ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಹತ್ತು ದಿನಗಳ ಕಾಲ ನಡೆಯಲಿದೆ. ವಕ್ಫ್, ಬಾಣಂತಿಯರ ಸಾವು ಮುಂತಾದ ವಿಚಾರಗಳ ಬಗ್ಗೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿವೆ. ಕೊರೋನಾ ಹಗರಣ, ಬಿಜೆಪಿ ಹಗರಣಗಳ ಕುರಿತು ಕಾಂಗ್ರೆಸ್ ಕೂಡ ಪ್ರತಿತಂತ್ರ ರೂಪಿಸಿದೆ.
ಬೆಳಗಾವಿ: ವಿಧಾನಮಂಡಲ ಚಳಿಗಾಲದ 11ನೇ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ಆರಂಭವಾಗಲಿದ್ದು, ಹತ್ತು ದಿನಗಳ ಅಧಿವೇಶನದಲ್ಲಿ ವಕ್ಫ್, ಬಾಣಂತಿಯರ ಸಾವು ಮತ್ತಿತರ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ.
ಮತ್ತೊಂದೆಡೆ ಕೊರೋನಾ ಹಗರಣ ಕುರಿತ ಕುನ್ಹಾ ವರದಿ, ಬಿಜೆಪಿ ಹಗರಣಗಳು, ಬಿಎಸ್‌ವೈ ಲೈಂಗಿಕ ದೌರ್ಜನ್ಯದಂಥ ಪ್ರಕರಣ ಪ್ರಸ್ತಾಪಿಸಿ ತಿರುಗಿಬೀಳಲು ಆಡಳಿತರೂಢ ಕಾಂಗ್ರೆಸ್ ಕೂಡ ಸಿದ್ಧತೆ ನಡೆಸಿದೆ. ಹೀಗಾಗಿ ಸದನ ಕದನ ತೀವ್ರ ಕುತೂಹಲ ಕೆರಳಿಸಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಜಟಾಪಟಿ ನಿರೀಕ್ಷಿಸಲಾಗಿದೆ.
ಕುಂದಾ ನಗರಿಯ ಸುವರ್ಣಸೌಧದಲ್ಲಿ ಬೆಳಗ್ಗೆ 11 ಗಂಟೆಗೆ ಅಧಿವೇಶನ ವಿದ್ಯುಕ್ತವಾಗಿ ಆರಂಭವಾಗಲಿದೆ. ಮೊದಲಿಗೆ ಸಂತಾಪ ಸೂಚನಾ ನಿರ್ಣಯ ಮಂಡನೆ ಮಾಡಲಿದ್ದು, ಕಳೆದ ಅಧಿವೇಶನದಿಂದ ಈಚೆಗೆ ನಿಧನಹೊಂದಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು. ಬಳಿಕ ಪ್ರಶ್ನೋತ್ತರ ಅವಧಿ ಕೈಗೆತ್ತಿಕೊಂಡು ಕಲಾಪ ಮುಂದೂಡಲಾಗುವುದು. ಮಧ್ಯಾಹ್ನ 3ಕ್ಕೆ ಕಲಾಪ ಸಲಹಾ ಸಮಿತಿ ಸಭೆ ನಡೆಸಿ ಮುಂದಿನ ಅಧಿವೇಶನದಲ್ಲಿ ಚರ್ಚೆಯಾಗಬೇಕಿರುವ ವಿಚಾರಗಳ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ತಿಳಿದುಬಂದಿದೆ.
ಇದಕ್ಕೂ ಮೊದಲು ಇತ್ತೀಚಿನ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್, ಸಂಡೂರಿನ ಇ.ಅನ್ನಪೂರ್ಣ ಹಾಗೂ ಶಿಗ್ಗಾಂವಿಯ ಯೂಸುಫ್ ಖಾನ್ ಪಠಾಣ್ ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈವರೆಗೆ ವಿಧಾನಸಭೆ ಸಚಿವಾಲಯಕ್ಕೆ 3004 ಪ್ರಶ್ನೆಗಳು, 205 ಗಮನ ಸೆಳೆಯುವ ಸೂಚನೆಗಳು, 96 ನಿಯಮ 351ರ ಸೂಚನೆ ಸ್ವೀಕೃತಗೊಂಡಿವೆ. ಜತೆಗೆ ಮೂರು ಖಾಸಗಿ ವಿಧೇಯಕಗಳನ್ನೂ ಸ್ವೀಕರಿಸಲಾಗಿದೆ. ಇವೆಲ್ಲವೂ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ.
ತೀವ್ರ ಜಟಾಪಟಿ ನಿರೀಕ್ಷೆ: ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ವಿಶೇಷ ಚರ್ಚೆ ಜತೆಗೆ ಆಡಳಿತ ಹಾಗೂ ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪಗಳಿಗೂ ಅಧಿವೇಶನ ವೇದಿಕೆಯಾಗಲಿದೆ. ಮುಡಾ, ವಕ್ಫ್ ಭೂ ವಿವಾದ, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಮಾನ್ಯತೆಗಿದ್ದ ನಿಯಮ ಸಡಿಲ, ಗುತ್ತಿಗೆಯಲ್ಲೂ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಬೇಕೆಂಬ ಪ್ರಸ್ತಾವನೆ ಸೇರಿ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ನಡೆಸುತ್ತಿದೆ ಎಂದು ಬಿಂಬಿಸುವುದು, ಜತೆಗೆ ಬಾಣಂತಿಯರ ಸರಣಿ ಸಾವು ಉಂಟಾಗಿದ್ದರೂ ಯಾರೊಬ್ಬರೂ ಬಳ್ಳಾರಿಗೆ ಭೇಟಿ ನೀಡಿ ಪರಿಹಾರ ನೀಡದಿರುವುದು ಹಾಗೂ ತಪ್ಪಿತಸ್ಥ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳದ ಬಗ್ಗೆ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಲು ಎನ್‌ಡಿಎ ಕೂಟ ಸಜ್ಜಾಗಿದೆ.
ಮತ್ತೊಂದೆಡೆ ಅಧಿವೇಶನದಲ್ಲಿ ನ್ಯಾ.ಕುನ್ಹಾ ವರದಿ ಪ್ರಸ್ತಾಪಿಸುವ ಮೂಲಕ ಯಡಿಯೂರಪ್ಪ ಹಾಗೂ ಬಿ.ಶ್ರೀರಾಮುಲು ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮಾಡಿರುವ ಶಿಫಾರಸನ್ನು ಎತ್ತಿತೋರಿಸಿ ಪ್ರತಿದಾಳಿ ನಡೆಸಲು ಕಾಂಗ್ರೆಸ್ ಸಜ್ಜಾಗಿದೆ. ಹೀಗಾಗಿ ಆಡಳಿತ-ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪಗಳ ಮೂಲಕ ಚಳಿಗಾಲದ ಅಧಿವೇಶನ ಬಿಸಿಯೇರುವ ಸಾಧ್ಯತೆಯಿದೆ.
15 ವಿಧೇಯಕಗಳ ಮಂಡನೆ
ಮತ್ತೊಂದೆಡೆ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಕುಲಾಧಿಪತಿ ಸ್ಥಾನ ರಾಜ್ಯಪಾಲರಿಂದ ಕಿತ್ತು ಮುಖ್ಯಮಂತ್ರಿಗಳಿಗೆ ನೀಡುವ ವಿಧೇಯಕ, ಗಣಿ ಇಲಾಖೆಯಡಿ ಹೊಸ ತೆರಿಗೆ ಪ್ರಸ್ತಾಪ ಸೇರಿ ಹಲವು ವಿಧೇಯಕ, ತಿದ್ದುಪಡಿ ವಿಧೇಯಕ ಸೇರಿ ಒಟ್ಟು 15 ವಿಧೇಯಕ ಮಂಡನೆಯಾಗಲಿವೆ.
ಈ ಪೈಕಿ ಕರ್ನಾಟಕ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, ಕರ್ನಾಟಕ ಪ್ರವಾಸೋದ್ಯಮ ರೋಪ್ ವೇಗಳ ವಿಧೇಯಕ ಪರ್ಯಾಲೋಚನೆಗೆ ಮಂಡಿಸಲಾಗುವುದು.
ಉಳಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ಆಧ್ಯಾದೇಶ-2024, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ಆಧ್ಯಾದೇಶ-2024 ಸೇರಿ ಎರಡು ಸುಗ್ರೀವಾಜ್ಞೆ ವಿಧೇಯಕಗಳಿಗೆ ಒಪ್ಪಿಗೆ ಪಡೆಯಲಾಗುವುದು.
ಇದನ್ನೂ ಓದಿ: ಯತ್ನಾಳ್ ಮತ್ತೆ ಮತ್ತೆ ಬಚಾವ್ ಆಗುತ್ತಿರುವುದು ಹೇಗೆ?: ಪ್ರಶಾಂತ್ ನಾತು
ಮೂರು ಖಾಸಗಿ ವಿಧೇಯಕ
ದರ್ಶನ್ ಪುಟ್ಟಣ್ಣಯ್ಯ ಅವರು ಕರ್ನಾಟಕ ರಾಜ್ಯದಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಖಾಸಗಿ ವಿಧೇಯಕ ಮಂಡನೆ ಮಾಡಲಿದ್ದಾರೆ. ಎಂ.ವೈ.ಪಾಟೀಲ್ ಅವರಿಂದ ಗಾಣಗಾಪುರ, ದತ್ತಾತ್ರೇಯ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಹಾಗೂ ಎಚ್.ಕೆ.ಸುರೇಶ್ ಅವರಿಂದ ಬೇಲೂರು-ಹಳೇಬೀಡು ವಿಶ್ವಪರಂಪರೆಯ ಪ್ರದೇಶ ನಿರ್ವಹಣೆಯ ಪ್ರಾಧಿಕಾರ ವಿಧೇಯಕ ಮಂಡನೆಯಾಗಲಿದೆ.
ಅಧಿವೇಶನ ಒಂದು ದಿನ ಮೊಟಕು?
ಚಳಿಗಾಲದ ಅಧಿವೇಶನ ಡಿ.9 ರಿಂದ ಡಿ.20 ರವರೆಗೆ ಹತ್ತು ದಿನಗಳ ಕಾಲ ನಡೆಸಲು ನಿಗದಿ ಮಾಡಲಾಗಿದೆ. ಆದರೆ ಮಂಡ್ಯದಲ್ಲಿನ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಿಗದಿತ ಅವಧಿಗಿಂತ ಒಂದು ದಿನ ಮೊದಲು ಅಂದರೆ ಡಿ.19ಕ್ಕೆ ಮೊಟಕುಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಸೋಮವಾರ ಮಧ್ಯಾಹ್ನ 3ಕ್ಕೆ ನಡೆಯಲಿರುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿಯೇ 6 ತಿಂಗಳಲ್ಲಿ 29 ಬಾಣಂತಿಯರು, 1 ವರ್ಷದಲ್ಲಿ 322 ನವಜಾತ ಶಿಶುಗಳ ಸಾವು