ಬೆಂಗಳೂರು 14 ಕೆಜಿ ಚಿನ್ನ ವಂಚನೆ ಕೇಸ್: ಐಶ್ವರ್ಯಾ ಗೌಡ ವಿರುದ್ಧ ಡಿ.ಕೆ. ಸುರೇಶ್ ದೂರು

Published : Dec 30, 2024, 04:38 PM ISTUpdated : Dec 30, 2024, 05:00 PM IST
ಬೆಂಗಳೂರು 14 ಕೆಜಿ ಚಿನ್ನ ವಂಚನೆ ಕೇಸ್: ಐಶ್ವರ್ಯಾ ಗೌಡ ವಿರುದ್ಧ ಡಿ.ಕೆ. ಸುರೇಶ್ ದೂರು

ಸಾರಾಂಶ

ಬೆಂಗಳೂರಿನಲ್ಲಿ 14 ಕೆ.ಜಿ. ಬಂಗಾರ ವಂಚನೆ ಪ್ರಕರಣದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಐಶ್ವರ್ಯಾ ಗೌಡ ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

ಬೆಂಗಳೂರು (ಡಿ.30): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿರುವ 14 ಕೆ.ಜಿ. ಬಂಗಾರವನ್ನು ಪಡೆದು ಹಣ ನೀಡದ ವಂಚನೆ ಪ್ರಕರಣದ ಆರೋಪಿ ಐಶ್ವರ್ಯಾ ಗೌಡ ತಮ್ಮ ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಸ್ವತಃ ಮಾಜಿ ಸಂಸದ ಡಿ.ಕೆ. ಸುರೇಶ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ತಮ್ಮ ಹೆಸರು ದುರುಪಯೋಗ ಮಾಡಿಕೊಂಡು ಹಲವಾರು ಜನರಿಗೆ ಚಿನ್ನಾಭರಣ ಹಾಗೂ ಹಣ ವಂಚನೆ ಮಾಡುತ್ತಿರುವ ಐಶ್ವರ್ಯಾ ಗೌಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಪೊಲೀಸ್ ಆಯುಕ್ತರಿಗೆ ಭಾನುವಾರ ಪತ್ರ ಬರೆದಿದ್ದಾರೆ.

ಶ್ರೀಮತಿ ಐಶ್ವರ್ಯಾ ಗೌಡ ಉರುಫ್ ನವ್ಯಶ್ರೀ ಎಂಬುವವರು ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡು ಹಲವಾರು ಜನರಿಗೆ ಚಿನ್ನಾಭರಣ ಹಾಗೂ ಹಣ ವಂಚನೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಿವೆ. ಹೀಗಾಗಿ, ನನ್ನ ಹೆಸರು ಬಳಸಿಕೊಂಡು ವಂಚನೆ ನಡೆಸಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಜನರಿಗೆ ಇಂತಹ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಬೇಕು' ಎಂದು ದೂರು ಪತ್ರದಲ್ಲಿ ಸುರೇಶ್ ಅವರು ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆಯೇನು?
ಐಶ್ವರ್ಯ ಗೌಡ ಎಂಬ ಮಹಿಳೆ ವಾರಾಹಿ ಜ್ಯುವೆಲರಿ ಶಾಪ್ ಮಾಲೀಕರಾದ ವನಿತಾ ಅವರ ಜೊತೆ ಸ್ನೆಹ ಸಂಪಾದನೆ ಮಾಡುತ್ತಾರೆ. ವಿವಿಧ ರಾಜಕೀಯ ಕಾರ್ಯಕ್ರಮಗಳಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳ ಜೊತೆಗೆ ಕಾಣಿಸಿಕೊಳ್ಳುತ್ತಿದ್ದ ಈ ಐಶ್ವರ್ಯಾ ಗೌಡ ತಾನು ಸಂಸದ ಡಿ.ಕೆ. ಸುರೇಶ್ ಅವರ ತಂಗಿ ಎಂದು ಹೇಳಿಕೊಂಡಿದ್ದಾರೆ. ವನಿತಾ ಅವರ ಜ್ಯೂವೆಲ್ಲರಿ ಮಳಿಗೆಗೆ ತೆರಳಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಖರೀದಿ ಮಾಡುತ್ತಾರೆ. ಇದಾದ ನಂತರ, ತನಗೆ ದೊಡ್ಡ ದೊಡ್ಡ ರಾಜಕಾರಣಿಗಳು, ಗುತ್ತಿಗೆದಾರರು, ಉದ್ಯಮಿಗಳು ಹಾಗೂ ಶ್ರೀಮಂತರು ಪರಿಚಯವಿದ್ದು, ನಿಮ್ಮ ಚಿನ್ನದ ಅಂಗಡಿಯ ಬ್ಯೂಸಿನೆಸ್ ಹೆಚ್ಚಳ ಮಾಡುವುದಾಗಿ ಭರವಸೆ ನೀಡುತ್ತಾಳೆ. ಹೀಗೆ ಬರೋಬ್ಬರಿ 14 ಕೆಜಿ ಚಿನ್ನಾಭರಣಗಳನ್ನು ಪಡೆದು ಹಣ ಕೊಡದೇ ವಂಚನೆ ಮಾಡಿದ್ದಾರೆ. ಇದೀಗ ಚಂದ್ರಾ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಐಶ್ವರ್ಯಾ ಗೌಡ ಅವರನ್ನು ಪೊಲೀಸರು ಕರೆದು ವಿಚಾರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಡಿ.ಕೆ. ಸುರೇಶ್ ತಂಗಿ ಎಂದೇಳಿ 14 ಕೆಜಿ ಬಂಗಾರಕ್ಕೆ ಪಂಗನಾಮ ಹಾಕಿದ ಐಶ್ವರ್ಯಾ ಗೌಡ; ನಟ ಧರ್ಮೇಂದ್ರನೂ ಸಾಥ್!

ಡಿ.ಕೆ. ಸುರೇಶ್ ಧ್ವನಿಯಲ್ಲಿ ಮಾತನಾಡಿದ ನಟ ಧರ್ಮ:
ಇನ್ನು ಐಶ್ವರ್ಯಾ ಗೌಡ ತಾನು ಬಂಗಾರ ಹಾಗೂ ಚಿನ್ನಾಭರಣಗಳನ್ನು ಪಡದು ಹಣ ಕೊಡದೇ ವಂಚನೆ ಮಾಡುತ್ತಿದ್ದ ವೇಳೆ ಜ್ಯೂವೆಲ್ಲರಿ ಮಾಲೀಕರು ಪ್ರಶ್ನೆ ಮಾಡಿ ಖಡಕ್ ಆಗಿ ಹಣ ಕೇಳಿದರೆ ಕೂಡಲೇ ಡಿ.ಕೆ. ಸುರೇಶ್ ಅವರಿಗೆ ಕರೆ ಮಾಡುವುದಾಗಿ ಫೋನ್ ಕರೆ ಮಾಡುತ್ತಿದ್ದರು. ಆಗ ಡಿ.ಕೆ. ಸುರೇಶ್ ಅವರ  ಧ್ವನಿಯ ಮಾದರಿಯಲ್ಲಿಯೇ ಕಿರುತೆರೆ ಹಾಗೂ ಸಿನಿಮಾ ನಟ ಧರ್ಮೇಂದ್ರ ಮಾತನಾಡುತ್ತಿದ್ದರು. ನಟ ಧರ್ಮೇಂದ್ರ ಹಲವು ರಾಜಕಾರಣಿಗಳ ಧ್ವನಿಯಲ್ಲಿ ಮಾತನಾಡಿ ವಂಚನೆ ಕೇಸುಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪವೂ ಕೇಳಿಬಂದಿತ್ತು. ಇದೀಗ ಐಶ್ವರ್ಯಾ ಗೌಡ ಅವರೊಂದಿಗೆ ನಟ ಧರ್ಮೇಂದ್ರ ಸೇರಿಕೊಂಡು ಬಂಗಾರದ ಹಣ ವಾಪಸ್ ಕೊಡುವ ಬಗ್ಗೆ ಡಿ.ಕೆ. ಸುರೇಶ್ ಅವರಂತೆ ಮಾತನಾಡಿದ್ದಾನೆ. 'ನಿಮಗೆ ನಿಮ್ಮ ಹಣ ವಾಪಸ್ ಬಂದೇ ಬರುತ್ತದೆ. ನಿಮ್ಮ ಹಣಕ್ಕೆ ನಾನು ಗ್ಯಾರಂಟಿ. ಐಶ್ವರ್ಯಾ ನನ್ನ ತಂಗಿ ಇದ್ದ ಹಾಗೆ ಚಿನ್ನ ಕೊಡಿ ಹಣಕ್ಕೆ ನಾನು ಭರವಸೆ ಕೊಡುತ್ತೇನೆ ಎಂದು ಮಾತನಾಡಿರುವ ಆಡಿಯೋ ಕೂಡ ವೈರಲ್ ಆಗುತ್ತಿದೆ. ಇದೀಗ ಡಿ.ಕೆ. ಸುರೇಶ್ ಅವರು ಐಶ್ವರ್ಯಾ ಗೌಡ ವಿರುದ್ಧ ದೂರು ದಾಖಲಿಸಿದ್ದಾರೆ.

 

PREV
Read more Articles on
click me!

Recommended Stories

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!