ಬೆಂಗಳೂರು: ಉದ್ಘಾಟನೆಗೂ ಮೊದಲೇ ವಾಲಿಕೊಂಡ ಕೂಡ್ಲುನಲ್ಲಿರುವ ವಸತಿ ಕಟ್ಟಡ, 18 ಮಹಡಿ ಅಪಾರ್ಟ್‌ಮೆಂಟ್ ಕೆಡವಲು ನಿರ್ಧಾರ

Gowthami K   | Kannada Prabha
Published : Jul 24, 2026, 09:47 AM IST
Bengaluru Apartment Demolition

ಸಾರಾಂಶ

ಬೆಂಗಳೂರಿನ ಹೊಸೂರು ರಸ್ತೆಯ ಕೂಡ್ಲು ಬಳಿ ನಿರ್ಮಿಸಲಾದ 18 ಮಹಡಿಗಳ 'ಎಸ್‌ಎನ್‌ಎನ್‌ ರಾಜ್ ಇಟರ್ನಿಯ' ಅಪಾರ್ಟ್‌ಮೆಂಟ್‌ನ ಒಂದು ವಿಂಗ್ ವಾಲಿಕೊಂಡಿದೆ. ಮಣ್ಣಿನ ಪರೀಕ್ಷೆಯ ವರದಿಯಲ್ಲಾದ ಲೋಪವೇ ಇದಕ್ಕೆ ಕಾರಣವೆಂದು ಹೇಳಿರುವ ಡೆವಲಪರ್‌ಗಳು, ಕಟ್ಟಡವನ್ನು ಕೆಡವಿ ತಮ್ಮ ಸ್ವಂತ ಖರ್ಚಿನಲ್ಲಿ ಮರುನಿರ್ಮಿಸಲು ನಿರ್ಧರಿಸಿದ್ದಾರೆ.

ಬೆಂಗಳೂರು: ಹೊಸೂರು ರಸ್ತೆಯ ಕೂಡ್ಲು ಪ್ರದೇಶದಲ್ಲಿ ನಿರ್ಮಿಸಿರುವ ಹೊಚ್ಚ ಹೊಸ 18 ಮಹಡಿಗಳ ಅಪಾರ್ಟ್‌ಮೆಂಟ್ ಕಟ್ಟಡ ವಾಲಿಕೊಂಡಿದೆ. ವಿಶೇಷವೆಂದರೆ ಜಿಬಿಎನಿಂದ ಈ ಅಪಾರ್ಟ್‌ಮೆಂಟ್‌ಗೆ ಇದೇ ಏಪ್ರಿಲ್ ತಿಂಗಳಲ್ಲಿ ವಾಸಯೋಗ್ಯತೆಯ ಪ್ರಮಾಣಪತ್ರವೂ (ಒಸಿ) ದೊರಕಿತ್ತು.

ಗುರುವಾರ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿದ ಎಸ್‌ಎನ್‌ಎನ್‌ ರಾಜ್‌ ಡೆವಲಪರ್ ಸಂಸ್ಥೆಯ ಪ್ರತಿನಿಧಿಗಳು, ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೇಳಿದ್ದಾರೆ. ಕಟ್ಟಡ ನಿರ್ಮಾಣ ಪೂರ್ವದಲ್ಲಿ ನೆಲ, ಮಣ್ಣಿನ ಕುರಿತಾದ ಜಿಯೋಟೆಕ್ನಿಕಲ್ ಇನ್ವೆಸ್ಟಿಗೇಷನ್ ವರದಿಯಲ್ಲಿ ಲೋಪಗಳು ಉಂಟಾಗಿರುವುದೇ ಕಟ್ಟಡ ವಾಲಿಕೊಳ್ಳಲು ಕಾರಣವಾಗಿದೆ ಎಂದು ಸಭೆಯಲ್ಲಿ ಡೆವಲಪರ್ ಸಂಸ್ಥೆ ತಿಳಿಸಿದೆ ಎಂದು ತಿಳಿದು ಬಂದಿದೆ.

‘ಎಸ್‌ಎನ್‌ಎನ್‌ ರಾಜ್ ಇಟರ್ನಿಯ’ ಹೆಸರಿನ ಪ್ರಾಜಕ್ಟ್‌ನಲ್ಲಿನ ‘ವಿಂಗ್ ಇ3’ ಅನ್ನು ಕೆಡವಿ ಬುನಾದಿ ಸಮೇತ ಮರು ನಿರ್ಮಾಣಕ್ಕೆ ಜಿಬಿಎನಿಂದ ಅನುಮತಿ ಕೋರಲಾಗಿದೆ. ಯೋಜನೆಯಡಿ ಒಟ್ಟು 143 ಫ್ಲ್ಯಾಟ್‌ಗಳನ್ನು ನಿರ್ಮಿಸಲು ಜಿಬಿಎದಿಂದ ಅನುಮತಿ ಪಡೆಯಲಾಗಿತ್ತು. ಬೇಸ್ಮೆಂಟ್, ಗ್ರೌಂಡ್ ಮತ್ತು 18 ಅಪ್ಪರ್ ಫ್ಲೋರ್‌ಗಳಿರುವ ಮೂರು ಬ್ಲಾಕ್‌ಗಳನ್ನು ನಿರ್ಮಿಸಲಾಗಿದೆ. ಕಟ್ಟಡ ಪೂರ್ಣಗೊಂಡ ಬಳಿಕ 2062ರ ಏಪ್ರಿಲ್ 30ರಂದು ಜಿಬಿಎನಿಂದ ಒಸಿ ನೀಡಲಾಗಿತ್ತು.

ಪರಿಶೀಲನೆ ವೇಳೆ ಸಮಸ್ಯೆ ಬೆಳಕಿಗೆ:

ಖರೀದಿದಾರರಿಗೆ ಫ್ಲ್ಯಾಟ್‌ಗಳನ್ನು ಹಸ್ತಾಂತರಿಸುವ ಪೂರ್ವದಲ್ಲಿ ಸಂಸ್ಥೆಯ ಎಂಜಿನಿಯರಿಂಗ್ ತಂಡ ಪರಿಶೀಲನೆ ನಡೆಸುವಾಗ ವಿಂಗ್ 3ರ ಬುನಾದಿಯಲ್ಲಿ ಸಮಸ್ಯೆಗಳು ಇರುವುದು ಪತ್ತೆಯಾಗಿದೆ. ಕೂಡಲೇ ಡೆವಲಪರ್‌ಗಳು ತುರ್ತು ತಾಂತ್ರಿಕ ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ.

ದೋಷ ಪತ್ತೆ: 

ತಾಂತ್ರಿಕ ತಂಡದಿಂದ ಕಟ್ಟಡ ಪರಿಶೀಲನೆ ಸಂದರ್ಭದಲ್ಲಿ ಕಟ್ಟಡವೂ ಹೆಚ್ಚಿನ ಪ್ರಮಾಣದಲ್ಲಿ ನೆಲದಡಿಗೆ ಇಳಿದಿರುವುದು ಗೊತ್ತಾಗಿದೆ. ಅಲ್ಲದೇ, ಕಟ್ಟಡ ನಿರ್ಮಾಣ ಪೂರ್ವದಲ್ಲಿನ ಮಣ್ಣಿನ ವರದಿಯಲ್ಲಿ ತಿಳಿಸಿರುವ ಅಂಶಗಳಿಗೂ, ಕಟ್ಟಡ ವಾಲಿದ ಬಳಿಕ ನಡೆಸಿರುವ ಮಣ್ಣಿನ ಪರೀಕ್ಷೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ, ವಿಂಗ್‌ ಇ3 ವಾಸಕ್ಕೆ ಸುರಕ್ಷಿತವಲ್ಲ ಎಂಬುವ ನಿರ್ಣಯಕ್ಕೆ ಬಂದು ಅಪಾರ್ಟ್‌ಮೆಂಟ್ ಕೆಡವಲು ತೀರ್ಮಾನಿಸಲಾಗಿದೆ ಎಂದು ಮುಖ್ಯ ಆಯುಕ್ತರೊಂದಿಗಿನ ಸಭೆಯಲ್ಲಿ ಎಸ್‌ಎನ್‌ಎನ್‌ನ ಪ್ರತಿನಿಧಿಗಳು ತಿಳಿಸಿದ್ದಾರೆಂದು ಗೊತ್ತಾಗಿದೆ.

ಮರು ನಿರ್ಮಾಣ ಮಾಡಿ ಕೊಡುತ್ತೇವೆ ಎಂದ ಡೆವಲಪರ್:

ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಅಪಾರ್ಟ್‌ಮೆಂಟ್ ಅನ್ನು ನಮ್ಮ ವೆಚ್ಚದಲ್ಲೇ ಹೊಸದಾಗಿ ನಿರ್ಮಿಸಿ ಖರೀದಿಗಾರರಿಗೆ ನೀಡುತ್ತೇವೆ. ಈ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡುತ್ತೇವೆ ಎಂದು ಎಸ್‌ಎನ್‌ಎನ್‌ ಬಿಲ್ಡರ್ಸ್ ಹೇಳಿದೆ.

ಗ್ರಾಹಕರಿಗೆ ಹಸ್ತಾಂತರಿಸಲು, 20 ತಿಂಗಳು ಬೇಕಾಗಬಹುದು 

ಕಟ್ಟಡವನ್ನು ಕೆಡವಿ ಹೊಸದಾಗಿ ನಿರ್ಮಿಸಿ ಗ್ರಾಹಕರಿಗೆ ಹಸ್ತಾಂತರಿಸಲು ಸುಮಾರು 18ರಿಂದ 20 ತಿಂಗಳು ಬೇಕಾಗಬಹುದು ಎಂದು ಡೆವಲಪರ್ ಲೆಕ್ಕಾಚಾರ ಹಾಕಿದ್ದಾರೆಂದು ತಿಳಿದು ಬಂದಿದೆ.

ಮುಂದಿನ ವಾರ ಡೆಮಾಲಿಷನ್?

ವಾಲಿಕೊಂಡಿರುವ ಕಟ್ಟಡವನ್ನು ಕೆಡವಲು ಜಿಬಿಎ ಶೀಘ್ರದಲ್ಲೇ ಅಧಿಕೃತ ಡೆಮಾಲಿಷನ್ ಆದೇಶ ಹೊರಡಿಸಲಿದೆ. ಹೀಗಾಗಿ, ಮುಂದಿನ ವಾರದಲ್ಲಿ 18 ಮಹಡಿಗಳ ಅಪಾರ್ಟ್‌ಮೆಂಟ್ ಡೆಮಾಲಿಷನ್ ಕಾರ್ಯಾರಂಭವಾಗಲಿದೆ ಎಂದು ತಿಳಿದು ಬಂದಿದೆ.

PREV
Read more Articles on
click me!

Recommended Stories

ಮನೆ ಖರ್ಚಿಗೆ 5000 ಕೇಳಿದ ವೃದ್ಧ ಪತ್ನಿಗೆ ಹೊಡೆದ ಪತಿಗೆ ಹೈಕೋರ್ಟ್ ಶಾಕ್, ಇನ್ಮುಂದೆ ತಿಂಗಳಿಗೆ 10,000 ನೀಡುವಂತೆ ಆದೇಶ!
ಇಬ್ಬರು ಹೆಣ್ಣುಮಕ್ಕಳಿಗೆ ಭಾರವಾಗಬಾರದೆಂದು ಜೀವ ತ್ಯಾಗ ಮಾಡಿದ ವೃದ್ಧ ದಂಪತಿ!