* ಕೊರೋನಾ ಕಾರಣಕ್ಕೆ ಎಚ್ಚರಿಕೆ ಹೆಜ್ಜೆ
* ರಾಮನಗರದಲ್ಲಿ ನಿಷೇಧಾಜ್ಞೆ ಜಾರಿ
* ಮೇಲೆದಾಟು ಪಾದಯಾತ್ರೆಗೆ ಬ್ರೇಕ್ ಹಾಕಲು ಕ್ರಮವೇ?
* ಇವುಗಳಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದ ಸಿದ್ದರಾಮಯ್ಯ
ರಾಮನಗರ(ಜ. 06) ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು ರಾಜ್ಯದಲ್ಲಿ ವಾರಾಂತ್ಯದ ನಿಷೇಧಾಜಞೆ ಜಾರಿ ಮಾಡಿದೆ. ಹೆಚ್ಚಿನ ಕ್ರಮ ತೆಗೆದುಕೊಳ್ಳಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಈ ನಡುವೆ ರಾಜಕಾರಣದ ಬಿಸಿಗೂ ಕಾರಣವಾಗಿರುವ ರಾಮನಗರ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ ಮಾಡಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ರಾಮದೇವರಬೆಟ್ಟ, ರೇವಣಸಿದ್ದೇಶ್ವರ ಬೆಟ್ಟ, ಕಣ್ವ ಜಲಾಶಯ, ಮಂಚನಬೆಲೆ, ಸಾವನದುರ್ಗ, ಸಂಗಮ, ಮೇಕೆದಾಟು, ಚುಂಚಿ ಫಾಲ್ಸ್ ಗಳಿಗೆ ನಿರ್ಬಂಧ ಹೇರಿದ್ದು ರಾಮನಗರ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದ ಸಂಗಮದಲ್ಲಿಯೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮೇಕೆದಾಟು ಪಾದಯಾತ್ರೆ ಕುರಿತು ಅಗ್ರ ನಾಯಕರ ನಡುವೆ ಕಿತ್ತಾಟ ನಡೆಯುತ್ತಲೇ ಇದೆ.
ಕಮಲ-ಕೈ ಜಟಾಪಟಿ: ಕಾಂಗ್ರೆಸ್ ಜ. 9 ರಿಂದ ಮೇಕೆದಾಟು ಪಾದಯಾತ್ರೆಗೆ ಸಿದ್ಧತೆ ಮಾಡಿಕೊಂಡಿದೆ. ಸಿದ್ದರಾಮಯ್ಯ ಪಾದಯಾತ್ರೆಗೆ ಎಂದೇ ವಿಶೇಷ ಶೂಗಳನ್ನು ಖರೀದಿ ಮಾಡಿದ್ದಾರೆ. ಇನ್ನೊಂದು ಕಡೆ ಡಿಕೆ ಶಿವಕುಮಾರ್ ಇದನ್ನು ಪಾದಯಾತ್ರೆ ಎಂದು ಹೇಳಬೇಡಿ ನಮ್ಮದು ನಡಿಗೆ ಹೋರಾಟ ನಿಲ್ಲುವುದಿಲ್ಲ ಎಂದಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ನಿಷೇಧಾಜ್ಷೆ ಎಂದರೆ ನಾಲ್ಕು ಜನ ಸೇರಬಾರದು ಅಂತ ನಿಯಮ ಅಲ್ಲವೇ? ಆಯ್ತು ನಾವು ಇಬ್ಬರೇ ಹೆಜ್ಜೆ ಹಾಕುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ವೇದಿಕೆಯಲ್ಲೇ ಜಟಾಪಟಿ: ರಾಮನಗರದಲ್ಲಿ ನಡೆದ ಕಾರ್ಯಕ್ರಮದ ವೇಳೆ ಸಚಿವ ಡಾ. ಅಶ್ವತ್ಥ ನಾರಾಯಣ ಮತ್ತು ಸಂಸದ ಡಿಕೆ ಸುರೇಶ್ ನಡುವೆ ವೇದಿಕೆಯಲ್ಲೇ ನಡೆದ ಕಿತ್ತಾಟ ದೊಡ್ಡ ಸುದ್ದಿಯಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿಯೇ ನಾಯಕರು ಕಿತ್ತಾಡಿಕೊಂಡಿದ್ದರು. ರಾಮನಗರ ಅಭಿವೃದ್ಧಿ ಮಾಡಿದ್ದು ಯಾರು? ಎಂದು ಸವಾಲು ಹಾಕಿಕೊಂಡಿದ್ದರು. ಇದಕ್ಕೆ ಎಚ್‌ಡಿ ಕುಮಾರಸ್ವಾಮಿ ತಣ್ಣನೆಯ ಪ್ರತಿಕ್ರಿಯೆ ಕೊಟ್ಟಿದ್ದರು.
ರಾಜ್ಯದಲ್ಲಿ ಏನೆಲ್ಲ ಬಿಗಿ ಕ್ರಮ: ರಾಜ್ಯದಲ್ಲಿ ಕೊರೋನಾ (Corona) ಜೊತೆಗೆ ಒಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸರ್ಕಾರ ರೂಪಿಸಿದ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ರಾಜ್ಯದಲ್ಲಿ ಸದ್ಯ ವೀಕೆಂಡ್ ಹಾಗು ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಬಾರ್, ಪಬ್, ಹೋಟೆಲ್ (Hotel), ರೆಸ್ಟೊರೆಂಟ್‌ಗಳನ್ನು ಹಾಗೂ ರೆಸಾರ್ಟ್‌ಗಳನ್ನು ವೀಕೆಂಡ್ ಕರ್ಫ್ಯೂ ವೇಳೆ ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಷ್ಟಾಬ್ಲಿಷ್‌ಮೆಂಟ್ ಆಕ್ಟ್ 2007 ಅನ್ವಯ ಮುಚ್ಚಿಸಬೇಕೆಂದು ಆದೇಶಿಸಲಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಗಳವರೆಗೆ ಮುಚ್ಚಿಸಬೇಕೆಂದು ಸೂಚಿಸಲಾಗಿದೆ. ಸಂಕ್ರಾಂತಿ ನಂತರ ತೆರವಾಗುವ ಸಾಧ್ಯತೆ ಇದೆ.
ಪ್ರಾಣ ಹೋದರೂ ಪರವಾಗಿಲ್ಲ, ನಾವಿಬ್ಬರೆ ನಡೆಯುತ್ತೇವೆ
ರಾಜ್ಯದಲ್ಲಿ 2 ವಾರ ವೀಕೆಂಡ್ ಕರ್ಫ್ಯೂ : ರಾಜ್ಯದಲ್ಲಿ ಕೊರೋನಾ ವೈರಸ್(Coronavrius) ಪ್ರಮಾಣ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ. ಅಲ್ಲದೇ ಬೆಂಗಳೂರಲ್ಲಿ ಮಾತ್ರ ಶಾಲೆಗಳನ್ನ ಎರಡು ವಾರ ಬಂದ್ ಮಾಡಲು ಸರ್ಕಾರ ತೀರ್ಮಾನಿಸಿದೆ.
ಇಂದು(ಮಂಗಳವಾರ) ತಜ್ಞರ ಜೊತೆಗಿನ ಸಭೆ ಬಳಿಕ ಸಚಿವರಾದ ಅಶೋಕ್, ಸುಧಾಕರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇದೇ ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಗ್ಗೆ 5ರ ವರೆಗೆ ವೀಕೆಂಡ್ ಕರ್ಫ್ಯೂ (weekend Curfew) ಇರಲಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಾದ್ಯಂತ ಎರಡು ವಾರ ವೀಕೆಂಡ್ ಜಾರಿಯಲ್ಲಿರಲಿದೆ. ಇನ್ನು ಬೆಂಗಳೂರಲ್ಲಿ ಮಾತ್ರ ಎರಡು ವಾರ ಶಾಲೆ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಮುಂದಿನ ಎರಡು ವಾರಗಳು (ಜನವರಿ 6ರಿಂದ) 10 ಮತ್ತು 12ನೇ ತರಗತಿ ಹೊರತು ಪಡಿಸಿ ಉಳಿದ ಎಲ್ಲ ತರಗತಿಗಳನ್ನೂ ಬಂದ್ ಮಾಡಿ ಆನ್‌ಲೈನ್ ಮೂಲಕ ನಡೆಸಲು ನಿರ್ಧರಿಸಲಾಗಿದೆ.
ನಾವು ತೆಗೆದುಕೊಂಡ ತೀರ್ಮಾನಗಳನ್ನು ವೈಜ್ಞಾನಿವಾಗಿ ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಸರ್ಕಾರ, ಅಕ್ಕಪಕ್ಕದ ಮಹಾರಾಷ್ಟ್ರ, ಕೇರಳ, ತಮಿಳುನಾಡು ಗಳಲ್ಲಿ ತೆಗೆದುಕೊಂಡಿರುವ ತೀರ್ಮಾನಗಳನ್ನು ಪರಾಮರ್ಶಿಸಿದೆವು. ಒಮಿಕ್ರಾನ್ ಸೋಂಕು ಕೊವಿಡ್ಗಿಂತ 5 ಪಟ್ಟು ಜಾಸ್ತಿ ಆಗ್ತಿದೆ ಅಂತ ತಜ್ಞರು ವರದಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಪಸ್ತುತ 3048 ಮಂದಿಗೆ ಸೋಂಕು ಬಂದಿದೆ. 147 ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ನಮ್ಮ ರಾಜ್ಯದಲ್ಲಿ ಪಾಸಿಟಿವ್ ಪ್ರಕರಣ ಶೇ 3ಕ್ಕಿಂತ ಹೆಚ್ಚಾಗುತ್ತಿದೆ. 20ರಿಂದ 50 ವರ್ಷದವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ತಿದೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.
ಕಳೆದ 3 ದಿನಗಳಿಂದ ಕೊವಿಡ್ ಎರಡು ಮೂರು ದಿನಗಳಲ್ಲಿ ಡಬಲ್ ಆಗ್ತಿದೆ. 3ರಿಂದ 6, 6ರಿಂದ 9 ಸಾವಿರ ಆಗ್ತಿದೆ. ಐದಾರು ದಿನಗಳಲ್ಲಿ 10 ಸಾವಿರ ದಾಟುವ ಅಪಾಯ ಕಂಡುಬರುತ್ತಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ 10 ಸಾವಿರ ದಾಟಿದೆ ಎಂದು ಹೇಳಿದ್ದಾರೆ. ಶೇ 80ರಿಂದ 85ರಷ್ಟು ಸೋಂಕು ಮೆಟ್ರೊ ನಗರಗಳಲ್ಲಿ ಕಾಣಿಸಿಕೊಳ್ತಿದೆ. ದೇಶದೆಲ್ಲೆಡೆ ಇದೇ ವಿದ್ಯಮಾನ ವರದಿಯಾಗಿದೆ. ಅಮೆರಿಕದಲ್ಲಿಯೂ ಪ್ರಸ್ತುತ 5 ಕೋಟಿಗೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಪರಿಸ್ಥಿತಿ ನಿರ್ವಹಿಸಲು ಬೆಂಗಳೂರಿಗೆ ಒಂದು, ರಾಜ್ಯದ ಇತರೆಡೆಗೆ ಮತ್ತೊಂದು ನಿಯಮಾವಳಿ ರೂಪಿಸಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.