
ಬೆಳಗಾವಿ (ಜೂ.15): ದೇಶ ಕಾಯುವ ನಿವೃತ್ತ ಯೋಧನೊಬ್ಬನ ಸಾವಿನ ಪ್ರಕರಣ ಈಗ ಭಯಾನಕ ತಿರುವು ಪಡೆದುಕೊಂಡಿದೆ. ಕೇವಲ 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಸ್ವಂತ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿರುವ ರೋಚಕ ಕಥೆಯನ್ನು ಬೆಳಗಾವಿ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಸಂಬಂಧ ಪತ್ನಿ ಸೇರಿದಂತೆ ಒಟ್ಟು 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಿವೃತ್ತ ಯೋಧ ಸಂದೀಪ ಮಂಜರಗಿ (46) ಈ ಪ್ರಕರಣದ ದುರ್ದೈವಿ. ಕೆಲವು ದಿನಗಳ ಹಿಂದೆ ಸಣ್ಣ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸಂದೀಪ್ ಅವರನ್ನು ಅವರ ಪತ್ನಿ ಸುಮಾ, ಘಟಪ್ರಭಾದ ಜೆಜೆ ಕೋ-ಆಪರೇಟಿವ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅದೇ ಆಸ್ಪತ್ರೆಯಲ್ಲಿ ಪತಿಯ ಪ್ರಾಣ ತೆಗೆಯಲು ಸುಮಾ ಮತ್ತು ಆಕೆಯ ಪ್ರಿಯಕರ ಪುಂಡಲೀಕ ಕಿರಾತಕ ಸಂಚು ರೂಪಿಸಿದ್ದರು.
ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆತನಿಗೆ ನಿದ್ದೆ ಮಾತ್ರೆಗಳನ್ನು ನೀಡಲಾಗಿತ್ತು. ಅಷ್ಟಕ್ಕೇ ಸುಮ್ಮನಾಗದ ಆರೋಪಿಗಳು, ಆಸ್ಪತ್ರೆಯ ಸಲೈನ್ ಬಾಟಲಿಯ ಮೂಲಕವೇ ವಿಷಪ್ರಾಶನ ಮಾಡಿಸಿ ಪತಿಯನ್ನು ಹತ್ಯೆ ಮಾಡಿದ್ದಾರೆ. ಈ ಕೃತ್ಯಕ್ಕೆ ಸುಮಾ ಮತ್ತು ಪುಂಡಲೀಕನಿಗೆ ಅಪ್ಪಾಸಾಬ್ ನಾಯಿಕವಾಡಿ, ಚನ್ನಪ್ಪಾ ಅಡವಿಸ್ವಾಮಿಮಠ ಸೇರಿದಂತೆ ಒಟ್ಟು 9 ಜನ ಸಾಥ್ ನೀಡಿದ್ದರು.
ಕೊಲೆಯ ನಂತರ ಎಫ್‌ಎಸ್‌ಎಲ್ (FSL) ವರದಿಯಲ್ಲಿ ವಿಷಪ್ರಾಶನದ ಬಗ್ಗೆ ಉಲ್ಲೇಖವಾಗಿತ್ತು. ಆದರೆ, 2 ಕೋಟಿ ರೂಪಾಯಿ ವಿಮೆ ಹಣ ಸಿಗಬೇಕೆಂಬ ಉದ್ದೇಶದಿಂದ ಆರೋಪಿಗಳು ಹಣದ ಆಮಿಷವೊಡ್ಡಿ ಎಫ್‌ಎಸ್‌ಎಲ್ ವರದಿಯನ್ನೇ ತಿದ್ದುಪಡಿ ಮಾಡಿಸಲು ಪ್ರಯತ್ನಿಸಿದ್ದರು. ಇದಕ್ಕೆ ಕೆಲವು ಪೊಲೀಸ್ ಸಿಬ್ಬಂದಿಯೂ ಸಹಕರಿಸಿದ್ದರು ಎಂಬ ಸ್ಫೋಟಕ ಮಾಹಿತಿ ಸುದ್ದಿಗೋಷ್ಠಿಯಲ್ಲಿ ಹೊರಬಂದಿದೆ.
ಇಷ್ಟೆಲ್ಲಾ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದು ವಿಮೆ ಹಣದ ಹಂಚಿಕೆಯ ವಿಚಾರದಲ್ಲಿ! ಸಂದೀಪ್ ಅವರ ಹೆಸರಿನಲ್ಲಿದ್ದ 2 ಕೋಟಿ ರೂ. ವಿಮೆ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಪತ್ನಿ ಸುಮಾ ಮತ್ತು ಪ್ರಿಯಕರ ಪುಂಡಲೀಕ ನಡುವೆ ಜಗಳ ಆರಂಭವಾಗಿತ್ತು. ಈ ಸುಳಿವು ಬೆನ್ನಟ್ಟಿದ ಯಮಕನಮರಡಿ ಮತ್ತು ಘಟಪ್ರಭಾ ಪೊಲೀಸರು ತನಿಖೆ ನಡೆಸಿದಾಗ ಈ ಭೀಕರ ಹತ್ಯಾಕಾಂಡ ಬಯಲಾಗಿದೆ. ಬೆಳಗಾವಿ ಎಸ್‌ಪಿ ಕೆ. ರಾಮರಾಜನ್ ಅವರು ಸುದ್ದಿಗೋಷ್ಠಿ ನಡೆಸಿ, ಪ್ರಕರಣದ ಹಂತ ಹಂತದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ಮತ್ತು ದಕ್ಷತೆಯಿಂದ ಕೆಲಸ ಮಾಡಿದ ಪೊಲೀಸ್ ತಂಡವನ್ನು ಶ್ಲಾಘಿಸಿದ್ದಾರೆ.