ಮುಂಗಾರು ಮಳೆಗೂ ಮುನ್ನವೇ ಬೆಂಗಳೂರಿನ 75 ಕೆರೆಗಳು ಭರ್ತಿ, ಇನ್ನೂ 2 ದಿನ 'ಯೆಲ್ಲೊ ಅಲರ್ಟ್'

Published : May 20, 2025, 10:24 PM IST
ಮುಂಗಾರು ಮಳೆಗೂ ಮುನ್ನವೇ ಬೆಂಗಳೂರಿನ 75 ಕೆರೆಗಳು ಭರ್ತಿ, ಇನ್ನೂ 2 ದಿನ 'ಯೆಲ್ಲೊ ಅಲರ್ಟ್'

ಸಾರಾಂಶ

ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ 75 ಕೆರೆಗಳು ತುಂಬಿವೆ ಹಾಗೂ ಹವಾಮಾನ ಇಲಾಖೆ 'ಯೆಲ್ಲೊ ಅಲರ್ಟ್' ಘೋಷಿಸಿದೆ. ಮರಗಳು ಧರೆಗುರುಳಿ, ಜಲಾವೃತ ಸಮಸ್ಯೆ ಎದುರಾಗಿದೆ. ಬಿಬಿಎಂಪಿ ಅಧಿಕಾರಿಗಳು ಪರಿಸ್ಥಿತಿ ನಿರ್ವಹಣೆಗೆ ಕ್ರಮ ಕೈಗೊಂಡಿದ್ದು, ಸಹಾಯವಾಣಿ 1533ಕ್ಕೆ ಕರೆ ಮಾಡಲು ಸೂಚಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿದ್ದು, ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ.

ಬೆಂಗಳೂರು (ಮೇ 20): ನಗರದಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಮೇ 20 ರಿಂದ ಮೇ 22 ರವರೆಗೆ ಮೂರು ದಿನಗಳು ಭಾರೀ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ. ಮುಂಗಾರು ಮಳೆಯ ಮುಂಚೆಯೇ ಬೆಂಗಳೂರಿನ 75 ಕೆರೆಗಳು ಭರ್ತಿಯಾಗಿವೆ.

ನಗರದಲ್ಲಿ 75 ಕೆರಗೆಳು ಭರ್ತಿ: ಬಿಬಿಎಂಪಿ ವ್ಯಾಪ್ತಿಗೆ 183 ಕೆರೆಗಳು ಬರಲಿದ್ದು, ಈ ಪೈಕಿ ನಿರಂತವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಸುಮಾರು 75 ಕೆರೆಗಳು ಭರ್ತಿಯಾಗಿದ್ದು, ತುಂಬಿರುವ ಎಲ್ಲಾ ಕೆರೆಗಳ ತೂಬುಗಳ ಬಳಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಜೊತೆಗೆ ಕಾಲುವೆಗಳಲ್ಲಿ ತುಂಬಿರುವ ಕಸ-ಕಡ್ಡಿ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರೆ ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಗುತ್ತಿದೆ. ನಗರದಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ 25 ಮರಗಳು, 44 ಮರದ ರೆಂಬೆ/ಕೊಂಬೆಗಳು ಧರೆಗುರುಳಿರುವ ದೂರುಗಳು ದಾಖಲಾಗಿದ್ದು, ಈವರೆಗೆ 10 ಮರಗಳು ಹಾಗೂ 25 ಮರದ ರೆಂಬೆ/ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಉಳಿದ ಮರ, ಮರದ ರೆಂಬೆ/ಕೊಂಬೆಗಳ ತೆರವು ಕಾರ್ಯಾಚರಣೆಯಲ್ಲಿ ಮರ ತೆರವುಗೊಳಿಸುವ ತಂಡ ಕಾರ್ಯನಿರತವಾಗಿದೆ. 

ವರ್ಚ್ಯುವಲ್ ಸಭೆ ಮೂಲಕ ಅಧಿಕಾರಿಗಳಿಗೆ ಸೂಚನೆ:ಬೆಂಗಳೂರು ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಇಂದು ವರ್ಚ್ಯುವಲ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಿದರು.  ಬಿಬಿಎಂಪಿ ಎಲ್ಲಾ ವಲಯಗಳಲ್ಲಿ ನಾಗರಿಕರಿಂದ ನಿಯಂತ್ರಣ ಕೊಠಡಿಗಳಿಗೆ ಬಂದಂತಹ ದೂರುಗಳಿಗೆ ಕೂಡಲೇ ಸ್ಪಂದಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸಬೇಕು. ನಾಗರಿಕರಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಕಾರ್ಯಪ್ರವೃತ್ತವಾಗಿ ಕಾರ್ಯನಿರ್ವಹಿಸಲು ಸೂಚಿಸಿದರು. 

ಪಾಲಿಕೆಯ ಎಲ್ಲಾ 8 ವಲಯಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸದಾ ಸನ್ನದ್ಧರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರೆಲ್ಲರೂ ಎಚ್ಚರಿಕೆಯಿಂದಿದ್ದು, ಏನಾದರೂ ಸಮಸ್ಯೆಯಿದ್ದಲ್ಲಿ ಬಿಬಿಎಂಪಿ ಸಹಾಯವಾಣಿ ಸಂಖ್ಯೆ- 1533 ಗೆ ಕರೆ ಮಾಡಿ ದೂರು ನೀಡಲು ಕೋರಿದೆ. 

ಮಹದೇವಪುರ ವಲಯ: ಮಹದೇವಪುರ ವಲಯದ ಸಾಯಿ ಲೇಔಟ್ ಗೆ ವಲಯ ಆಯುಕ್ತರಾದ ರಮೇಶ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೀರಿನ ಪ್ರಮಾಣ ಶೇ. 80 ರಷ್ಟು ಕಡಿಮೆಯಾಗಿದ್ದು, ಇಂದು ಮಳೆ ಬರದಿದ್ದರೆ ಸಂಪೂರ್ಣವಾಗಿ ನೀರು ಹೊರಹೋಗಲಿದೆ.  ಚರಂಡಿಗಳ ಸ್ಲ್ಯಾಬ್ ತೆಗೆದು ಜೆ.ಸಿ.ಬಿ ಹಾಗೂ ಸಿಬ್ಬಂದಿಗಳ ಮೂಲಕ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ. ಪಾಲಿಕೆ ಅಧಿಕಾರಿಗಳು ಖುದ್ದು ಸ್ಥಳದಲ್ಲಿದ್ದು, ಸಮಸ್ಯೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.  ಸ್ಥಳದಲ್ಲಿ 1 ಜೆ.ಸಿ.ಬಿ, 2 ಟ್ರ್ಯಾಕ್ಟರ್, 2 ಹೆಚ್.ಪಿ ಪಂಪ್ ಸೆಟ್ ಗಳಿದ್ದು, 16 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಣ್ಣ ಅವಧಿಯಲ್ಲಿ ಅಧಿಕ ಮಳೆಯಾದ ಪರಿಣಾಮ ಸಮಸ್ಯೆಯಾಗಿದ್ದು, ಮಳೆ ಕಡಿಮೆಯಾದರೆ ನೀರಿನ ಮಟ್ಟ ಕ್ರಮೇಣ ಕಡಿಮೆಯಾಗಲಿದೆ. ಸ್ಥಳೀಯ ನಿವಾಸಿಗಳಿಗೆ ದಿನದ ಮೂರು ಹೊತ್ತು ತಿಂಡಿ/ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಾಯಿ ಲೇಔಟ್ ಪ್ರದೇಶ ಜಲಾವೃತವಾಗಿರುವ ಪರಿಣಾಮ ಇಂದು ನಿವಾಸಿಗಳಿಗಾಗಿ ಪಾಲಿಕೆಯ ಆರೋಗ್ಯ ವಿಭಾಗದಿಂದ ‘ಆರೋಗ್ಯ ಶಿಬಿರ’ ವನ್ನು ಆಯೋಜಿಸಿದ್ದು, ನಿವಾಸಿಗಳಿಗೆ ಪರೀಕ್ಷೆ ಮಾಡಿ ಔಷಧ ಹಾಗೂ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಯಿತು.

ಬೊಮ್ಮನಹಳ್ಳಿ ವಲಯ: ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಹೆಚ್.ಎಸ್.ಆರ್, ಅನುಗ್ರಹ ಲೇಔಟ್ ನಲ್ಲಿ ಜಲಾವೃತವಾಗಿದ್ದ ಪ್ರದೇಶಗಳಲ್ಲಿ ಪಂಪ್ ಸೆಟ್ ಗಳನ್ನು ಅಳವಡಿಸಿ ನೀರು ತೆರವು ಮಾಡಲಾಗಿದೆ. 

ಪಶ್ಚಿಮ ವಲಯ: ಪಶ್ಚಿಮ ವಲಯದ ವಲಯ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ಇಂದು ಕೆ.ಆರ್ ಮಾರುಕಟ್ಟೆ ಹಾಗು ಬೇಲಿಮಠ ರಸ್ತೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಆರ್ ಮಾರುಕಟ್ಟೆ ಪಾರ್ಕಿಂಗ್ ಸ್ಥಳದಲ್ಲಿ ನೀರು ನಿಂತಿದ್ದು, ಅದನ್ನು ತೆರವುಗೊಳಿಸಲು ಸೂಚಿಸಿದರು. ರಸ್ತೆಗಳಲ್ಲಿ ಜಲಾವೃತವಾಗುವ ಪ್ರದೇಶಗಳ ಮೇಲೆ ಹೆಚ್ಚು ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. 

ದಕ್ಷಿಣ ವಲಯ: ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ರಾಜಕಾಲುವೆ ಹಾಗೂ ಮೆಟ್ರೋ ಕಾಮಗಾರಿಯಿಂದಾಗಿ ನೀರಿನ ಹರಿವು ಸರಿಯಾಗಿ ಹೋಗಲು ಜಾಗ ಇಲ್ಲದ ಕಾರಣ ರಸ್ತೆ ಜಲಾವೃತವಾಗುತ್ತಿದೆ. ಈ ಸಂಬಂಧ ಇಂದು ಬೆಳಿಗ್ಗೆ ಮಾನ್ಯ ಸಾರಿಗೆ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಶ್ರೀ ರಾಮಲಿಂಗಾ ರೆಡ್ಡಿ ರವರು ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜಕಾಲುವೆಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿರುವ ಪರಿಣಾಮ ಸಿಲ್ಕ್ ಬೋರ್ಡ್ ಜಂಕ್ಷನ್ ಜಲಾವೃತವಾಗಿದೆ. ಸದರಿ ಜಂಕ್ಷನ್ ನಲ್ಲಿ ರಾಜಕಾಲುವೆಯ ಪುನರ್ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದ್ದು, ಮೆಟ್ರೋ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಂಡು ಜಲಾವೃತವಾಗುವುದನ್ನು ತಪ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ಕೆ.ಎ.ಎಸ್ ಆಫಿಸರ್ಸ್ ಲೇಔಟ್ ನಲ್ಲಿ ಕಾಲುವೆಯ ನಿರ್ಮಾಣ ಮಾಡಬೇಕಿದ್ದು, ಸದರಿ ಸ್ಥಳದಲ್ಲಿ ಖಾಸಗಿ ಸ್ಥಳ ಬರಲಿದ್ದು, ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. ಈ ಸಂಬಂಧ ವಿಪತ್ತು ನಿರ್ವಹಣೆ ಅಡಿ ತಾತ್ಕಾಲಿಕವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿ ನಂತದ ಶಾಶ್ವತ ಕಾಲುವೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜರಾಜೇಶ್ವರಿ ನಗರ ವಲಯ: ರಾಜರಾಜೇಶ್ವರಿ ನಗರ ವಲಯದ ಅಂದರಹಳ್ಳಿ ಮುಖ್ಯ ರಸ್ತೆ ಜನನಿ ಶಾಲೆಯ ಬಳಿ ತಡೆಗೋಡೆ ಕುಸಿದ ಪರಿಣಾಮ ರಸ್ತೆ ಬದಿಯಿರುವ ಚರಂಡಿ ದುರಸ್ತಿಯಾಗಿದೆ. ಅಲ್ಲದೆ ವಿದ್ಯುತ್ ಕಂಬ ಕೂಡ ಬಿದ್ದಿದೆ. ಈ ಸಂಬಂಧ ಮಾಲೀಕರಿಗೆ ಶೋಕಾಸ್ ನೋಟೀಸ್ ನೀಡಲು ಅಧಿಕಾರಿಗಳಿಗೆ ಸೂಚನೆ ನಿಡಲಾಗಿದೆ. ಇನ್ನು ಜವರೇಗೌಡನದೊಡ್ಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೈಡ್ ಡ್ರೈನ್ ಗಳು ಬ್ಲಾಕ್ ಆಗಿರುವ ಪರಿಣಾಮ ನೀರು ನಿಂತು ಜಲಾವೃತವಾಗಿದೆ. ಈ ಸಂಬಂಧ ರಸ್ತೆ ಭಾಗ ಕತ್ತರಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ.  ಜೊತೆಗೆ ಸೈಡ್ ಡ್ರೈನ್ ಗಳ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ವಿದ್ಯಾಮಂದಿರ ಸ್ಕೂಲ್ ಬಳಿ ರಸ್ತೆಯ ಅರ್ಧ ಭಾಗ ಒತ್ತುವರಿ ಮಾಡಿಕೊಂಡು ಗೋಡೆ ನಿರ್ಮಾಣ ಮಾಡಿರುತ್ತಾರೆ. ಈ ಪೈಕಿ ಸ್ಥಳದಲ್ಲೇ ಜೆ.ಸಿ.ಬಿ. ಯನ್ನು ತರಿಸುವ ಮೂಲಕ ಗೋಡೆ ತೆರವು ಮಾಡಲಾಗಿದ್ದು, ವಿಪತ್ತು ನಿರ್ವಹಣೆ ಅಡಿ ಕೂಡಲೇ ಕಚ್ಚಾ ಡ್ರೈನ್ ನಿರ್ಮಾಣ ಮಾಡಿ ನೀರು ಹರಿದು ಹೋಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

PREV
Read more Articles on
click me!

Recommended Stories

Karnataka News Live: ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!