ಬೆಳಗಾವಿ: ಕಣ್ಣೆದುರೇ ಸುಟ್ಟು ಕರಕಲಾಯ್ತು ವರ್ಷದ ದುಡಿಮೆ, 6 ರೈತರ 28 ಎಕರೆ ಕಬ್ಬು ಭಸ್ಮ, ₹1 ಕೋಟಿಗೂ ಅಧಿಕ ನಷ್ಟ!

Published : Nov 25, 2026, 11:59 AM IST
Belagavi Sugarcane Fire

ಸಾರಾಂಶ

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ ಸುಮಾರು 28 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಘಟನೆಯಿಂದ ಅಂದಾಜು ಒಂದು ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಚಿಕ್ಕೋಡಿ : ಕಟಾವಿಗೆ ಬಂದು ನಿಂತಿದ್ದ ಕಬ್ಬಿನ ಗದ್ದೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ, ಸುಮಾರು 28 ಎಕರೆಯಷ್ಟು ಫಸಲು ಸಂಪೂರ್ಣವಾಗಿ ಸುಟ್ಟು ಕರಕಲಾದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ. ಈ ಭೀಕರ ಅಗ್ನಿ ಅವಘಡದಿಂದಾಗಿ ಅಂದಾಜು 1 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಬೆಳೆ ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಅನ್ನದಾತರು ಕಂಗಾಲಾಗಿದ್ದಾರೆ.

6 ರೈತರ ವರ್ಷದ ಶ್ರಮ ಬೆಂಕಿಗಾಹುತಿ

ನದಿ ಇಂಗಳಗಾಂವ ಗ್ರಾಮದ ಸ್ಥಳೀಯ ರೈತರಾದ ಬಸಪ್ಪ ಚನ್ನಣ್ಣನವರ, ಈರಪ್ಪ ಚನ್ನಣ್ಣನವರ, ಗುರುಬಸು ತೇವರಮನಿ, ಚನಗೌಡ ರಾಚಗೌಡರ, ಅಪ್ಪಾಸಾಬ ಗಿರಮಲ್ಲಣ್ಣವರ ಹಾಗೂ ರಾಮಣ್ಣ ಗಿರಮಲ್ಲಣ್ಣವರ ಅವರಿಗೆ ಸೇರಿದ ಜಮೀನುಗಳಲ್ಲಿ ಈ ದುರ್ಘಟನೆ ನಡೆದಿದೆ. ಮಂಗಳವಾರ ತಡರಾತ್ರಿ ಗದ್ದೆಗಳಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿಯ ಕಿಡಿ, ಗಾಳಿಯ ರಭಸಕ್ಕೆ ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಹೊಲಗಳಿಗೂ ವ್ಯಾಪಿಸಿದೆ. ನೋಡನೋಡುತ್ತಿದ್ದಂತೆಯೇ ಬೆಂಕಿಯ ಜ್ವಾಲೆಗಳು ಮುಗಿಲೆತ್ತರಕ್ಕೆ ಚಿಮ್ಮಿದ್ದು, ಕಟಾವಿಗೆ ಸಿದ್ಧವಾಗಿದ್ದ ಸಮೃದ್ಧ ಕಬ್ಬಿನ ಬೆಳೆಯನ್ನು ಆಹುತಿ ಪಡೆದಿದೆ.

ಅಗ್ನಿಶಾಮಕ ದಳ ಹಾಗೂ ಗ್ರಾಮಸ್ಥರ ಹರಸಾಹಸ

ಕಬ್ಬಿನ ಗದ್ದೆಗಳಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ರೈತರು ಹಾಗೂ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಗ್ರಾಮಸ್ಥರ ನೆರವಿನೊಂದಿಗೆ ಬೆಂಕಿಯನ್ನು ನಂದಿಸಲು ತೀವ್ರ ಹರಸಾಹಸ ಪಟ್ಟರು. ಆದರೂ ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಬಹುಪಾಲು ಬೆಳೆಯನ್ನು ರಕ್ಷಿಸಲು ಸಾಧ್ಯವಾಗದೆ, ರೈತರ ಕಣ್ಣಮುಂದೆಯೇ ಫಸಲು ಬೂದಿಯಾಗಿದೆ.

ಸೂಕ್ತ ಪರಿಹಾರಕ್ಕಾಗಿ ಅನ್ನದಾತರ ಮೊರೆ

ಕಳೆದ ಒಂದು ವರ್ಷದಿಂದ ಹಗಲಿರುಳು ಶ್ರಮಪಟ್ಟು, ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಬೆಳೆದಿದ್ದ ಕಬ್ಬು ಇನ್ನೇನು ಕಟಾವಾಗಿ ಕಾರ್ಖಾನೆಗೆ ಸಾಗಣೆಯಾಗುವ ಹಂತದಲ್ಲಿತ್ತು. ಆದರೆ, ಈ ಅನಿರೀಕ್ಷಿತ ಅವಘಡದಿಂದಾಗಿ ರೈತ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ವರ್ಷದ ಜೀವನಾಧಾರವನ್ನೇ ಕಳೆದುಕೊಂಡು ಕಣ್ಣೀರಿಡುತ್ತಿರುವ ಸಂತ್ರಸ್ತ ರೈತರು, ಸಂಬಂಧಪಟ್ಟ ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಸಮೀಕ್ಷೆ ನಡೆಸಬೇಕು ಮತ್ತು ರಾಜ್ಯ ಸರ್ಕಾರದಿಂದ ತಕ್ಷಣವೇ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಬ್ಬಿನ ಗದ್ದೆಗೆ ಬೆಂಕಿ ತಗುಲಲು ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

PREV
Read more Articles on
click me!

Recommended Stories

ಕನ್ನಡ ನಾಡಲ್ಲಿ ಹುಟ್ಟುವ ಅದೃಷ್ಠ ನನಗಿರಲಿಲ್ಲ, ಮಕ್ಕಳಿಬ್ಬರ ಜನ್ಮ ಇಲ್ಲೆ, ರೌಜಮೌಳಿ ತಂದೆಯ ಕನ್ನಡ ಪ್ರೀತಿ
ಇನ್ನು 5-10 ವರ್ಷದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ: ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಫೋಟಕ ಭವಿಷ್ಯ