
ಬೆಳಗಾವಿ (ಅ.26): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಗಳ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಲು ನಿಗದಿಯಾಗಿದ್ದ ಮಹತ್ವದ ಸಭೆಯು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ತೀವ್ರ ರಾದ್ಧಾಂತಕ್ಕೆ ಸಾಕ್ಷಿಯಾಗಿದೆ. ಸಿಎಂ ಸಭಾಂಗಣಕ್ಕೆ ಆಗಮಿಸುವ ಮುನ್ನವೇ ರೈತ ಸಂಘಟನೆಗಳ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ಸಭಾಂಗಣವೇ ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟ ಘಟನೆ ನಡೆದಿದೆ.
ಕೋಡಿಹಳ್ಳಿ ಚಂದ್ರಶೇಖರ್ ಬಣ ಹಾಗೂ ಚೂನಪ್ಪ ಪೂಜಾರಿ ಬಣದ ರೈತರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಪರಸ್ಪರ ಮುಗಿಬಿದ್ದು ಹೊಡೆದಾಡಿಕೊಂಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಮೇಜಿನ ಮೇಲಿದ್ದ ಕುಡಿಯುವ ನೀರಿನ ಗಾಜಿನ ಗ್ಲಾಸ್ಗಳನ್ನು ಎಸೆದು ಆಕ್ರೋಶ ಹೊರಹಾಕಲಾಗಿದೆ.
ಸುವರ್ಣಸೌಧದ ಸಭಾಂಗಣದಲ್ಲಿ ಸಭೆ ಆರಂಭಕ್ಕೂ ಮುನ್ನ ರೈತರಿಗೆ ಕನಿಷ್ಠ ಕುಡಿಯಲು ನೀರು ಹಾಗೂ ಚಹಾ ವ್ಯವಸ್ಥೆ ಮಾಡಿಲ್ಲ ಎಂದು ಕೆಲ ರೈತರು ಆಕ್ರೋಶ ಹೊರಹಾಕಿದರು. ಈ ವೇಳೆ ರೈತ ಮುಖಂಡ ಚೂನಪ್ಪ ಪೂಜಾರಿ ಎಲ್ಲರನ್ನೂ ಸಮಾಧಾನಪಡಿಸಲು ಮುಂದಾದರು. ಎಲ್ಲರನ್ನೂ ಸಮಾಧಾನಿಸಿ ಭಾಷಣ ಆರಂಭಿಸಿದ ಚೂನಪ್ಪ, 'ಈ ವರ್ಷ ಪ್ರತಿ ಟನ್ ಕಬ್ಬಿಗೆ ₹4,500 ಬೆಲೆ ಪಡೆದೇ ತೀರೋಣ' ಎಂದು ಹೇಳಿದರು.
ಚೂನಪ್ಪ ಅವರ ಈ ಹೇಳಿಕೆಗೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 'ಹೊರಗಡೆ ಮಾಧ್ಯಮಗಳ ಮುಂದೆ ಪ್ರತಿ ಟನ್ಗೆ ₹5,500 ದರ ಬೇಕು ಅಂತೀರಿ, ಒಳಗೆ ಬಂದು ₹4,500 ಸಾಕೇ? ನೀವೇನು ಸೂಟ್ಕೇಸ್ ಗಿರಾಕಿನಾ?' ಎಂದು ಕೋಡಿಹಳ್ಳಿ ಬಣದ ರೈತರೊಬ್ಬರು ನೇರವಾಗಿ ಪ್ರಶ್ನಿಸಿದರು.
'ಸೂಟ್ಕೇಸ್ ಗಿರಾಕಿ' ಎಂಬ ಮಾತು ಕೇಳಿ ಕೆರಳಿದ ಚೂನಪ್ಪ ಪೂಜಾರಿ ಬಣದ ಕಾರ್ಯಕರ್ತರು, ಆ ಮಾತು ಹೇಳಿದ ಕೋಡಿಹಳ್ಳಿ ಬಣದ ರೈತನ ಮೇಲೆ ಮುಗಿಬಿದ್ದರು. ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆ ನಡೆಸಲಾಯಿತು. ರೊಚ್ಚಿಗೆದ್ದ ಕೆಲವರು ಮೇಜಿನ ಮೇಲಿಟ್ಟಿದ್ದ ಗಾಜಿನ ಲೋಟಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಸಭಾಂಗಣದಲ್ಲಿದ್ದ ಕುರ್ಚಿಗಳು ಚೆಲ್ಲಾಪಿಲ್ಲಿಯಾದವು.
ಸಭಾಂಗಣದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಒಳನುಗ್ಗಿ ಉಭಯ ಬಣಗಳ ರೈತರನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟರು. ಗಲಾಟೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಇಬ್ಬರು ರೈತರನ್ನು ಪೊಲೀಸರು ವಶಕ್ಕೆ ಪಡೆದು ಸಭಾಂಗಣದಿಂದ ಹೊರಗೆ ಕರೆದೊಯ್ದರು. ಸದ್ಯ ಪೊಲೀಸರ ಸಮಯಪ್ರಜ್ಞೆಯಿಂದಾಗಿ ಪರಿಸ್ಥಿತಿ ತಿಳಿಯಾಗಿದೆ.
ಸಿಎಂ ಸಮ್ಮುಖದಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆ ಪಡೆಯಲು ಒಗ್ಗಟ್ಟು ಪ್ರದರ್ಶಿಸಬೇಕಿದ್ದ ರೈತ ಸಂಘಟನೆಗಳೇ ಸುವರ್ಣಸೌಧದ ಒಳಗೆ ಹೊಡೆದಾಡಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.