ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಈ ಜನರಿಗೆ ಅಗತ್ಯ ವಸತಿ ಮತ್ತು ಊಟೋಪಹಾರ ಒದಗಿಸಲು ಅನುಕೂಲವಾಗುವಂತೆ ಉಗರಗೋಳ ಗ್ರಾಮಸ್ಥರು ಹೋಮ್ ಸ್ಟೇ ಆರಂಭಿಸಬೇಕು. ಉಗರಗೋಳ ಗ್ರಾಮದ ಜನರು ಹೋಮ್ ಸ್ಟೇ ಮಾಡಲು ಅರ್ಜಿ ಸಲ್ಲಿಸಿದರೆ ಒಂದೇ ವಾರದಲ್ಲಿ ಹೋಮ… ಸ್ಟೇ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಬೆಳಗಾವಿ (ನ.20): ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಈ ಜನರಿಗೆ ಅಗತ್ಯ ವಸತಿ ಮತ್ತು ಊಟೋಪಹಾರ ಒದಗಿಸಲು ಅನುಕೂಲವಾಗುವಂತೆ ಉಗರಗೋಳ ಗ್ರಾಮಸ್ಥರು ಹೋಮ್ ಸ್ಟೇ ಆರಂಭಿಸಬೇಕು. ಉಗರಗೋಳ ಗ್ರಾಮದ ಜನರು ಹೋಮ್ಸ್ಟೇ ಮಾಡಲು ಅರ್ಜಿ ಸಲ್ಲಿಸಿದರೆ ಒಂದೇ ವಾರದಲ್ಲಿ ಹೋಮ್ ಸ್ಟೇ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಜನರ ಬಾಗಿಲಿಗೆ ಆಡಳಿತವನ್ನು ಕೊಂಡೊಯ್ದು ಸ್ಥಳೀಯವಾಗಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬದ ಆಶಯದಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಶನಿವಾರ ಸವದತ್ತಿ ತಾಲೂಕಿನ ಉಗರಗೋಳ ಕ್ಕೆ (Village) ಭೇಟಿ ನೀಡಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು. ಬೆಳಿಗ್ಗೆ(Savadatti) ಯಲ್ಲಮ್ಮ ದೇವಿಯ ದರ್ಶನವನ್ನು ಪಡೆದುಕೊಂಡು ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಬಸವೇಶ್ವರ ವೃತ್ತದ ಬಳಿ ಗ್ರಾಮಸ್ಥರು ಪ್ರೀತಿಯಿಂದ ಬರಮಾಡಿಕೊಂಡರು. ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ಡೊಳ್ಳಿನ ಮೇಳದವರು ಮೆರವಣಿಗೆಯ ಮೂಲಕ ಕಾರ್ಯಕ್ರಮದ ವೇದಿಕೆ ಇರುವ ರೇ.ಹ.ಹಳಮನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯವರೆಗೆ ಕರೆದುಕೊಂಡು ಹೋದರು.
undefined
ಗ್ರಾಮದಲ್ಲಿ ಇರುವ ತಮ್ಮ ಮನೆಯ ಒಂದು ಭಾಗ ಅಥವಾ ತೋಟದ ಮನೆಗಳನ್ನು ಹೋಮ… ಸ್ಟೇಗಳನ್ನಾಗಿ ಪರಿವರ್ತಿಸಿಕೊಂಡು ನಿರಂತರ ಆದಾಯ ಪಡೆದುಕೊಳ್ಳಬಹುದು. ಯಲ್ಲಮ್ಮ ದೇವಸ್ಥಾನಕ್ಕೆ ಆಗಮಿಸುವ ಲಕ್ಷಾಂತರ ಜನರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗುವಂತೆ ಹೋಮ… ಸ್ಟೇ ಉದ್ಯಮವನ್ನು ಪೋ›ತ್ಸಾಹಿಸಲಾಗುವುದು ಎಂದು ಡಿಸಿ ತಿಳಿಸಿದರು.
300 ಜನರಿಗೆ ನಿವೇಶನ ಒದಗಿಸಲು ಕ್ರಮ:
ಉಗರಗೋಳ ಗ್ರಾಮದ ಒಟ್ಟು 299 ಜನರಿಗೆ ನಿವೇಶನ ಇಲ್ಲ. ಆದ್ದರಿಂದ ಇವರಿಗೆ ನಿವೇಶನ ಒದಗಿಸಲು ಗ್ರಾಮದ ಸಮೀಪದಲ್ಲಿ ಹತ್ತು ಎಕರೆ ಗುರುತಿಸಬೇಕು. ಗ್ರಾಮ ಪಂಚಾಯತಿಯಿಂದ ಜಮೀನು ಕೋರಿ ಠರಾವು ಪಾಸ್ ಕಳಿಸಿದರೆ ಆಶ್ರಯ ಯೋಜನೆಯಡಿ ಗ್ರಾಪಂಗೆ ಹತ್ತು ಎಕರೆ ಜಮೀನು ಒದಗಿಸಬಹುದು. ಗ್ರಾಮದ ಜನರು ಎಲ್ಲರೂ ಸಂಘಟಿತರಾಗಿ ಈ ಪ್ರಯತ್ನ ಮಾಡಿದರೆ ಎಲ್ಲರಿಗೂ ನಿವೇಶನ ಸಿಗಲಿದೆ ಎಂದು ಪಾಟೀಲ ಹೇಳಿದರು. ಉಗರಗೋಳ, ಹರ್ಲಾಪುರ, ಯಲ್ಲಮ್ಮಾ$ತಾಂಡಾ ಹೀಗೆ ಎಲ್ಲೆ ಸರಕಾರಿ ಜಮೀನು ಲಭ್ಯವಿದ್ದರೂ ಅದನ್ನು ಗುರುತಿಸಿ ನಿವೇಶನ ಒದಗಿಸಲಾಗುವುದು ಎಂದರು.
ಎನ್.ಎ. ಹಾಗೂ ಕೆ.ಜೆ.ಪಿ. ಪಡೆಯದೇ ನಿವೇಶನಗಳನ್ನು ಮಾರಾಟ ಮಾಡಿರುವುದು ಕಂಡುಬಂದರೆ ಅಂತಹವರಿಗೆ ನೋಟಿಸ್ ನೀಡಿ, ಆ ಜಾಗೆಯನ್ನು ಸರಕಾರದ ವಶಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದರು. ಸರಕಾರಿ ಜಮೀನುಗಳಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರು 94ಸಿ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅಂತಹ ಮನೆಗಳನ್ನು ಸಕ್ರಮಗೊಳಿಸಬಹುದು ಎಂದರು.
ದೇವಿವನ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ:
ದೇವಿವನಕ್ಕೆ ಭೇಟಿ ನೀಡಿ ದೇವಿವನದ ಕೀಲಿಯನ್ನು ತೆಗೆದು ಸಾರ್ವಜನಿಕ ದರ್ಶನಕ್ಕೆ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ. ಗೃಹರಕ್ಷಕರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಮುಂಬರುವ ದಿನಗಳಲ್ಲಿ ದೇವಿವನದ ಬಳಿಯೂ ಮಳಿಗೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಸವದತ್ತಿ ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ಇರುವ 250 ಮಳಿಗೆಗಳನ್ನು ಕೂಡ ಇಂದು ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ. ದೇವಸ್ಥಾನದ ಸಾವಿರ ಎಕರೆಯಲ್ಲಿ ಭಕ್ತಾದಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಅವಕಾಶಗಳಿವೆ. ಅನಧಿಕೃತ ಅಂಗಡಿಗಳನ್ನು ಅಧಿಕೃತಗೊಳಿಸಿ ಹರಾಜು ಮಾಡಲಾಗುತ್ತಿದೆ. ಇದರಿಂದ ದೇವಸ್ಥಾನದ ಆದಾಯ… ಹೆಚ್ಚಿಸುವುದರ ಜತೆಗೆ ಭಕ್ತಾಧಿಗಳಿಗೆ ಮೂಲಸೌಕರ್ಯ ಒದಗಿಸುವುದು ಸಾಧ್ಯವಾಗಲಿದೆ. ಈ ವ್ಯಾಪಾರ ಮಳಿಗೆಗಳನ್ನು ಉಗರಗೋಳ ಗ್ರಾಮದ ಜನರಿಗೂ ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಜಿಪಂ ಸಿಇಒ ದರ್ಶನ, ಉಪ ವಿಭಾಗಾಧಿಕಾರಿ ಶಶಿಧರ ಬಗಲಿ, ಗ್ರಾಪಂ ಅಧ್ಯಕ್ಷೆ ಜುಬೇದಾ ಬೇಗಂ ಬಾರಿಗಿಡದ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ, ಸಿಪಿಐ ಕರುಣೇಶ ಗೌಡ, ತಹಸೀಲ್ದಾರ್ ಜಕ್ಕನಗೌಡ್ರ ಮತ್ತಿತರರು ಉಪಸ್ಥಿತರಿದ್ದರು.
ಬಾರ್ ಬಂದ್‌ಗೆ ಮಹಿಳೆಯರ ಆಗ್ರಹ
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಕಾರಿನಿಂದಿಳಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲರು ನೇರವಾಗಿ ಪಕ್ಕದಲ್ಲೇ ಇರುವ ಆನಂದ ಬ್ರ್ಯಾಂಡಿ ಶಾಪ್‌ಗೆ ತೆರಳಿ ಲೈಸೆನ್ಸ್, ಲಭ್ಯವಿರುವ ಮದ್ಯದ ಸಂಗ್ರಹ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲನೆ ಕೈಗೊಂಡರು. ಜಿಲ್ಲಾಧಿಕಾರಿ ಬಸವೇಶ್ವರ ವೃತ್ತದಲ್ಲಿ ಇರುವ ಆನಂದ ಬ್ರ್ಯಾಂಡಿ ಅಂಗಡಿ ಮತ್ತು ಲಕ್ಷ್ಮೀ ಬಾರ್ ಮತ್ತು ರೆಸ್ಟೋರೆಂಟ್‌ಗೆ ಸ್ವತಃ ತೆರಳಿ ಪರಿಶೀಲನೆ ಕೈಗೊಂಡರು. ಖುದ್ದಾಗಿ ಕೆಲವು ಮದ್ಯದ ಬಾಟಲ…ಗಳನ್ನು ತೆಗೆದುಕೊಂಡು ಅವುಗಳ ಗುಣಮಟ್ಟಪರಿಶೀಲಿಸುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜತೆ ಆಗಮಿಸಿದ ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಗ್ರಾಮದಲ್ಲಿರುವ ಮದ್ಯ ಮಾರಾಟ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಆಗ್ರಹಿಸಿದರು. ಗ್ರಾಮಸ್ಥರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಸದ್ಯಕ್ಕೆ ಮದ್ಯದ ಅಂಗಡಿಗಳನ್ನು ಸ್ಥಗಿತಗೊಳಿಸಲಾಗಿದ್ದು, ನಿಯಮಗಳ ಉಲ್ಲಂಘನೆ ಕುರಿತು ಕೂಲಂಕುಶವಾಗಿ ಪರಿಶೀಲನೆ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಸಾರ್ವಜನಿಕರಿಂದ ಆಹ್ವಾಲು ಸ್ವೀಕಾರ
ಬೆಳೆ ಸಾಗಾಣಿಕೆಗೆ ಹೊಲದ ರಸ್ತೆ, ಹಳ್ಳದ ರಸ್ತೆ ನಿರ್ಮಾಣ, ಅಡುಗೆ ಸಿಬ್ಬಂದಿ ವೇತನ ಹೆಚ್ಚಳ, ಜಮೀನು ಒತ್ತುವರಿ ಮಾಡಿ ಜನತಾ ಮನೆ ನಿರ್ಮಾಣ, ಜನತಾ ಮನೆ ಮಂಜೂರು ಅರ್ಜಿ, ಅಂಗವಿಕಲರ ಮಾಸಾಶನ, ಶಾಲಾ ಅವಧಿಯಲ್ಲಿ ಹೆಚ್ಚುವರಿ ಬಸ್ ಸಂಚಾರ, ಯಲ್ಲಮ್ಮ ತಾಂಡಾಗೆ ಸ್ಮಶಾನಭೂಮಿ ಮಂಜೂರಾತಿ ಮತ್ತಿತರ ವಿಷಯಗಳ ಕುರಿತು ಜನರು ಅಹವಾಲು ಸಲ್ಲಿಸಿದರು. ಕಂದಾಯ, ಪಶುಸಂಗೋಪನೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತಿತರ ಇಲಾಖೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಆಲಿಸಲಾಯಿತು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನು ಸೂಚಿಸಿದರು. ಪಹಣಿಯಲ್ಲಿ ಕರ್ನಾಟಕ ನೀರಾವರಿ ನಿಗಮ ಅಂತ ತಪ್ಪಾಗಿ ನಮೂದಾಗಿರುವುದನ್ನು ಸರಿಪಡಿಸಲಾಗಿರುತ್ತದೆ. ರೈತರು ಪರಿಷ್ಕೃತ ಪಹಣಿಗಳನ್ನು ಪಡೆದುಕೊಳ್ಳಬಹುದು ಎಂದು ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ ಬಗಲಿ ತಿಳಿಸಿದರು.
ಹಳ್ಳದ ಹೂಳು ತೆಗೆಯಲು ಸೂಚನೆ:
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ ಮಾತನಾಡಿ, ನರೇಗಾ ಯೋಜನೆಯಡಿ ಹಳ್ಳದ ಹೂಳು ತೆಗೆಯುವ ಕಾಮಗಾರಿಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಲ್ಲದೇ ನಿವೇಶನ ಹೊಂದಿ ಮನೆಗಳು ಇಲ್ಲದಿರುವವರ ಪಟ್ಟಿಯನ್ನು ಜಿಪಂಗೆ ಕಳುಹಿಸಿಕೊಡುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿದಂತೆ ವಿವಿಧ ಬಗೆಯ ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಆದೇಶಪತ್ರಗಳನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ವಿತರಿಸಿದರು. ಪಿಂಚಣಿ ಸಿಗದ ಅರ್ಹರು ಅರ್ಜಿಯನ್ನು ಸಲ್ಲಿಸಿದರೆ 24 ಗಂಟೆಗಳಲ್ಲಿ ಆದೇಶಪತ್ರವನ್ನು ನೀಡಲಾಗುವುದು ಎಂದು ತಿಳಿಸಿದರು. ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ಸೈಕಲ… ವಿತರಿಸಿದರು. ಕಾರ್ಯಕ್ರಮ ಆರಂಭಕ್ಕೂ ಮುಂಚೆ ಶಾಲಾ ಆವರಣದಲ್ಲಿ ಸಸಿ ನೆಟ್ಟರು.