
ಬೆಳಗಾವಿ (ಮೇ.26) ಹೂಡಿಕೆ ಮೂಲಕ ಬರೋಬ್ಬರಿ 4500 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಬೆಳಗಾವಿಯ ಶಿವಂ ಅಸೋಸಿಟೇಟ್ ಮಾಲೀಕ ಶಿವಾನಂದ ನೀಲಣ್ಣವರ್ ಸಂಕಷ್ಟ ಹೆಚ್ಚಾಗಿದೆ. ತನಿಖೆ ತೀವ್ರಗೊಳಿಸಿರುವ ಪೊಲೀಸರು ಇದೀಗ ಶಿವಾನಂದನ ನೀಲಣ್ಣನವರ್ ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಮತ್ತೊಂದೆಡೆ ಸಿಐಡಿ ಕಸ್ಟಡಿಯಲ್ಲಿ ಶಿವಾನಂದ ನೀಲಣ್ಣನವರ್ ಸತತ ವಿಚಾರಣೆ ಎದುರಿಸುತ್ತಿದ್ದಾರೆ. ಜೊತೆಗೆ ಶಿವಾನಂದ ನೀಲಣ್ಣನವರ್ ಜೊತೆಗೆ ವ್ಯವಹರಿಸಿದ್ದ ಕೆಲವರಿಗೂ ನೋಟಿಸ್ ನೀಡಲಾಗಿದೆ.
ಪೊಲೀಸ್ ಕಸ್ಟಡಿಯಲ್ಲಿರುವ ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ ನಾಲ್ಕು ಐಷಾರಾಮಿ ಕಾರುಗಳನ್ನು ಸೀಜ್ ಮಾಡಲಾಗಿದೆ. ಲ್ಯಾಂಡ್ ರೂವರ್ ಡಿಫೆಂಡರ್, ಟೊಯೋಟಾ ವೆಲ್ಫೈ, ಮರ್ಸಿಡಿಸ್ ಎಎಂಜಿ ಕಾರುಗಳನ್ನು ಸೀಜ್ ಮಾಡಲಾಗಿದೆ.
ಶಿವಾನಂದ ನೀಲಣ್ಣನವರ್ ಐಷಾರಾಮಿ ಕಾರುಗಳ ಜೊತೆಗೆ ಪತ್ನಿ ಬಳಸುತ್ತಿದ್ದ ಹ್ಯುಂಡೈ ವರ್ನಾ ಕಾರು ಸೀಜ್ ಮಾಡಲಾಗಿದೆ. ಮಹಜರು ಹಾಗೂ ತನಿಖೆ ಕಾರಣದಿಂದ ಸಿಐಡಿ ಪೊಲೀಸರು ಶಿವಾನಂದ ನೀಲಣ್ಣನವರ್ ಅವರನ್ನು ಶಿವಬಸವ ನಗರದ ನಿವಾಸಕ್ಕೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಐಷಾರಾಮಿ ಕಾರುಗಳನ್ನು ಸೀಜ್ ಮಾಡಿದ್ದಾರೆ.
ಇದೇ ವೇಳೆ ಪೊಲೀಸರು ಶಿವಾನಂದ ನೀಲಣ್ಣನವರ್ ಜೊತೆ ಸಂಪರ್ಕದಲ್ಲಿದ್ದ ಜೊತೆಗೆ ಕೆಲ ವ್ಯವಹಾರದಲ್ಲಿ ಕೈಜೋಡಿಸಿದವರಿಗೆ ನೋಟಿಸ್ ನೀಡಲಾಗಿದೆ. ಇದೇ ವೇಳೆ ಕರವೇ ಜಿಲ್ಲಾಧ್ಯಕ್ಷ ಅಭಿಲಾಷ್‌ಗೆ ನೀಡಿದ್ದ ಕಾರನ್ನು ಪೊಲೀಸರು ಸೀಜ್ ಮಾಡಲಾಗಿದೆ.
ಶಿವಾನಂದ ನೀಲಣ್ಣವರ್ ಮನೆಯಲ್ಲಿ ಪೊಲೀಸರು ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ಹಲವು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಕೆಲ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಇತ್ತ ಸೀಜ್ ಮಾಡಿದ ಕಾರುಗಳನ್ನು ಪೊಲೀಸರು ಮಾಳಮಾರುತಿ ಠಾಣೆ ಕರೆದೊಯ್ದಿದ್ದಾರೆ.
ಶಿವಾನಂದ ನೀಲಣ್ಣನವರ್ ಅರೆಸ್ಟ್ ಮಾಡಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ವೇಳೆ ಹೆಚ್ಚಿನ ವಿಚಾರಣೆಗೆ ತಮಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಇದರಂತೆ 10 ದಿನಗಳ ಕಾಲ ಸಿಐಡಿಗೆ ಕಸ್ಟಡಿಗೆ ನೀಡಲಾಗಿದೆ. ಮೇ.27ರ ಸಂಜೆ 4 ಗಂಟೆಯೊಳಗೆ ಮತ್ತೆ ಕೋರ್ಟ್‌ಗೆ ಹಾಜರುಪಡಿಸಲು ಸೂಚಿಸಿದೆ.