Taluk Office Power Cut: ಕರೆಂಟ್ ಬಿಲ್ ಕಟ್ಟದ ತಹಸೀಲ್ದಾರ್ ಕಚೇರಿ; ವಿದ್ಯುತ್ ಕನೆಕ್ಷನ್ ಕಟ್ ಮಾಡಿದ ಹೆಸ್ಕಾಂ!

Published : Jun 16, 2026, 02:49 PM IST
Belagavi Power Cut

ಸಾರಾಂಶ

ಬೆಳಗಾವಿ ತಹಶಿಲ್ದಾರ್ ಕಚೇರಿಯು ಸುಮಾರು 59,000 ರೂಪಾಯಿಗಳ ವಿದ್ಯುತ್ ಬಿಲ್ ಪಾವತಿಸದ ಕಾರಣ, ವಿದ್ಯುತ್ ಸರಬರಾಜು ಕಂಪನಿಯು ಸಂಪರ್ಕವನ್ನು ಕಡಿತಗೊಳಿಸಿದೆ. ಇದರಿಂದಾಗಿ ಕಚೇರಿಯು ಕತ್ತಲಲ್ಲಿ ಮುಳುಗಿದ್ದು,  ಸಾರ್ವಜನಿಕರು, ವಿಶೇಷವಾಗಿ ಹಿರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಬೆಳಗಾವಿ (ಜೂ.16): ಸರ್ಕಾರದ ನಿಯಮಗಳನ್ನು ಜನರಿಗೆ ತಿಳಿಸುವ ಹಾಗೂ ಜನರಿಗೆ ಸರ್ಕಾರಿ ಆದೇಶಗಳನ್ನು ಪಾಲಿಸುವಂತೆ ಸೂಚಿಸುವ ತಹಶಿಲ್ದಾರ್ ಕಚೇರಿಯೇ ಈಗ ನಿಯಮ ಉಲ್ಲಂಘಿಸಿ ಕತ್ತಲಲ್ಲಿ ಕೂರುವಂತಾಗಿದೆ. ಕಳೆದ ಮೂರು ತಿಂಗಳ ವಿದ್ಯುತ್ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಬೆಳಗಾವಿ ತಹಶಿಲ್ದಾರ್ ಕಚೇರಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಏನಿದು ಘಟನೆ?:

ಬೆಳಗಾವಿ ತಹಶಿಲ್ದಾರ್ ಕಚೇರಿಯು ಕಳೆದ ಮೂರು ತಿಂಗಳಿನಿಂದ ಸುಮಾರು 58,936 ರೂಪಾಯಿಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿತ್ತು. ಹಲವಾರು ಬಾರಿ ಸೂಚನೆ ನೀಡಿದರೂ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಯ ಅಧಿಕಾರಿಗಳು ಇಂದು ಬೆಳಿಗ್ಗೆ 10 ಗಂಟೆಗೆ ಕಚೇರಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಪರಿಣಾಮವಾಗಿ ಇಡೀ ಕಚೇರಿ ಕತ್ತಲಲ್ಲಿ ಮುಳುಗಿದೆ.

ವೃದ್ಧರ ಹಾಗೂ ಸಾರ್ವಜನಿಕರ ಆಕ್ರೋಶ:

ಬೆಳಿಗ್ಗೆಯಿಂದಲೇ ವಿದ್ಯುತ್ ಇಲ್ಲದ ಕಾರಣ ಕಚೇರಿಯ ಕಂಪ್ಯೂಟರ್‌ಗಳು ಸ್ಥಗಿತಗೊಂಡಿವೆ. ಇದರಿಂದಾಗಿ ವಿವಿಧ ಕೆಲಸಗಳಿಗಾಗಿ ಬಂದಿದ್ದ ಸಾರ್ವಜನಿಕರು ಪರದಾಡುವಂತಾಗಿದೆ. ಅದರಲ್ಲೂ ವಿಶೇಷವಾಗಿ ವೃದ್ಧಾಪ್ಯ ವೇತನ ಮತ್ತು ಇತರ ಪಿಂಚಣಿ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲು ದೂರದ ಹಳ್ಳಿಗಳಿಂದ ಬಂದಿದ್ದ ಹಿರಿಯ ನಾಗರಿಕರು ವಿದ್ಯುತ್ ಇಲ್ಲದೇ ಕೆಲಸವಾಗದ ಕಾರಣ ಕಚೇರಿಯ ಹೊರಗೆ ಕಾದು ಕುಳಿತು ಸುಸ್ತಾಗಿದ್ದಾರೆ.

'ಪಿಂಚಣಿಗಾಗಿ ಅರ್ಜಿ ಹಾಕಲು ಬೆಳಿಗ್ಗೆಯಿಂದ ಕಾಯುತ್ತಿದ್ದೇವೆ. ಆದರೆ ಕರೆಂಟ್ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ನಮಗೆ ಶಿಕ್ಷೆಯಾಗುತ್ತಿದೆ,' ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ.

ಅಧಿಕಾರಿಗಳ ಬೇಜವಾಬ್ದಾರಿ:

ಸರ್ಕಾರಿ ಕಚೇರಿಯೊಂದರಲ್ಲಿ ಇಷ್ಟು ದೊಡ್ಡ ಮೊತ್ತದ ಬಿಲ್ ಬಾಕಿ ಉಳಿಸಿಕೊಳ್ಳುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಕೂಡಲೇ ಬಾಕಿ ಹಣ ಪಾವತಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇಷ್ಟೆಲ್ಲಾ ಗೊಂದಲಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

PREV
Read more Articles on
click me!

Recommended Stories

ಶಿವಮೊಗ್ಗದಲ್ಲಿ ಮನಕಲುಕುವ ಘಟನೆ: ಹೃದಯಾಘಾತದಿಂದ ಒಂದನೇ ತರಗತಿ ವಿದ್ಯಾರ್ಥಿ ಸಾವು!
Farmers: ಶುಂಠಿ, ಹಸಿಮೆಣಸಿನಕಾಯಿ ಬೆಳೆದ ರೈತರಿಗೆ ದಾಖಲೆ ಸಲ್ಲಿಸಲು ಸರ್ಕಾರದಿಂದ ಸೂಚನೆ