
ಬೆಂಗಳೂರು: ರಾಜ್ಯದಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಲಕ್ಷಾಂತರ ನಿವಾಸಿಗಳ ಸಮಸ್ಯೆಗಳು, ಹಕ್ಕುಗಳು ಹಾಗೂ ಆಡಳಿತ ವ್ಯವಸ್ಥೆ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಇಂದು ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಈ ಸಭೆಯನ್ನು ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಸಂಯುಕ್ತವಾಗಿ ಆಯೋಜಿಸಿತ್ತು.
ಸಭೆಯಲ್ಲಿ ನಗರದ ವಿವಿಧ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು, ಅಪಾರ್ಟ್‌ಮೆಂಟ್ ಮಾಲೀಕರ ಸಂಘಟನೆಗಳ ಪ್ರತಿನಿಧಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಐದು ನಗರ ಪಾಲಿಕೆ ಆಯುಕ್ತರು, ಶಾಸಕ ರಿಜ್ವಾನ್ ಅರ್ಷಾದ್, ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಪ್ರತಿದಿನ ಬೆಂಗಳೂರಿನಲ್ಲಿ ಸುಮಾರು ಒಂದು ಕೋಟಿ 30 ಲಕ್ಷ ವಾಹನಗಳು ಓಡಾಡುತ್ತಿವೆ. ಇದರಲ್ಲಿ ಶೇಕಡಾ 90 ರಷ್ಟು ವಾಹನಗಳು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರದ್ದೇ ಎಂದು ಹೇಳಿದರು.
ದೇಶದ ವಿವಿಧ ಭಾಗಗಳಿಂದ ಜನರು ಉದ್ಯೋಗ, ಶಿಕ್ಷಣ ಹಾಗೂ ಜೀವನಮಟ್ಟದ ಕಾರಣದಿಂದ ಬೆಂಗಳೂರಿಗೆ ಬಂದು ನೆಲೆಸುತ್ತಿದ್ದಾರೆ. ಬೆಂಗಳೂರು ಉತ್ತಮ ಹವಾಮಾನ, ಉತ್ತಮ ಸಂಸ್ಕೃತಿ ಇರುವ ನಗರ. ಸುಮಾರು 2000 ಎನ್‌ಆರ್‌ಐಗಳು ಇಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 13 ಸಾವಿರ ಐಟಿ ಉದ್ಯಮಿಗಳು ಇದ್ದರೆ, ಬೆಂಗಳೂರಿನಲ್ಲಿ ಸುಮಾರು 25 ಸಾವಿರ ಐಟಿ ಉದ್ಯಮಿಗಳು ಇದ್ದಾರೆ. ಅವರಲ್ಲಿ ಹೆಚ್ಚಿನವರು ನಿಮ್ಮ ಅಪಾರ್ಟ್‌ಮೆಂಟ್‌ಗಳಲ್ಲೇ ವಾಸಿಸುತ್ತಿದ್ದಾರೆ ಎಂದು ಡಿಕೆಶಿ ತಿಳಿಸಿದರು.
ಬೆಂಗಳೂರು ಯೋಜಿತ ನಗರವಲ್ಲ. ಕೆಂಪೇಗೌಡರು ಬೆಂಗಳೂರು ಕಟ್ಟಿದರು, ಕೆಂಗಲ್ ಹನುಮಂತಯ್ಯ ವಿಧಾನಸೌಧ ನಿರ್ಮಿಸಿದರು, ಎಸ್.ಎಂ. ಕೃಷ್ಣ ಅವರು ನಗರದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದರು ಎಂದು ಡಿಕೆಶಿ ಸ್ಮರಿಸಿದರು. ನಗರದ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊರವಲಯದಲ್ಲಿ ಮೂರು ಹೊಸ ನಗರಗಳನ್ನು ಅಭಿವೃದ್ಧಿಪಡಿಸುವ ಆಶಯ ಸರ್ಕಾರಕ್ಕಿದೆ ಎಂದು ಹೇಳಿದರು. ಪೆನ್ಷನರ್ ಪ್ಯಾರಡೈಸ್‌ನಂತೆ ಅನೇಕ ಜನರು ಬೆಂಗಳೂರಿಗೆ ಬಂದು ಸೆಟಲ್ ಆಗುತ್ತಿದ್ದಾರೆ. ಅವರೆಲ್ಲಾ ಹೆಚ್ಚಾಗಿ ಅಪಾರ್ಟ್‌ಮೆಂಟ್‌ಗಳಲ್ಲೇ ವಾಸಿಸುತ್ತಿದ್ದಾರೆ. ಅದಕ್ಕಾಗಿಯೇ ನಿಮ್ಮನ್ನೆಲ್ಲ ಕರೆಸಿದ್ದೇನೆ ಎಂದು ಹೇಳಿದರು.
ಇತಿಹಾಸದಲ್ಲಿ ನನ್ನ ಹೆಸರು ಉಳಿಯಬೇಕು ಅನ್ನೋ ಆಸೆ ಇದೆ ಎಂದು ಹೇಳಿದ ಡಿಕೆಶಿ, 131 ಕಿಮೀ ಪೆರಿಫೆರಲ್ ರಿಂಗ್ ರೋಡ್ ಹಾಗೂ ಟನಲ್ ರಸ್ತೆ ಯೋಜನೆಗಳಿಗೆ ಸರ್ಕಾರ ಮುಂದಾಗಿದೆ. ಪೆರಿಫೆರಲ್ ರಿಂಗ್ ರೋಡ್ ಹಿಂದೆ ಮಾಡಬೇಕಿತ್ತು. ಈಗ ಯೋಜನಾ ವೆಚ್ಚ ಹೆಚ್ಚಾಗಿದೆ. 26 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ, HUDCO ಸಾಲದ ಮೂಲಕ ಯೋಜನೆ ಜಾರಿಯಲ್ಲಿದೆ ಎಂದು ಹೇಳಿದರು.
ಟನಲ್ ರಸ್ತೆ ಕುರಿತು ಕೆಲವರು ಟೀಕೆ ಮಾಡುತ್ತಿದ್ದಾರೆ. ಮಾತನಾಡಲಿ, ನಾನು ಅಭಿವೃದ್ಧಿ ಕೆಲಸ ಮಾಡುತ್ತೇನೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಖಡಕ್ ಆಗೊಯೇ ಹೇಳಿದರು. ಈ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ “ಇದು ಬೆಂಗಳೂರಿಗೆ ಅಗತ್ಯವಾದ ಯೋಜನೆ” ಎಂದು ಬೆಂಬಲ ನೀಡಿರುವುದನ್ನು ಉಲ್ಲೇಖಿಸಿದರು.
43 ಕಿಮೀ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ ಮಾಡುತ್ತಿದ್ದೇವೆ. ಇದು ಇಡೀ ಭಾರತದಲ್ಲೇ ಮೊದಲ ಪ್ರಯತ್ನ ಎಂದು ತಿಳಿಸಿದರು. ಇದರ ಜೊತೆಗೆ 117 ಕಿಲೋಮೀಟರ್ ಹೊಸ ಫ್ಲೈಓವರ್‌ಗಳು ನಿರ್ಮಾಣವಾಗುತ್ತಿದ್ದು, ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶ ಎಂದು ಹೇಳಿದರು.
ಎರಡು ವರ್ಷಗಳ ಹಿಂದೆ ಬರಗಾಲದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ 6000 ಬೋರ್‌ವೆಲ್‌ಗಳು ಸಂಪೂರ್ಣ ಬರಿದಾಗಿದ್ದವು. ಅದಕ್ಕಾಗಿ ಕಾವೇರಿ ನೀರಿಗೆ ಒತ್ತು ನೀಡಿ ಕೆಲಸ ಮಾಡಿದೆವು. ಬೆಂಗಳೂರಿಗಾಗಿ ಶ್ರಮಿಸಿದ್ದೇವೆ. ಹಾಗಿದ್ರು ಕಳೆದ ಎಲೆಕ್ಷನ್ ನಲ್ಲಿ ಪ್ರತಿ ಕ್ಷೇತ್ರದಲ್ಲಿಯೂ ನಮಗೆ ಒಂದು ಲಕ್ಷ ವೋಟ್ ಕಡಿಮೆ ಬಂತು. ನನ್ನ ತಮ್ಮನನ್ನು ಸೋಲಿಸಿದ್ರಿ. ಅವಾಗ ಅನಿಸುತ್ತೆ ಯಾಕೆ ಸಹಾಯ ಮಾಡಬೇಕು. ನಿಮ್ಗೆ ಕರುಣನೇ ಇಲ್ದೆ ಹೋದಾ ಮೇಲೆ ನಮಗೆ ಇನ್ನೇನು ಬೇಕು ಅನಿಸುತ್ತೆ ಎಂದು ಕಿಡಿಯಾದ್ರು.
ಬಿಲ್ಡರ್ ಅಥವಾ ಪ್ರವರ್ತಕರಿಂದ ಅಪಾರ್ಟ್‌ಮೆಂಟ್ ಮಾಲೀಕರಿಗೆ ಆಸ್ತಿ ಹಕ್ಕುಗಳ ಸರಿಯಾದ ವರ್ಗಾವಣೆ (Conveyance), ಅವಿಭಜಿತ ಪಾಲು (UDS), ಹಾಗೂ ಆಸ್ತಿಯ ಉತ್ತರಾಧಿಕಾರ ಕುರಿತು ಸ್ಪಷ್ಟ ನಿಯಮಾವಳಿ ಇರಬೇಕು ಎಂಬ ಬೇಡಿಕೆ ಇಡಲಾಯಿತು.
ಅಪಾರ್ಟ್‌ಮೆಂಟ್ ಮಾಲೀಕರ ಸಂಘಗಳ ರಚನೆ, ನೋಂದಣಿ, ಉಪ-ಕಾನೂನುಗಳ ಜಾರಿ, ಸಾಮಾನ್ಯ ಪ್ರದೇಶಗಳ ನಿರ್ವಹಣೆ ಹಾಗೂ ನಿಧಿಗಳ ಸಮರ್ಪಕ ಬಳಕೆಗೆ ಕಾನೂನು ಬಲ ನೀಡಬೇಕು ಎಂದು ಆಗ್ರಹಿಸಲಾಯಿತು.
ಅಪಾರ್ಟ್‌ಮೆಂಟ್‌ಗಳಿಗೆ ಸಂಬಂಧಿಸಿದ ವಿವಾದಗಳನ್ನು ಶೀಘ್ರ ಹಾಗೂ ಪಾರದರ್ಶಕವಾಗಿ ಬಗೆಹರಿಸಲು ಸ್ಪಷ್ಟ ಯಾಂತ್ರಿಕ ವ್ಯವಸ್ಥೆ ಹಾಗೂ ಸಮರ್ಥ ಪ್ರಾಧಿಕಾರವನ್ನು ನಿರ್ಧರಿಸಬೇಕು.
ಹಳೆಯ ಅಪಾರ್ಟ್‌ಮೆಂಟ್‌ಗಳು ಮತ್ತು ಕಟ್ಟಡಗಳ ಪುನರಾಭಿವೃದ್ಧಿ, ವಿಲೀನ ಸೇರಿದಂತೆ ಆಧುನಿಕ ವಸತಿ ಅಗತ್ಯಗಳಿಗೆ ಅವಕಾಶ ಕಲ್ಪಿಸುವಂತೆ ಕಾಯ್ದೆಯಲ್ಲಿ provisions ಇರಬೇಕು.
ಬಹು ಕಾಯ್ದೆಗಳ ಬದಲಾಗಿ, ಒಂದೇ ಸಮಗ್ರ ಕಾಯ್ದೆಯ ಮೂಲಕ ಅಪಾರ್ಟ್‌ಮೆಂಟ್ ಆಡಳಿತ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.