ಸದಸ್ಯರ ತೀವ್ರ ವಿರೋಧದ ನಡುವೆಯೂ ಶೇ.3ರಷ್ಟು ತೆರಿಗೆ ಹೆಚ್ಚಳಕ್ಕೆ ಪಾಲಿಕೆ ನಿರ್ಧಾರ

Published : Mar 03, 2026, 02:14 PM IST
Shocked

ಸಾರಾಂಶ

ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ, ಸದಸ್ಯರ ವಿರೋಧದ ನಡುವೆಯೂ ಶೇ.3ರಷ್ಟು ತೆರಿಗೆ ಹೆಚ್ಚಳಕ್ಕೆ ನಿರ್ಧರಿಸಲಾಯಿತು. ಘನತ್ಯಾಜ್ಯ ನಿರ್ವಹಣೆ ಯೋಜನೆಗೆ ರಾಜ್ಯ ಸರ್ಕಾರದ ಅನುದಾನ ವಿಳಂಬ ಮತ್ತು ಅಧಿಕಾರಿಗಳು ಮಾಹಿತಿ ನೀಡದಿರುವ ಬಗ್ಗೆಯೂ ತೀವ್ರ ಚರ್ಚೆ ನಡೆಯಿತು.

ಬೆಳಗಾವಿ: ಘನತ್ಯಾಜ್ಯ ನಿರ್ವಹಣೆ ಯೋಜನೆ, ತೆರಿಗೆ ಹೆಚ್ಚಳ ಹಾಗೂ ಮಾಹಿತಿ ನೀಡುವಲ್ಲಿ ವಿಳಂಬ ವಿಚಾರಗಳು ತೀವ್ರ ಚರ್ಚೆಗೆ ಗ್ರಾಸವಾಗಿ ಸೋಮವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಸಭೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು, ನಗರದಲ್ಲಿ ಘನ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಕೇಂದ್ರದಿಂದ ಮಂಜೂರಾದ ಸಿಟೀಸ್ 2.0 ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು..

ಅನುದಾನ ನೀಡಲು ವಿಳಂಬ

ಒಟ್ಟು ₹135 ಕೋಟಿ ವೆಚ್ಚದ ಯೋಜನೆಗೆ ಮಾರ್ಗಸೂಚಿಯಂತೆ ಶೇ.40ರಷ್ಟು ಹಣವನ್ನು ಕೇಂದ್ರ ಸರ್ಕಾರ ಶೇ.40ರಷ್ಟು ರಾಜ್ಯ ಸರ್ಕಾರ ಹಾಗೂ ಶೇ.20ರಷ್ಟು ಪಾಲಿಕೆ ನೀಡಬೇಕಿದೆ. ಕೇಂದ್ರ ಹಾಗೂ ಪಾಲಿಕೆ ತಮ್ಮ ಪಾಲಿನ ಹಣ ನೀಡಲು ಸಿದ್ಧವಾಗಿದ್ದರೂ ರಾಜ್ಯ ಸರ್ಕಾರ ಅನುದಾನ ನೀಡಲು ವಿಳಂಬ ಮಾಡುತ್ತಿದ್ದು, ಯೋಜನೆ ಜಾರಿಗೆ ಅಡಚಣೆ ಉಂಟಾಗಿದೆ ಎಂದರು.

ಕರ್ನಾಟಕದಲ್ಲಿ ಈ ಯೋಜನೆಗೆ ಅನುಮೋದನೆ ಪಡೆದ ಏಕೈಕ ನಗರ ಬೆಳಗಾವಿಯಾಗಿದ್ದು, ಅಗತ್ಯ ಪ್ರಕ್ರಿಯೆಗಳನ್ನು ಮಾ.31ರೊಳಗೆ ಪೂರ್ಣಗೊಳಿಸದಿದ್ದರೆ ಯೋಜನೆಯಿಂದ ವಂಚಿತವಾಗುವ ಸಾಧ್ಯತೆ ಇದೆ. ರಾಜ್ಯದ ಪಾಲಿನ ಹಣ ಸಿಗದಿದ್ದರೆ ಯೋಜನೆಯ ಗಾತ್ರವನ್ನು ₹135 ಕೋಟಿಯಿಂದ ₹75 ಕೋಟಿಗೆ ಇಳಿಸುವ ಪರಿಸ್ಥಿತಿ ಬರಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ತೆರಿಗೆ ಹೆಚ್ಚಳದ ವಿಷಯವೂ ಚರ್ಚೆ

ಜೊತೆಗೆ ಸಭೆಯಲ್ಲಿ ತೆರಿಗೆ ಹೆಚ್ಚಳದ ವಿಷಯವೂ ಚರ್ಚೆಗೆ ಕಾರಣವಾಯಿತು. ಅಜೆಂಡಾದಲ್ಲಿ ವಿಷಯ ಇರದಿದ್ದರೂ ಶೇ.3ರಷ್ಟು ತೆರಿಗೆ ಹೆಚ್ಚಳಕ್ಕೆ ತೀರ್ಮಾನ ಕೈಗೊಳ್ಳಲಾಯಿತು. ನಿಯಮಾನುಸಾರ ಶೇ.3ರಿಂದ 5ರಷ್ಟು ತೆರಿಗೆ ಹೆಚ್ಚಳ ಅಗತ್ಯವಿದೆ ಎಂದು ಕೌನ್ಸಿಲ್ ಕಾರ್ಯದರ್ಶಿ ಸಿದ್ದು ಹುಲ್ಲೊಳ್ಳಿ ಸಭೆಗೆ ತಿಳಿಸಿದರು. ಸದಸ್ಯರಾದ ಶಾಹೀದಖಾನ್‌ ಪಠಾಣ, ದಿನೇಶ ನಾಶಿಪುಡಿ, ರಮೇಶ ಸೊಂಟಕ್ಕಿ ಅವರು, ಅಜಂಡಾದಲ್ಲಿಲ್ಲದ ವಿಷಯವನ್ನು ಮಂಡಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ತೆರಿಗೆ ಹೆಚ್ಚಳಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮಾತನಾಡಿ, ಸರ್ಕಾರದ ನೋಟಿಸ್‌ಗೆ ಉತ್ತರಿಸಬೇಕಾಗುತ್ತದೆ. ಆದ್ದರಿಂದ ತೆರಿಗೆ ಹೆಚ್ಚಳ ಅನಿವಾರ್ಯ ಎಂದರು. ಪ್ರತಿಪಕ್ಷದ ಸದಸ್ಯರ ವಿರೋಧದ ನಡುವೆಯೇ ಶೇ.3 ರಷ್ಟು ತೆರಿಗೆ ಹೆಚ್ಚಳ ಜಾರಿಗೆ ತರುವ ನಿರ್ಧಾರ ಪ್ರಕಟಿಸಲಾಯಿತು. ಸಭೆಯಲ್ಲಿ ಸದಸ್ಯರು ಕೇಳಿದ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂತು. ಹತ್ತು ದಿನಗಳೊಳಗೆ ಮಾಹಿತಿ ನೀಡಬೇಕಾದ ನಿಯಮ ಪಾಲಿಸಲಾಗುತ್ತಿಲ್ಲ ಎಂದು ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳನ್ನು ಸಭೆಗೆ ಕರೆಸಿ ವಿಚಾರಣೆ ನಡೆಸಬೇಕು ಎಂಬ ಆಗ್ರಹ ವ್ಯಕ್ತವಾಯಿತು. ಅಧಿಕಾರಿಗಳು ಮಾಹಿತಿ ನೀಡಲು ಸಿದ್ಧವಿದ್ದೇವೆ ಎಂದು ಸ್ಪಷ್ಟನೆ ನೀಡಿದರೂ ಸದಸ್ಯರು ಅದನ್ನು ಸಮರ್ಪಕ ಉತ್ತರ ಎಂದು ಪರಿಗಣಿಸಲಿಲ್ಲ.

ಇದನ್ನೂ ಓದಿ: ಜೀವಂತ ರತಿ-ಮನ್ಮಥರನ್ನು ನಗಿಸಿ 13 ಲಕ್ಷ ಬಹುಮಾನ ಪಡೆಯಿರಿ; 67 ವರ್ಷದಿಂದ ಯಾರಿಗೂ ಸಾಧ್ಯವಾಗಿಲ್ಲ

ಈ ಎಲ್ಲ ವಿಚಾರಗಳಿಂದ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮೇಯರ್ ಮಂಗೇಶ ಪವಾರ ಅವರು, ಮಧ್ಯಪ್ರವೇಶಿಸಿ ವಿಷಯಗಳನ್ನು ಮರುಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಪ್ರತಿ ಮಂಗಳವಾರ ಇಡೀ ಊರಿಗೆ ಊರೇ ಖಾಲಿ ಖಾಲಿ; ಮನೆ, ಅಂಗಡಿ-ಮುಗ್ಗಟ್ಟುಗಳಿಗೆ ಬೀಗ!

PREV
Read more Articles on
click me!

Recommended Stories

ಶರಾವತಿ ಮುಳುಗಡೆ ಸಂತ್ರಸ್ತರು, ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹ : ಸಿಗಂದೂರು ಸೇತುವೆ ಮೇಲೆ ಪ್ರತಿಭಟನೆ
ಹೊಳೆನರಸೀಪುರ ದೇಗುಲದ ರಥದ ಬಟ್ಟೆ ವಿಚಾರಕ್ಕೆ ಕಿತ್ತಾಡಿಕೊಂಡ ರೇವಣ್ಣ-ಶ್ರೇಯಸ್ ಪಟೇಲ್, ಬರೇ ಹೂವಿನ ಅಲಂಕಾರದಲ್ಲೇ ಸಂಪನ್ನಗೊಂಡ ರಥೋತ್ಸವ