Hijab Row: ದಕ್ಷಿಣ ಕನ್ನಡದಿಂದ ಉತ್ತರ ಕರ್ನಾಟಕದ ಬೆಳಗಾವಿಗೂ ಹಬ್ಬಿದ ಹಿಜಾಬ್ ವಿವಾದ!

By Suvarna News  |  First Published Feb 8, 2022, 1:38 PM IST

*ರಾಜ್ಯಾದ್ಯಂತ ವ್ಯಾಪಿಸಿದ ಹಿಜಾಬ್‌‌ Vs ಕೇಸರಿ ಗದ್ದಲ
*ಬಹುತೇಕ ಜಿಲ್ಲೆಗಳಲ್ಲಿ ಹಿಜಾಬ್‌ ಪರ, ವಿರೋಧ ಪ್ರತಿಭಟನೆ
*ಬೆಳಗಾವಿ ಕಾಲೇಜುಗಳಲ್ಲಿಯೂ ಕೇಸರಿ ಶಾಲ್‌ ಧರಿಸಿ ಬಂದ ಸ್ಟೂಡೆಂಟ್ಸ್!


ಬೆಳಗಾವಿ( ಫೆ. 08): ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ಹೊತ್ತಿಕೊಂಡ ಹಿಜಾಬ್‌-ಕೇಸರಿ (Hijab Vs Kesari) ಕಿಡಿ ಇದೀಗ ಉತ್ತರ ದಕ್ಷಿಣವೆನ್ನದೆ ರಾಜ್ಯವ್ಯಾಪಿ ವ್ಯಾಪಿಸಿಕೊಂಡಿದೆ. ಇಂದು ಬೆಳಗಾವಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸುವ ಮೂಲಕ ಕಾಲೇಜಿಗೆ ತೆರಳಿದ್ದಾರೆ. ವಿವಿಧ ಕಾಲೇಜು ಆವರಣದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಜೈ ಶ್ರೀರಾಮ ಘೋಷಣೆ ಕೂಗಿದ್ದಾರೆ. ಬೆಳಗಾವಿ ನಗರದ ಜೈನ್‌, ಕೆಎಲ್‌ಎಸ್, ಆರ್‌ಪಿಡಿ, ಜ್ಯೋತಿ ಜಿಎಸ್‌ಎಸ್ ಸೇರಿದಂತೆ ಇನ್ನಿತರ ಕಾಲೇಜು ವಿದ್ಯಾರ್ಥಿಗಳು  ಕೇಸರಿ ಶಾಲುಗಳನ್ನು ಧರಿಸಿ ಕಾಲೇಜುಗಳಿಗೆ ತೆರಳಿದ್ದಾರೆ. 

ಮಂಗಳವಾರದಿಂದ ಬೆಳಗಾವಿಯ ಎಲ್ಲ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬರಬೇಕು ಎಂಬ ಮೇಸೆಜ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈಗ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಕಾಲೇಜು ಆವರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಕಾಲೇಜಿನಲ್ಲಿ ಹೊತ್ತಿಕೊಂಡ ಹಿಜಾಬ್‌ ಕೇಸರಿ ವಿವಾದ ಈಗ ಉತ್ತರ ಕರ್ನಾಟಕದ ಬೆಳಗಾವಿಗೂ ಹಬ್ಬಿದೆ. ಇದರ ನಡುವೆಯೇ ಹಿಜಾಬ್‌ ಧರಿಸುವಿಕೆ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ  ಹೈಕೋರ್ಟ್‌ನಲ್ಲಿ (High Court) ನಡೆಯುತ್ತಿದೆ. 

Tap to resize

Latest Videos

ಇದನ್ನೂ ಓದಿ: Hijab Row: ಕಾಲೇಜಿಗೆ ಕೇಸರಿ ಪೇಟಾ ಧರಿಸಿ ಬಂದ ಎಂಜಿಎಂ ಕಾಲೇಜು ವಿದ್ಯಾರ್ಥಿಗಳು!

ಇನ್ನು ಹಿಜಾಬ್ ಬೆಂಬಲಿಸಿ ಬೆಳಗಾವಿಯಲ್ಲಿ AIMIM ಕಾರ್ಯಕರ್ತರು  ಸೋಮವಾರ ಪ್ರತಿಭಟಿಸಿದ್ದರು. ಬುರ್ಖಾ ಧರಿಸಿ ಪ್ರತಿಭಟನೆಗೆ ಇಳಿದ ಮಹಿಳೆಯರು. ದ್ವೇಷ ಬಿಡಿ, ದೇಶ ಉಳಿಸಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.  ಮುಸ್ಲಿಂ ವಿದ್ಯಾರ್ಥಿನಿಯರು ಏನೇ ಆದರೂ ನಾವು ಹಿಜಾಬ್‌ ಧರಿಸಿಯೇ ಸಿದ್ಧ ಎಂದು ಪಟ್ಟುಹಿಡಿದಿದ್ದರೆ, ಅವರು ಹಿಜಾಬ್‌ ಧರಿಸಿದರೆ ನಾವೂ ಕೇಸರಿ ಶಾಲು ಧರಿಸಿ ಬರುವುದಾಗಿ ಇತರೆ ವಿದ್ಯಾರ್ಥಿಗಳೂ ಹಠ ಹಿಡಿದಿದ್ದರಿಂದ ಕಾಲೇಜು ಆಡಳಿತ ಮಂಡಳಿಗಳು ಪೇಚಿಗೀಡಾಗಿರುವ ಪ್ರಸಂಗಗಳು ಗದಗ, ಹಾವೇರಿ, ಉಡುಪಿ, ಮಡಿಕೇರಿ, ತುಮಕೂರು, ದಾವಣಗೆರೆ, ಮಂಡ್ಯ, ಹಾಸನ, ಶಿವಮೊಗ್ಗ, ರಾಯಚೂರು, ಬೀದರ್‌ ಸೇರಿದಂತೆ ಅನೇಕ ತಾಲೂಕು, ಜಿಲ್ಲಾ, ಹೋಬಳಿ ಕೇಂದ್ರಗಳ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಿಂದ ಸೋಮವಾರ ವರದಿಯಾಗಿವೆ.

ಕೇಸರಿ ವರ್ಸಸ್‌ ನೀಲಿ ಶಾಲು: ಹಿಜಾಬ್‌ ಧರಿಸಿ ಕಾಲೇಜಿಗೆ ಬರುವುದಕ್ಕೆ ವಿರೋಧ ವ್ಯಕ್ತಪಡಿಸಿ ಕೇಸರಿ ಶಾಲು ಧರಿಸಿ ಬರುತ್ತಿರುವ ವಿದ್ಯಾರ್ಥಿಗಳ ವಿರುದ್ಧ ನೀಲಿ ಶಾಲು ಧರಿಸಿ ಕಾಲೇಜ್‌ಗೆ ಬರುವ ಮೂಲಕ ಬಹುಜನ ವಿದ್ಯಾರ್ಥಿ ಸಂಘ ಹಾಗೂ ಎನ್‌ಎಸ್‌ಯುಐ ವಿದ್ಯಾರ್ಥಿಗಳು ತಿರುಗೇಟು ನೀಡಿರುವ ಘಟನೆ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಸೋಮವಾರ ನಡೆದಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್‌ ಧರಿಸಿ ಕಾಲೇಜು ಪ್ರವೇಶಿಸಿದಾಗ ಕೇಸರಿ ಶಾಲು ತೊಟ್ಟು ಕಾಲೇಜು ಪ್ರವೇಶಿಸಲು ಯತ್ನಿಸಿದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ತಡೆದು ಸಮವಸ್ತ್ರ ಇದ್ದವರಿಗೆ ಮಾತ್ರ ತರಗತಿಗೆ ತೆರಳಲು ಅನುಮತಿ ನೀಡಿದರು.

ಇದನ್ನೂ ಓದಿ: Hijab Row: ಹಿಜಾಬ್ ಬೆಂಬಲಿಸಿ ಇಂಡಿ ಶಾಂತೇಶ್ವರ ಕಾಲೇಜಿನಲ್ಲಿ ನೀಲಿ ಶಾಲು ಪ್ರತಿಭಟನೆ

 ಇದೇ ವೇಳೆ ಬಹುಜನ ವಿದ್ಯಾರ್ಥಿ ಸಂಘ ಹಾಗೂ ಎನ್‌ಎಸ್‌ಯುಐ ನೇತೃತ್ವದಲ್ಲಿ ಇದೇ ಕಾಲೇಜಿನ ವಿದ್ಯಾರ್ಥಿಗಳು ನೀಲಿಬಣ್ಣದ ಶಾಲು ಧರಿಸಿಕೊಂಡು ಬಂದು ‘ಜೈ ಅಂಬೇಡ್ಕರ್‌, ಜೈ ಭೀಮ್‌’ ಎಂದು ಘೋಷಣೆ ಹಾಕಿದರು. ಆಗ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳ ಗುಂಪು ‘ಜೈ ಶ್ರೀರಾಮ್‌’ ಎಂಬ ಘೋಷಣೆ ಹಾಕಿತು. ಎರಡು ಗುಂಪುಗಳು ಎದುರುಬದುರಾಗಿ ಪರಸ್ಪರ ಸಮೀಪಕ್ಕೆ ಬರುತ್ತಿದ್ದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ಪೊಲೀಸರು ತಕ್ಷಣಕ್ಕೆ ಮಧ್ಯ ಪ್ರವೇಶಿಸಿ ಗುಂಪುಗಳನ್ನು ಚದುರಿಸಿದರು.

click me!