜಕಾರಣಿಗಳ ಕೈವಾಡ ಇದೆ. ನೀವು ಬದುಕಿ ಬಂದಿದ್ದೇ ಹೆಚ್ಚು , ನಿಮ್ಮ ಕಿಡ್ನಿ, ಲಿವರ್ ,ಇತ್ಯಾದಿ ದೇಹದ ಭಾಗಗಳನ್ನು ಏನಾದರೂ ಕದ್ದಿದಾರಾ ಅಂತ ಪೂರ್ತಿ ದೇಹದ ಪರೀಕ್ಷೆ ಮಾಡಿಸಿ ಮೊದಲು. ಜತೆಗೆ,ಎಲ್ಲಾರಿಗೂ ತಿಳಿಸಿ-ಯಾವುದೇ ಆಸ್ಪತ್ರೆಯ ಆಡ್ಮಿನ್‌ ಸಾಬರಿದ್ದರೆ ಯಾರೂ ಹೋಗಬೇಡಿ ,ಖಂಡಿತ ಸಾಯ್ತೀರಿ ಇಲ್ಲ ಬಾಡಿ ಪಾರ್ಟ್ಸ್ ಎಲ್ಲಾ ತೊಗೊಂಡು ,ಹೆಣಾನೂ ಮಾಯ ಮಾಡಿಬಿಡ್ತಾರೆ ಹುಷಾರು ಎಂದರು. ಈ ಮೆಸೇಜನ್ನು ದಯವಿಟ್ಟು ಸಾಧ್ಯವಾದಷ್ಟೂ forward ಮಾಡಿ ,ಮಲಗಿರುವ  ನಮ್ಮವರನ್ನು ಎಚ್ಚರಿಸಿ ಪ್ಲೀಸ್' ಎನ್ನು ಪೋಸ್ಟ್‌ ಹರಿದಾಡುತ್ತಿತ್ತು.

Tap to resize

Latest Videos

ಕಿದ್ವಾಯಿ ಸರ್ಕಾರಿ ಆಸ್ಪತ್ರೆಯಲ್ಲಿ ಥಲಸ್ಸೇಮಿಯ ಬಾಲಕನಿಗೆ ಮೊದಲ ಬಾರಿ ಅಸ್ಥಿಮಜ್ಜೆ ಚಿಕಿತ್ಸೆ ಯಶಸ್ವಿ: ಸಚಿವರ ಮೆಚ್ಚುಗೆ

click me!