ಅಥಣಿಯ ಜಲಮೂಲ ರಹಸ್ಯ: ನದಿ ಬತ್ತುತ್ತಿದ್ದರೂ ಕುಡಿಯುವ ನೀರಿಗಿಲ್ಲ ಬರ, ಶಾಶ್ವತ ಪರಿಹಾರ

Published : Jun 17, 2026, 09:21 AM IST
Athani

ಸಾರಾಂಶ

ಅಥಣಿ ತಾಲೂಕಿನಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ₹140 ಕೋಟಿ ವೆಚ್ಚದ ಕೆರೆ ತುಂಬುವ ಯೋಜನೆ ಯಶಸ್ವಿಯಾಗಿದೆ. ಕೃಷ್ಣಾ ನದಿಯಿಂದ 9 ಕೆರೆಗಳಿಗೆ ನೀರು ತುಂಬಿಸುವ ಮೂಲಕ, ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ರೈತರ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿದೆ.

ಅಣ್ಣಾಸಾಬ ತೆಲಸಂಗ

ಬೆಳಗಾವಿ: ಶತಮಾನಗಳಿಂದ ತಾಲೂಕಿನ ಪೂರ್ವ ಭಾಗದ ರೈತರ ಕೃಷಿಗೆ ಜಲ ಮೂಲವಾಗಿದ್ದ ಕೆರೆಗಳು ಬತ್ತಿ ಹೋಗಿ ಬರಪೀಡಿತವಾಗುತ್ತಿದ್ದ ಅಥಣಿ ತಾಲೂಕಿಗೆ ಕೆರೆ ತುಂಬುವ ಯೋಜನೆ ಈ ಭಾಗದ ಜನತೆಗೆ ವರದಾನ ಪರಿಣಮಿಸಿದೆ. 18 ಕಿಮೀ ಅಂತರದಲ್ಲಿರುವ ಕೃಷ್ಣಾ ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ರೈತರ ಕೃಷಿಗೆ ಮತ್ತು ಈ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ನೀಡಿದೆ.

ಪ್ರತಿ ವರ್ಷ ಬೀಸಿಗೆ ವೇಳೆ ಎದುರಾಗುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೂಪಿಸಿದ್ದ ಕೆರೆ ತುಂಬುವ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ತಾಲೂಕಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು ಮಾದರಿಯಾಗಿದೆ.

9 ಕೆರೆ ತುಂಬಿಸುವ ಯೋಜನೆ

ಅಥಣಿ ತಾಲೂಕಿನ ಪೂರ್ವ ಭಾಗದ ನೀರಾವರಿ ಸೌಲಭ್ಯದಿಂದ ವಂಚಿತವಾದ ಹಳ್ಳಿಗಳಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಾಸಕ ಲಕ್ಷ್ಮಣ ಸವದಿ ಸರ್ಕಾರದಿಂದ ₹140 ಕೋಟಿ ಮಂಜೂರಾತಿ ಪಡೆದುಕೊಳ್ಳುವ ಮೂಲಕ ಯಲ್ಲಮ್ಮವಾಡಿ, ಕೋಹಳ್ಳಿ, ಅಡಹಳ್ಳಿ, ಐಗಳಿ ಮತ್ತು ಬಾಡಗಿ ಗ್ರಾಮಗಳಲ್ಲಿನ ಒಟ್ಟು 9 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುವ ಮೂಲಕ ತೆರೆದ ಬಾವಿ ಮತ್ತು ಕೊಳವೆ ಬಾವಿಗಳಿಗೆ ಸತತ ನೀರು ಬರುವುದರಿಂದ ನೀರಾವರಿಗೆ ಅನುಕೂಲವಾಗಲಿದೆ. ಇದಲ್ಲದೆ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯಡಿ ಕೊಟ್ಟಲಗಿ, ಕಕಮರಿ, ಅರಟಾಳ, ತೆಲಸಂಗ ಮತ್ತು ಐಗಳಿ ಗ್ರಾಮಗಳ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವುದು ಈ ಯೋಜನೆ ಉದ್ದೇಶವಾಗಿದೆ.

ಅಂತರ್ಜಲ ವೃದ್ಧಿ

ಬೆಳಗಾವಿ ಜಿಲ್ಲೆಯಲ್ಲಿ 7 ನದಿಗಳು ಐದು ಜಲಾಶಯಗಳಿದ್ದು, ಆದರೂ ಕೃಷಿ ಚಟುವಟಿಕೆಗಳಿಗೆ, ಕೈಗಾರಿಕೆ ಮತ್ತು ಇತರೆ ಬಳಕೆಗಾಗಿ ನೀರು ಸಾಲುತ್ತಿಲ್ಲ. ಬೇಸಿಗೆಯ ಬಂದರೆ ಕೆರೆ, ನಾಲಾ, ನದಿ ಮತ್ತು ಜಲಾಶಯಗಳಲ್ಲಿಯೂ ನೀರಿನ ಮಟ್ಟ ಕುಸಿಯುತ್ತದೆ. ಜಿಲ್ಲಾ ಅಂತರ್ಜಲ ಕಚೇರಿಯ ಭೂ ವಿಜ್ಞಾನಿಗಳ ಮಾಹಿತಿ ಪ್ರಕಾರ ಜಿಲ್ಲೆಯ 15 ತಾಲೂಕುಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಅಂತರ್ಜಲ ಮಟ್ಟ ಕುಸಿತ ಕಂಡು ಬಂದಿದೆ. ಆದರೆ, ಅಥಣಿ ತಾಲೂಕಿನಲ್ಲಿ 2.29 ಮೀಟರ್ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. 2025ರ ಮೇ ತಿಂಗಳು ವರದಿಯು 28.83 ಮೀಟರ್ ಇದ್ದರೇ, 2026 ರ ಮೇ ತಿಂಗಳು ವರದಿ 26.54 ಮೀಟರ್ ಎನ್ನಲಾಗಿದೆ.

ಕುಡಿಯುವ ನೀರಿಗೆ ಪರಿಹಾರ

ಪ್ರತಿವರ್ಷ ಬೀಸಿಗೆಯಲ್ಲಿ ಮಾರ್ಚ್ ಕಳೆದು ಏಪ್ರಿಲ್ ತಿಂಗಳ ಆರಂಭವಾಗುವ ಮೊದಲೇ ಕುಡಿಯುವ ನೀರಿಗಾಗಿ ಹಾಹಾಕಾರ, ಖಾಲಿ ಕೊಡಗಳ ಪ್ರದರ್ಶನ ಹಾಗೂ ಪ್ರತಿಭಟನೆ ನಡೆಯುತ್ತಿದ್ದ ದೃಶ್ಯಗಳು ಈ ಬಾರಿ ಕಂಡು ಬರಲಿಲ್ಲ. ಕೆಲವು ಗ್ರಾಮಗಳಲ್ಲಿ ತೋಟದ ವಸತಿಗಳನ್ನು ಹೊರತುಪಡಿಸಿದರೇ ಬಹುತೇಕ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದು ಗಂಭೀರವಾಗಿರಲಿಲ್ಲ. ಏಕೆಂದರೆ ಕಳೆದ ಬಾರಿ ಉತ್ತಮ ಮಳೆ ಸುರಿದ ಪರಿಣಾಮ ಕೆರೆಕಟ್ಟೆಗಳು, ಬಾವಿ ಕೊಳವೆ ಬಾವಿಗಳಲ್ಲಿ ನೀರು ಚೆನ್ನಾಗಿ ಸಂಗ್ರಹವಾಗಿತ್ತು. ಅಲ್ಲದೇ ಕೆರೆಯಲ್ಲಿ ನೀರು ಬತ್ತುವ ಮೊದಲೇ ಕೆರೆ ತುಂಬುವ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸಿದ ಪರಿಣಾಮ ಅಂತರ್ಜಲ ಹೆಚ್ಚಳವಾಗಿದೆ.

ಜೆಜೆಎಂ ಯೋಜನೆಗೂ ಸಹಕಾರಿ

ಕೇಂದ್ರದ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೂ ನೀರು ಒದಗಿಸುವ ಯೋಜನೆಗೂ ಈ ಕೆರೆ ತುಂಬುವ ಯೋಜನೆ ಬಹಳಷ್ಟು ಸಹಕಾರಿಯಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಾಹಿತಿ ಪ್ರಕಾರ ತಾಲೂಕಿನ 88 ಗ್ರಾಮಗಳಲ್ಲಿ ಶೇ.80 ರಷ್ಟು ಜೆಜೆಎಂ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗಿದೆ. 72,332 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಯೋಜನೆಯಲ್ಲಿ ಈಗಾಗಲೇ 58,230 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ.

ಬೋರವೆಲ್‌ ಕೊರೆತ ಇಳಿಮುಖ

ಪ್ರತಿ ವರ್ಷ ಬೇಸಿಗೆಯ ಕಾಲದಲ್ಲಿ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಎದುರಾಗುವ ನೀರಿನ ಸಮಸ್ಯೆಗೆ ಅಲ್ಲಲ್ಲಿ ಬೋರವೆಲ್‌ ಕೊರೆಸುವ ಪ್ರಮಾಣ ಹೆಚ್ಚಾಗಿತ್ತು. ಆದರೆ, ಈ ಬಾರಿ ಅಷ್ಟೊಂದು ನೀರಿನ ಸಮಸ್ಯೆ ಎದುರಾಗದ ಹಿನ್ನೆಲೆಯಲ್ಲಿ ಬೋರವೆಲ್‌ ಹಾಕಿಸುವವರ ಸಂಖ್ಯೆಯೂ ಕೂಡ ಇಳಿಮುಖವಾಗಿದೆ.

ರವೀಂದ್ರ ಮುರಗಾಲಿ, ಸಹಾಯಕ ಅಭಿಯಂತ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಅಥಣಿ.

ಅಥಣಿ ತಾಲೂಕಿನ 88 ಗ್ರಾಮಗಳಲ್ಲಿ ಶೇ. 80 ರಷ್ಟು ಜೆಜೆಎಂ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. 72,332 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಯೋಜನೆಯಲ್ಲಿ ಈಗಾಗಲೇ 58,230 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಕೃಷ್ಣ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಕೂಡ ಕೆರೆ ತುಂಬುವ ಯೋಜನೆ, ಕರಿ ಮಸೂತಿ ಏತ ನೀರಾವರಿ, ಬಹುಗ್ರಾಮ ಸಂಯುಕ್ತ ಕುಡಿಯುವ ನೀರಿನ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಇದು ನೆರವಾಗಿದೆ.

ಪ್ರವೀಣ್ ಪಾಟೀಲ, ಕಾರ್ಯನಿರ್ವಾಹಕ ಅಭಿಯಂತರ, ಚಿಕ್ಕ ನೀರಾವರಿ ಇಲಾಖೆ ಅಥಣಿ.

ಚಿಕ್ಕ ನೀರಾವರಿ ಯೋಜನೆಯ ಮೂಲಕ ತಾಲೂಕಿನ ಪೂರ್ವ ಭಾಗದ 7 ಗ್ರಾಮಗಳ 9 ಕೆರೆಗಳಿಗೆ ಪೈಪ್ ಲೈನ್ ಮೂಲಕ ಕೃಷ್ಣಾ ನದಿ ನೀರನ್ನು ತುಂಬಿಸಲಾಗಿದೆ. ಇದರಿಂದ ಪ್ರಸಕ್ತ ವರ್ಷದಲ್ಲಿ ತೋಟಗಾರಿಕೆ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗೆ ನೆರವಾಯಿತು.

PREV
Read more Articles on
click me!

Recommended Stories

Bengaluru NICE road accident: ರಸ್ತೆ ಅಪಘಾತದಲ್ಲಿ ಅರ್ಧದೇಹ ಸಿಕ್ಕಿದೆ, ಗುರುತು ಸಿಕ್ಕಿಲ್ಲ! ಪೊಲೀಸರಿಗೆ ತಲೆನೋವಾದ ಪ್ರಕರಣ!
ಬೆಂಗಳೂರು ರಸ್ತೆ ಗುಂಡಿ ಮುಚ್ಚೋದು ರಾಕೆಟ್ ಸೈನ್ಸಾ? ಜಿಬಿಎ ಅಧಿಕಾರಿಗಳ ಮೇಲೆ ಗುಡುಗಿದ ಸಚಿವ ಕೃಷ್ಣ ಬೈರೇಗೌಡ