ಚೀನಾ ವೈರಸ್‌ ಭೀತಿ ನಡುವೆ ಅಧಿವೇಶನಕ್ಕೆ ಬೆಳಗಾವಿ ಸಜ್ಜು..!

By Kannadaprabha News  |  First Published Dec 3, 2023, 2:00 AM IST

ರಾಜ್ಯದ ಪರ್ಯಾಯ ಶಕ್ತಿ ಕೇಂದ್ರ ಸುವರ್ಣ ವಿಧಾನಸೌಧದಲ್ಲಿ ಡಿ. 4 ರಿಂದ 15ರವರೆಗೆ ವಿಧಾನಮಂಡಳ ಅಧಿವೇಶನ ನಡೆಯಲಿದೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರದ ಬೆಳಗಾವಿ ಮೊದಲ ಅಧಿವೇಶನ ಇದಾಗಿದೆ. 


ಶ್ರೀಶೈಲ ಮಠದ

ಬೆಳಗಾವಿ(ಡಿ.04):  ಚೀನಾ ವೈರಸ್‌ ಭೀತಿ ನಡುವೆಯೇ ಚಳಿಗಾಲದ ವಿಧಾನಮಂಡಳ ಅಧಿವೇಶನಕ್ಕೆ ಗಡಿನಾಡು ಬೆಳಗಾವಿ ಸಜ್ಜುಗೊಂಡಿದ್ದು, ಸುವರ್ಣ ವಿಧಾನಸೌಧ ಸಿಂಗಾರಗೊಂಡಿದೆ. ಭಾನುವಾರವೇ ಇಡೀ ಆಡಳಿತ ಯಂತ್ರ ರಾಜಧಾನಿ ಬೆಂಗಳೂರಿನಿಂದ ಬೆಳಗಾವಿಗೆ ಶಿಫ್ಟ್‌ ಆಗಲಿದೆ. ಅಧಿವೇಶನ ಯಶಸ್ವಿಗೆ ಜಿಲ್ಲಾಡಳಿತ ಹಗಲು ರಾತ್ರಿ ಶ್ರಮಿಸುತ್ತಿದೆ. ಅಧಿವೇಶನಕ್ಕೆ ನಾನಾ ಸಂಘಟನೆಗಳಿಂದ ಪ್ರತಿಭಟನೆ ಬಿಸಿಕೂಡ ತಟ್ಟಲಿದೆ.

Tap to resize

Latest Videos

ರಾಜ್ಯದ ಪರ್ಯಾಯ ಶಕ್ತಿ ಕೇಂದ್ರ ಸುವರ್ಣ ವಿಧಾನಸೌಧದಲ್ಲಿ ಡಿ. 4 ರಿಂದ 15ರವರೆಗೆ ವಿಧಾನಮಂಡಳ ಅಧಿವೇಶನ ನಡೆಯಲಿದೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರದ ಬೆಳಗಾವಿ ಮೊದಲ ಅಧಿವೇಶನ ಇದಾಗಿದೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಈ ವರ್ಷ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧಕ್ಕೆ ಝಗಮಗಿಸುವ ವಿದ್ಯುತ್‌ ದೀಪಾಲಂಕಾರ ಮಾಡಲಾಗುತ್ತಿದೆ. ಸುವರ್ಣ ವಿಧಾನಸೌಧ ಕಟ್ಟಡದೊಳಗಿನ ವಿಧಾನಸಭೆ ಸಭಾಂಗಣ ಮತ್ತು ವಿಧಾನ ಪರಿಷತ್‌ ಸಭಾಂಗಣ ಸೇರಿದಂತೆ ಎಲ್ಲ ಕೊಠಡಿಗಳಿಗೆ ಈ ಬಾರಿ ಸುಣ್ಣ ಬಣ್ಣ ಬಳಿಯಲಾಗಿದೆ. ಸುವರ್ಣಸೌಧದ ಸುತ್ತಲಿನ ಆವರಣದಲ್ಲಿಯೂ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದ್ದು, ಸುವರ್ಣ ಸೌಧ ಕಟ್ಟಡ ತನ್ನ ಅಂದ ಚೆಂದ ಹೆಚ್ಚಿಸಿಕೊಂಡಿದೆ.

ಉತ್ತರ ಕರ್ನಾಟಕದ ಸಮಸ್ಯೆ ನಿವಾರಣೆಗೆ ಆಗ್ರಹ: ಬೆಳಗಾವಿ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ

ವೈರಸ್‌ ಭೀತಿ

ಸುವರ್ಣವಿಧಾನಸೌಧದಲ್ಲಿ ನಡೆಯುವ ವಿಧಾನಮಂಡಳ ಅಧಿವೇಶನಕ್ಕೆ ಚೀನಾ ವೈರಸ್‌ ಭೀತಿ ಎದುರಾಗಿದೆ. ಉತ್ತರ ಚೀನಾದಲ್ಲಿ ನ್ಯುಮೋನಿಯಾ ಮಾದರಿಯ ಸೋಂಕು ತೀವ್ರಗೊಂಡಿದೆ. ಇನ್‌ಪ್ಲುಯೆಂಜಾ ಮಾದರಿ ಜ್ವರ ಹಾಗೂ ಗಂಭೀರ ಸ್ವರೂಪದ ಉಸಿರಾಟ ತೊಂದರೆ ಪ್ರಕರಣಗಳ ಟ್ರೆಂಡ್‌ ಬಗ್ಗೆ ನಿಗಾ ಇಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಯಾವುದೇ ವೈರಸ್‌ ಭೀತಿ ಎದುರಾಗಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ಮಾಡಿದ್ದೇವೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ತಾಲೂಕು, ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಸಿದ್ದಪಡಿಸಿದ್ದೇವೆ. ಬಿಮ್ಸ್ ಆಸ್ಪತ್ರೆಯಲ್ಲಿ ಹತ್ತು ಬೆಡ್​ನ ವಾರ್ಡ್ ಸಿದ್ದಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಅಧಿವೇಶನದ ವೇಳೆ ಶಾಸಕರು, ಸಚಿವರು, ಅಧಿಕಾರಿಗಳು ತಂಗುವ ಹೊಟೆಲ್​ಗಳಿಗೆ ವಿಶೇಷ ವೈದ್ಯರ ತಂಡ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅಧಿವೇಶನಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಟಿಯು ಗೆಸ್ಟ್‍ಹೌಸ್‍ನಲ್ಲಿ ವಾಸ್ತವ್ಯ ಹೂಡಲಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡುವರು. ಅದರಂತೆ ಸಚಿವರಿಗೆ ಯುಕೆ-27 ಹಾಗೂ ಮೇರಿಯಟ್ ಹೋಟೆಲ್‍ನಲ್ಲಿ ರೂಂ ಕಾಯ್ದಿರಿಸಲಿಸಲಾಗಿದೆ. ಶಾಸಕರು- ಅಧಿಕಾರಿಗಳು ಇನ್ನುಳಿದ ಹೋಟೆಲ್‍ಗಳಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಇನ್ನು 10 ದಿನಗಳ ಕಾಲ ಈ ಭಾಗದ ವಿಶೇಷ ಭೋಜನದ ವ್ಯವಸ್ಥೆನ್ನು ಜಿಲ್ಲಾಡಳಿತ ಮಾಡಿದೆ. ಸುವರ್ಣಸಂಭ್ರಮ ಹಿನ್ನಲೆಯಲ್ಲಿ ಅಧಿವೇಶನದ ಒಂದುದಿನ ಸುವರ್ಣಸೌಧದಲ್ಲಿ ಮನರಂಜನೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಬಿಗಿ ಪೊಲೀಸ್‌ ಬಂದೋಬಸ್ತ್‌

ವಿಧಾನಮಂಡಳ ಅಧಿವೇಶನದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದ್ದು, 5 ಸಾವಿರ ಪೊಲೀಸ್‌ ಸಿಬ್ಬಂದಿಯನ್ನುಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸುಮಾರು 2 ಸಾವಿರ ಪೊಲೀಸರ ವಾಸ್ತವ್ಯಕ್ಕೆ ಸುವರ್ಣಸೌಧಕ್ಕೆ ಸಮೀಪ ಇರುವ ಅಲಾರವಾಡ ಗ್ರಾಮದಲ್ಲಿ ಬೃಹತ್ ಟೌನ್‍ಶಿಪ್ ನಿರ್ಮಿಸಲಾಗಿದೆ. ಪಿಸಿಯಿಂದ ಹವಾಲ್ದಾರ್ ದರ್ಜೆಯ ಪೊಲೀಸ್ ಸಿಬ್ಬಂದಿಗೆ ನಾಲ್ಕು ಜರ್ಮನ್ ಟೆಂಟ್ ಹಾಗೂ ಪಿಎಸ್‍ಐ ದರ್ಜೆಯ ಅಧಿಕಾರಿಗಳಿಗೆ ಚಿಕ್ಕದಾದ ಜರ್ಮನ್ ಟೆಂಟ್ ಹಾಕಿ ಟೌನ್‍ಶಿಪ್ ನಿರ್ಮಿಸಲಾಗಿದೆ. ಒಂದು ಜರ್ಮನ್ ಟೆಂಟ್‍ನಲ್ಲಿ 500 ಸಿಬ್ಬಂದಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಕಾಟ್-ಬೆಡ್, ಫ್ಯಾನ್, ಚಾರ್ಜಿಂಗ್ ಪಾಯಿಂಟ್, ಬಿಸಿ ನೀರು ವ್ಯವಸ್ಥೆ, ಊಟ-ಉಪಹಾರಕ್ಕೆ ಭೋಜನಾಲಯ, ಮನರಂಜನೆಗೆ ಟಿವಿ ರೂಂ, ಸ್ನಾನ ಮಾಡಲು ಬಿಸಿನೀರು ಹಾಗೂ ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಇನ್ನು ಮಚ್ಛೆ, ಆಟೋನಗರ, ಎಪಿಎಂಸಿ ಪೊಲೀಸ್ ತರಬೇತಿ ಶಾಲೆ, ಸಾಂಬ್ರಾ ಏರ್‌ಮನ್‌ ಶಾಲೆಯಲ್ಲಿ ಇನ್ನುಳಿದ 3 ಸಾವಿರ ಪೊಲೀಸ್ ಸಿಬ್ಬಂದಿಯ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬೆಳಗಾವಿ: ಸುವರ್ಣ ಕರ್ನಾಟಕ ಸಂಭ್ರಮದಲ್ಲೇ ಪ್ರತ್ಯೇಕ ಉಕ ರಾಜ್ಯಕ್ಕೆ ಕೂಗು..!

ಚಳಿಗಾಲದ ವಿಧಾನಮಂಡಳ ಅಧಿವೇಶನ ಯಶಸ್ವಿಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚೀನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಅಗತ್ಯ ಎಲ್ಲ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ವಿಧಾನಮಂಡಳ ಅಧಿವೇಶನದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದ್ದು, ಸುಮಾರು 5 ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪೊಲೀಸರ ವಾಸ್ತವ್ಯಕ್ಕೆಹೈಟೆಕ್‌ ಟೌನ್‌ಶಿಪ್‌ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌.ಸಿದ್ದರಾಮಪ್ಪ ಹೇಳಿದ್ದಾರೆ. 

click me!