ಬೆಳಗಾವಿ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್‌ಗೆ ಸೋಲು; ಖದರ್ ತೋರಿಸಿದ ಸವದಿ ಸಹೋದರರು!

Published : Oct 26, 2025, 08:11 PM IST
Belagavi cooperative election

ಸಾರಾಂಶ

ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಚಿಕ್ಕೋಡಿ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಅಥಣಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ, ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಪ್ಯಾನೆಲ್ ಜಾರಕಿಹೊಳಿ ಸಹೋದರರ ಬೆಂಬಲಿತ ಪ್ಯಾನೆಲ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದೆ.

ಬೆಳಗಾವಿ (ಅ.26): ಜಿಲ್ಲೆಯ ಚಿಕ್ಕೋಡಿ ಹಾಗೂ ಅಥಣಿಯಲ್ಲಿ ನಡೆದ ಎರಡು ಪ್ರಮುಖ ಸಹಕಾರಿ ಸಂಘಗಳ ಚುನಾವಣಾ ಫಲಿತಾಂಶಗಳು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ವಿಶೇಷವಾಗಿ, ಅಥಣಿ ಕೃಷ್ಣಾ ಸಹಕಾರಿ ಸಕ್ಕರೆ ಸಂಘದ ಚುನಾವಣೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕ ರಮೇಶ್ ಜಾರಕಿಹೊಳಿ ಸಹೋದರರಿಗೆ ಭಾರಿ ಮುಖಭಂಗವಾಗಿದ್ದು, ಶಾಸಕ ಲಕ್ಷ್ಮಣ ಸವದಿ ಬೆಂಬಲಿತ 'ರೈತ ಸಹಕಾರಿ ಪ್ಯಾನೆಲ್' ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ.

ಕೃಷ್ಣಾ ಸಹಕಾರಿ ಸಂಘದಲ್ಲಿ ಸವದಿಗಳ ಅಬ್ಬರ:

ಅಥಣಿಯ ಕೃಷ್ಣಾ ಸರ್ಕಾರಿ ಸಕ್ಕರೆ ಸಂಘದ ನಿರ್ದೇಶಕರ ಆಯ್ಕೆ ಸಮರವು ಜಾರಕಿಹೊಳಿ ಸಹೋದರರ ವರ್ಸಸ್ ಲಕ್ಷ್ಮಣ ಸವದಿ ಬಣದ ನಡುವೆ ಅಗ್ನಿಪರೀಕ್ಷೆಯಾಗಿದ್ದು, ಸವದಿ ಬಣಕ್ಕೆ ಸ್ಪಷ್ಟ ಬಹುಮತ ಲಭಿಸಿದೆ. ಒಟ್ಟು 12 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ, ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ರೈತ ಸಹಕಾರಿ ಪ್ಯಾನೆಲ್ 12 ಸ್ಥಾನಗಳನ್ನೂ ಗೆದ್ದು 'ಪೆನಲ್ ಟು ಪೆನಲ್ ಕ್ಲೀನ್ ಸ್ವೀಪ್' ಮಾಡಿಕೊಂಡಿದೆ.

ಕೃಷ್ಣಾ ಸಹಕಾರಿ ಸಂಘದ ಹಾಲಿ ಅಧ್ಯಕ್ಷರೂ ಆಗಿರುವ ಪರಪ್ಪ ಸವದಿ ಅವರು ನೇತೃತ್ವದ ಪ್ಯಾನೆಲ್ ಈ ಭಾರಿ ಜಯಭೇರಿ ಬಾರಿಸಿದ್ದು, ಸ್ಪರ್ಧೆಯಲ್ಲಿದ್ದ ರಮೇಶ್ ಜಾರಕಿಹೊಳಿ ಬೆಂಬಲಿತ 'ಸ್ವಾಭಿಮಾನ ರೈತ ಪ್ಯಾನೆಲ್‌'ಗೆ ಬಾರಿ ಹಿನ್ನಡೆಯುಂಟಾಗಿದೆ. ಗೆಲುವು ಸಾಧಿಸಿದ ಅಭ್ಯರ್ಥಿಗಳು ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸವದಿ ಬೆಂಬಲಿಗರು ಅಥಣಿಯಲ್ಲಿ ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಗುಲಾಲ್ ಹಚ್ಚಿಕೊಂಡು ಸಂಭ್ರಮಿಸಿದರು.

ಹುಕ್ಕೇರಿ ಸಂಘದಲ್ಲಿ ಸತೀಶ್ ಜಾರಕಿಹೊಳಿಗೆ ಹಿನ್ನಡೆ

ಇದೇ ಸಂದರ್ಭದಲ್ಲಿ, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲೂ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮುಖಭಂಗ ಉಂಟಾಗಿದೆ ಎಂದು ವರದಿಯಾಗಿದೆ. ಈ ಎರಡು ಪ್ರಮುಖ ಫಲಿತಾಂಶಗಳು ಜಿಲ್ಲಾ ರಾಜಕಾರಣದಲ್ಲಿ ಹೊಸ ಸಮೀಕರಣಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಈ ಎಲ್ಲಾ ಫಲಿತಾಂಶಗಳ ಅಧಿಕೃತ ಘೋಷಣೆ ಚುನಾವಣೆ ಅಧಿಕಾರಿಗಳಿಂದ ಬರಬೇಕಿದೆ. ಆದರೆ, ಮತಗಳಿಕೆ ಮತ್ತು ಸ್ಪಷ್ಟ ಬಹುಮತದ ಆಧಾರದ ಮೇಲೆ ಲಕ್ಷ್ಮಣ ಸವದಿ ಅವರ ಬಣದ ಪ್ರಾಬಲ್ಯ ಸಾಬೀತಾಗಿದೆ. ಕೃಷ್ಣಾ ಸಂಘದ ಈ ಫಲಿತಾಂಶವು, ಸಕ್ಕರೆ ಕ್ಷೇತ್ರ ಮತ್ತು ರಾಜಕೀಯದಲ್ಲಿ ಸವದಿ ಅವರ ಬೆಳೆದುಬಂದಿರುವ ಪ್ರಭಾವವನ್ನು ಮತ್ತಷ್ಟು ದೃಢಪಡಿಸಿದೆ.

PREV
Read more Articles on
click me!

Recommended Stories

ಮೂಡಿಗೆರೆ: ಮನೆ ಭೋಗ್ಯ ವಿಚಾರಕ್ಕೆ ಜಗಳ, ಮಹಿಳೆಯ ಜಡೆ ಹಿಡಿದು ಎಳೆದು ಬಿಸಾಡಿ ಹಲ್ಲೆ.!
Bengaluru: ಹಾರ್ಟ್‌ ಅಟ್ಯಾಕ್‌ ಆಗಿ ರಸ್ತೆಯಲ್ಲಿ ಬಿದ್ದ ವ್ಯಕ್ತಿ, ಪತ್ನಿಯ ಗೋಳಾಟ ಕೇಳಿಯೂ ನೆರವಿಗೆ ಬಾರದ ಜನ!