
ಬೆಳಗಾವಿ (ಫೆ.04): ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಮನುಷ್ಯನ ಪ್ರಾಣ ತೆಗೆಯುವ ಮಟ್ಟಕ್ಕೆ ಇಂದಿನ ಯುವಕರು ಇಳಿದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬೆಳಗಾವಿ ತಾಲೂಕಿನ ಘೋಡಕೆನಟ್ಟಿ ಗ್ರಾಮದಲ್ಲಿ ಕೇವಲ ಎರಡು ಸಿಗರೇಟ್ ಮತ್ತು ನೀರಿನ ಬಾಟಲಿಯ ಹಣ ಕೇಳಿದ್ದಕ್ಕಾಗಿ ಪಾನ್ ಶಾಪ್ ಮಾಲೀಕನನ್ನೇ ಯುವಕರ ತಂಡವೊಂದು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.
ಘೋಡಕೆನಟ್ಟಿ ಗ್ರಾಮದ ಯಲ್ಲಪ್ಪ ನಾಯಕ್ (48) ಕೊಲೆಯಾದ ದುರ್ದೈವಿ. ಗ್ರಾಮದಲ್ಲಿ ಜಾತ್ರೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮದ ಜನರು ಆಗಮಿಸಿದ್ದರು. ಇದೇ ವೇಳೆ ಜಾತ್ರೆ ಮುಗಿಸಿ ರಾತ್ರಿ ಮನೆಗೆ ವಾಪಸ್ ಹೋಗುತ್ತಿದ್ದ ನಾಲ್ವರು ಯುವಕರು ಮಾರ್ಗಮಧ್ಯದಲ್ಲಿ ಯಲ್ಲಪ್ಪ ಅವರ ಪಾನ್ ಶಾಪ್ ಬಳಿ ನಿಂತಿದ್ದಾರೆ. ಅಂಗಡಿಯಿಂದ ಸಿಗರೇಟ್ ಮತ್ತು ನೀರಿನ ಬಾಟಲಿಗಳನ್ನು ಪಡೆದ ಯುವಕರು, ಹಣ ನೀಡದೆ ಅಲ್ಲಿಂದ ಹೊರಡಲು ಮುಂದಾಗಿದ್ದಾರೆ.
ಯುವಕರು ಹಣ ನೀಡದೆ ಹೋಗುತ್ತಿದ್ದನ್ನು ಗಮನಿಸಿದ ಯಲ್ಲಪ್ಪ, "ತೆಗೆದುಕೊಂಡ ವಸ್ತುಗಳಿಗೆ ಹಣ ಕೊಡಿ" ಎಂದು ಕೇಳಿದ್ದಾರೆ. ಇದರಿಂದ ಕೆರಳಿದ ಯುವಕರು ಯಲ್ಲಪ್ಪ ಅವರೊಂದಿಗೆ ಜಗಳಕ್ಕಿಳಿದು ಅವಾಚ್ಯವಾಗಿ ನಿಂದಿಸಿದ್ದಾರೆ. ಮಾತಿಗೆ ಮಾತು ಬೆಳೆದು ನಾಲ್ವರು ಯುವಕರು ಸೇರಿ ಯಲ್ಲಪ್ಪ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ತೀವ್ರತೆಗೆ ಯಲ್ಲಪ್ಪ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಸ್ಥಳೀಯರು ಮತ್ತು ಕುಟುಂಬಸ್ಥರು ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರಾದರೂ, ದುರದೃಷ್ಟವಶಾತ್ ಮಾರ್ಗಮಧ್ಯೆಯೇ ಯಲ್ಲಪ್ಪ ಕೊನೆಯುಸಿರೆಳೆದಿದ್ದಾರೆ. ಮನೆಯ ಯಜಮಾನನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೇವಲ ಹತ್ತು-ಇಪ್ಪತ್ತು ರೂಪಾಯಿ ಹಣಕ್ಕಾಗಿ ಒಬ್ಬ ವ್ಯಕ್ತಿಯ ಪ್ರಾಣ ತೆಗೆದ ಘೋರ ಕೃತ್ಯಕ್ಕೆ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಕಾಕತಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಪ್ರಜ್ವಲ್ ಪಾಟೀಲ್ (22), ನಿಖಿಲ್ ಚೌಗಲೆ (22), ವಿವೇಲ್ ಚೌಗಲೆ ಮತ್ತು ಶ್ರೀಧರ್ ಪಾಟೀಲ್ ಎಂದು ಗುರುತಿಸಲಾಗಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.