* ರಾಮದೇವ ಗಲ್ಲಿಯಲ್ಲಿ ಪುರಾತನ ದೇವಾಲಯವಿತ್ತು. ಅದರ ಮೇಲೆ ಮಸೀದಿ ನಿರ್ಮಿಸಲಾಗಿದೆ
* ಹೊರಗಿನಿಂದಲೇ ನಾನು ಅದನ್ನು ನೋಡಿದ್ದು, ಅದು ಹಿಂದೂದೇವಾಲಯ ಇರುವುದು ಸ್ಪಷ್ಟ
* ಗೋಡೆ ಕಂಬಗಳ ಮೇಲಿನ ಕೆತ್ತನೆಯನ್ನೂ ಅಳಿಸಿಹಾಕಲಾಗಿದೆ
ಬೆಳಗಾವಿ(ಮೇ.29): ಬೆಳಗಾವಿಯ ರಾಮದೇವ ಗಲ್ಲಿಯಲ್ಲಿ ಇರುವ ಹಿಂದೂಗಳ ಶ್ರದ್ಧಾ ಕೇಂದ್ರವನ್ನು ಮಸೀದಿಯನ್ನಾಗಿ ಪರಿವರ್ತಿಸಲಾಗಿದೆ. ಅದನ್ನು ಮರಳಿ ಹಿಂದೂಗಳಿಗೆ ನೀಡಬೇಕು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಜಿಲ್ಲಾಡಳಿತವನ್ನು ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮದೇವ ಗಲ್ಲಿಯಲ್ಲಿ ಪುರಾತನ ದೇವಾಲಯವಿತ್ತು. ಅದರ ಮೇಲೆ ಮಸೀದಿ ನಿರ್ಮಿಸಲಾಗಿದೆ. ಆ ಭಾಗದ ಹಿರಿಯರು ಈ ಕುರಿತು ನನ್ನ ಗಮನಕ್ಕೆ ತಂದಿದ್ದಾರೆ. ಹೊರಗಿನಿಂದಲೇ ನಾನು ಅದನ್ನು ನೋಡಿದ್ದು, ಅದು ಹಿಂದೂದೇವಾಲಯ ಇರುವುದು ಸ್ಪಷ್ಟವಾಗುತ್ತದೆ. ಗರ್ಭಗುಡಿ ಪ್ರವೇಶಕ್ಕೆ ಸಣ್ಣ ಬಾಗಿಲು ಇದೆ. ಕಂಬಗಳು ಇವೆ. ಗೋಡೆ ಕಂಬಗಳ ಮೇಲಿನ ಕೆತ್ತನೆಯನ್ನೂ ಅಳಿಸಿಹಾಕಲಾಗಿದೆ ಎಂದು ಹೇಳಿದರು.
ಹಿಂದೂ ಸಮಾಜದ ಹಿರಿಯರೇ ಈ ಕುರಿತು ನನ್ನ ಗಮನ ಸೆಳೆದಿದ್ದಾರೆ. ಇಲ್ಲಿ ದೇವಾಲಯ ಇದೆ ಎಂಬುವ ವಾದ ನಮ್ಮದು. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದು ಇಲ್ಲಿ ದೇವಾಲಯ ಇದೆಯೋ? ಇಲ್ಲವೋ? ಎಂಬುದನ್ನು ಪರಿಶೀಲಿಸಬೇಕು. ಮಸೀದಿಯನ್ನು ದೇವಾಲಯವನ್ನಾಗಿಸಲು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೆಳಗಾವಿ 'ಲಕ್ಷ್ಮಿ'ಗೆ ನೂರಾರು ಕೋಟಿ ಸಾಲ ಕೊಡಿಸಿದ್ದು ಯಾರು? ಡಿಕೆಶಿ ಸತ್ಯವ್ರತನ ಸೋಗು ಎಂದ ಬಿಜೆಪಿ
ಅಯೋಧ್ಯೆ ರಾಮಮಂದಿರ ಚಳವಳಿ ಆರಂಭವಾದಾಗಿನಿಂದ ಒಂದೊಂದಾಗಿ ವಿಷಯ ಹೊರಬರುತ್ತಿವೆ. ದೇಶದಲ್ಲಿ 30 ಸಾವಿರ ದೇವಾಲಯಗಳನ್ನು ಮಸೀದಿಗಳನ್ನಾಗಿ ಪರಿವರ್ತಿಸಲಾಗಿದೆ. ಅದರಲ್ಲಿ ಬೆಳಗಾವಿ ದೇವಾಲಯ ಕೂಡ ಇದೆ. ಹಿಂದೂದೇವಾಲಯಗಳಿಗೆ ಪ್ರವೇಶದ ಚೌಕಟ್ಟು ಸಣ್ಣದಾಗಿರುತ್ತವೆ. ದೇವಾಲಯ ಪ್ರವೇಶಕ್ಕೆ ಎಲ್ಲರೂ ತಲೆ ಬಾಗಿಸಿ ಒಳಹೋಗುತ್ತೇವೆ. ಸಣ್ಣ ಬಾಗಿಲು, ಕಂಬಗಳಿವೆ. ಮೇಲ್ನೋಟಕ್ಕೆ ಇದು ಹಿಂದೂ ದೇವಾಲಯ ಇರುವುದು ಸಾಬೀತಾಗುತ್ತದೆ. ಇತಿಹಾಸದಲ್ಲಿ ಆದ ಪ್ರಮಾದವನ್ನು ಸರಿಪಡಿಸುವ ಕೆಲಸ ಆಗಬೇಕಿದೆ. ಯಾವ ಮಂದಿರ ಇತ್ತು ಎನ್ನುವುದನ್ನು ಅಧ್ಯಯನ ಮಾಡಬೇಕಿದೆ. ಇದು ಸುಮಾರು 500 ವರ್ಷಗಳ ಹಿಂದಿನ ಪುರಾತನ ದೇವಾಲಯ. ಗರ್ಭ ಗುಡಿ ಬಾಗಿಲು ಇದೆ. ಈ ಕುರಿತು ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು ಎಂದರು.
ಆ ಭಾಗದ ಹಿರಿಯರ ಪ್ರಕಾರ ಇಲ್ಲಿ ಹಿಂದೂ ದೇವಾಲಯ ಇತ್ತು ಎನ್ನುವುದು ನೂರಕ್ಕೆ ನೂರು ಸತ್ಯ ಎನಿಸುತ್ತದೆ. ಜಿಲ್ಲಾಡಳಿತ ಕೂಡಲೇ ಸರ್ವೆ ಕಾರ್ಯ ಕೈಗೊಳ್ಳಬೇಕು. ಈ ಕುರಿತು ಸಮಾಜದ ಮುಖಂಡರ ಜೊತೆಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.