Corona Effect ಬೆಳಗಾವಿಯ 9 ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿಷೇಧ, ಅಂಬಾಮಠ ಜಾತ್ರೆ ರದ್ದು

By Suvarna NewsFirst Published Jan 6, 2022, 10:46 PM IST
Highlights

* ದೇವಸ್ಥಾನಗಳಿಗೂ ಕಂಟಕವಾದ ಕೊರೋನಾ ವೈರಸ್
* ಬೆಳಗಾವಿಯ 9 ಪ್ರಮುಖ ದೇವಸ್ಥಾನಗಳಿಗೆ ಸಾರ್ವಜನಿಕ ಪ್ರವೇಶ ನಿಷೇಧ
* ಬೆಳಗಾವಿ ಜಿಲ್ಲಾಧಿಕಾರಿ ಆದೇಶ

ಬೆಳಗಾವಿ, (ಜ.06) : ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನ ಕೈಗೊಂಡಿದೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ (Weeked Curfew) ಜಾರಿ ಮಾಡಿದೆ.

ಅದರಲ್ಲೂ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ (Belagavi) ದೇವಸ್ಥಾನಗಳಿಗೆ ಟಫ್ ರೂಲ್ಸ್ ಜಾರಿಯಾಗಿದೆ. ಬೆಳಗಾವಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಒಂಬತ್ತು ಪ್ರಮುಖ ದೇವಸ್ಥಾನಗಳನ್ನು (Temples) ಮುಂದಿನ ಆದೇಶದವರೆಗೆ ಸಾರ್ವಜನಿಕ ದರ್ಶನ ನಿಷೇಧಿಸಿ ಜಿಲ್ಲಾಧಿಕಾರಿ ಗಳು ಆದೇಶ ಹೊರಡಿಸಿದ್ದಾರೆ.

Corona Update ಕರ್ನಾಟಕದಲ್ಲಿ ಕೊರೋನಾ ಬ್ಲಾಸ್ಟ್, ಬೆಂಗಳೂರು ಕೋವಿಡ್ ಹಾಟ್‌ಸ್ಪಾಟ್

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ,ಚಿಂಚಲಿ ಮಾಯಕ್ಕ, ರಾಮದುರ್ಗದ ವೀರಭದ್ರೇಶ್ವರ, ಸವದತ್ತಿಯ ಜೋಗುಳಭಾವಿ ದೇವಸ್ಥಾನ, ಹುಕ್ಕೇರಿ ಯ ಬಡಕುಂದ್ರಿಯ ಹೊಳೆಮ್ಮ ದೇವಸ್ಥಾನ, ಅಥಣಿಯ ಕೊಕಟನೂರ ಯಲ್ಲಮ್ಮ ದೇವಸ್ಥಾನ ಸೇರಿದಂತೆ ಒಟ್ಟು ಒಂಬತ್ತು ದೇವಸ್ಥಾನಗಳಲ್ಲಿ ಸಾರ್ವಜನಿಕರ ದರ್ಶನ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಈ ದೇವಾಲಯಗಳಿಗೆ ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಬರುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ. ಕೋವಿಡ್ ಮೊದಲನೇ ಹಾಗೂ 2ನೇ ಅಲೆಯ ಸಂದರ್ಭದಲ್ಲೂ ಈ ಕ್ರಮ ಕೈಗೊಳ್ಳಲಾಗಿತ್ತು.

ಕೋವಿಡ್-19 ಮತ್ತು ಓಮೈಕ್ರಾನ್‌ ಹರಡುವಿಕೆ ನಿಯಂತ್ರಿಸಲು ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ಉದ್ದೇಶದಿಂದ ಕೈಗೊಂಡಿರುವ ಮುಂಜಾಗ್ರತಾ ಕ್ರಮ ವಹಿಸಲಾಗಿದೆ' ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ನಿಗದಿಯಾಗಿರುವ ಎಲ್ಲ ಧರ್ಮೀಯರ ಜಾತ್ರೆ, ವಿಶೇಷ ಉತ್ಸವ ಹಾಗೂ ಧಾ‌ರ್ಮಿಕ ಕಾರ್ಯಕ್ರಮಗಳನ್ನು ನಿರ್ಬಂಧಿಸಿದೆ. ದೇವಾಲಯದ ಆಡಳಿತ ಮಂಡಳಿಯವರು, ಅರ್ಚಕರು ಮತ್ತು ಸಿಬ್ಬಂದಿ ಸೇರಿ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಪ್ರಾಂಗಣದೊಳಗೆ ನಡೆಸುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ 188ರ ಪ್ರಕಾರ ಕ್ರಮ ಜರುಗಿಸಲಾಗುವುದು' ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಸಿದ್ಧ ಅಂಬಾಮಠ ಜಾತ್ರೆ ರದ್ದು
ರಾಯಚೂರು: ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾಮಠ ಜಾತ್ರೆ ರಥೋತ್ಸವ ಸಂಪೂರ್ಣ ರದ್ದುಗೊಳಿಸಲಾಗಿದೆ.

 ಕಲ್ಯಾಣ ಕರ್ನಾಟಕ ಭಾಗದಲ್ಲೇ ಈ ಜಾತ್ರೆ ಪ್ರಸಿದ್ಧಿ ಪಡೆದುಕೊಂಡಿದೆ. ಇದೇ ಜನವರಿ 17 ರಂದು ನಡೆಯಬೇಕಿದ್ದ ಜಾತ್ರಾ ಮಹೋತ್ಸವವನ್ನು ರದ್ದು ಮಾಡಲಾಗಿದೆ. ಸುಮಾರು 5 ಲಕ್ಷದಷ್ಟು ಭಕ್ತರು ಪ್ರತಿವರ್ಷ ಜಾತ್ರೆಗೆ ಆಗಮಿಸುತ್ತಿದ್ದರು. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದ ಜಾತ್ರೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸಾಧುಗಳು ಸೇರುತ್ತಿದ್ದರು. ಇದೀಗ ಕೊರೊನಾ ಹರಡುವಿಕೆ ಸಾಧ್ಯತೆ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ.

ಕಳೆದ ಬಾರಿಯೂ ಕೊರೋನಾ ಹಿನ್ನೆಲೆ ಜಾತ್ರೆ ರದ್ದಾಗಿತ್ತು. ತಾಲೂಕಿನ ಭಕ್ತರು, ಸುತ್ತಮುತ್ತಲಿನ ಗ್ರಾಮಸ್ಥರು ಸಹ ಸೇರಿದಂತೆ ಸಿಂಧನೂರು ತಹಶೀಲ್ದಾರ್ ಮಂಜುನಾಥ್ ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದಾರೆ. ಕೋವಿಡ್ ಹಿನ್ನೆಲೆ ಜಾತ್ರೆಗೆ ಬರದಂತೆ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಭಕ್ತರಲ್ಲಿ ಮನವಿ ಮಾಡಿದೆ.

click me!